ತ್ಯಾಗರ್ತಿ: ಮಹಾರಾಷ್ಟ್ರದ ಸೊಲ್ಲಾಪುರದ ವಿನೋದ್ ಅವರ ಸಂಚಾರಿ ಕುಲುಮೆಯು ಇಲ್ಲಿನ ಸುತ್ತಮುತ್ತಲ ಗ್ರಾಮಗಳ ಕೃಷಿಕರಿಗೆ ಆಸರೆಯಾಗಿದೆ.
ವಿನೋದ್ ಅವರ ಸಂಚಾರಿ ಕುಲುಮೆಯಿಂದಾಗಿ ಗ್ರಾಮೀಣ ಪ್ರದೇಶಗಳ ಜನರು ಕೃಷಿ ಸಲಕರಣೆಗಳ ದುರಸ್ತಿಗಾಗಿ ಪಟ್ಟಣ ಪ್ರದೇಶಗಳಿಗೆ ಅಲೆಯುವುದು ತಪ್ಪಿದೆ.
ಸಾಗರ ತಾಲ್ಲೂಕಿನ ಬೊಮ್ಮತ್ತಿ, ಮಂಚಾಲೆ, ತ್ಯಾಗರ್ತಿ, ಹೊಸಂತೆ, ನೀಚಡಿ ಮುಂತಾದ ಗ್ರಾಮಗಳಲ್ಲಿ ತಲಾ 2 ದಿನಗಳ ಕಾಲ ಉಳಿಯುವವಿನೋದ್ ಅವರು ಕತ್ತಿ, ಪಿಕಾಸಿ, ಕೊಡಲಿ ಕೃಷಿ ಉಪಕರಣಗಳನ್ನು ಬೆಂಕಿಯಲ್ಲಿ ಕಾಯಿಸಿ, ಬಡಿದು, ಹದಗೊಳಿಸಿ, ಹರಿತಗೊಳಿಸಿಕೊಡುತ್ತಾರೆ. ವಿನೋದ್ ಅವರ ಮಡದಿ ಅರ್ಚನಾ ಸಹಾ ಅವರೊಂದಿಗೆ ಕೆಲಸ ನಿರ್ವಹಿಸುತ್ತಾರೆ. ಪುಟಾಣಿ ಮಗುವಿನ ಪಾಲನೆ ಜತೆಗೆ ಕೃಷಿ ಸಲಕರಣೆಗಳನ್ನು ಹದಗೊಳಿಸಿಕೊಡುತ್ತಿರುವ ಇವರ ಕೆಲಸಕ್ಕೆ ಈ ಭಾಗದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶ್ರಮ, ಶ್ರದ್ಧೆ, ಆಸಕ್ತಿ ಇದ್ದರೆ ಸ್ವ ಉದ್ಯೋಗ ಕೈಗೊಂಡು ಉತ್ತಮ ಬದುಕು ಕಂಡುಕೊಳ್ಳಬಹುದು ಎಂಬುದಕ್ಕೆ ಮಹಾರಾಷ್ಟ್ರದಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿರುವ ವಿನೋದ್ ಅವರು ಇತರರಿಗೆ ಮಾದರಿ ಎನಿಸಿದ್ದಾರೆ.
5ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ವಿನೋದ್ ಅವರು ಕುಟುಂಬ ಸಮೇತ ಸರಕು ಸಾಗಾಣಿಕೆ ವಾಹನದಲ್ಲಿ ಕುಲುಮೆ ಕೆಲಸದ ಪರಿಕರಗಳನ್ನು ಹೊತ್ತು ಗ್ರಾಮ ಗ್ರಾಮಗಳಿಗೆ ತೆರಳಿ ಕೃಷಿ ಉಪಕರಣ ಹರಿತಗೊಳಿಸಿಕೊಡುತ್ತಿದ್ದಾರೆ.
‘ಮಳೆಗಾಲದ ನಂತರದಲ್ಲಿ ಕುಲುಮೆ ಕೆಲಸಕ್ಕೆ ನಮ್ಮಲ್ಲಿ ಬೇಡಿಕೆ ಇರುವುದಿಲ್ಲ. ಆದಕಾರಣ ಕರ್ನಾಟಕಕ್ಕೆ ಬರುತ್ತೇವೆ. ಒಂದೊಂದು ದಿನ ಒಂದೊಂದು ಊರಿನಲ್ಲಿದ್ದು ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತೇವೆ’ ಎನ್ನುತ್ತಾರೆ ವಿನೋದ್.
***
ಮನೆಯಲ್ಲಿ ಕಷ್ಟವಿದ್ದ ಕಾರಣ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಈ ವೃತ್ತಿಯಲ್ಲಿ ತೊಡಗಿಕೊಂಡ ನಂತರದಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ.
–ವಿನೋದ್, ಸಂಚಾರಿ ಕುಲುಮೆ ಮಾಲೀಕ
*
ಯುವಕರು ಮನೆಯಲ್ಲಿಯೇ ಕುಳಿತರೆ ಉದ್ಯೋಗ ದೊರೆಯುವುದು ಕಷ್ಟ. ನಾವೇ ಉದ್ಯೋಗದ ದಾರಿ ಕಂಡುಕೊಳ್ಳಬಹುದು ಎಂಬುದಕ್ಕೆ ಮಹಾರಾಷ್ಟ್ರದವರಾದ ವಿನೋದ್ ಅವರು ಹಲವರಿಗೆ ಪ್ರೇರಣೆಯಾಗಿದ್ದಾರೆ.
–ಸುಭಾಷ್ ಎಸ್. ಬಾಪಟ್, ನೀಚಡಿ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.