ADVERTISEMENT

ಹಳ್ಳಿಗಳಿಗೆ ನೀಡಿದ ನೆರವು ಗೆಲುವಿಗೆ ಸಹಕಾರಿ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 2:38 IST
Last Updated 3 ಡಿಸೆಂಬರ್ 2020, 2:38 IST

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಿದ್ದು, ಹಳ್ಳಿಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದೇ ಗುರಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧವಾಗಿದೆ. ಚುನಾವಣೆಗಳಲ್ಲಿ ಪಕ್ಷದ ಚಿಹ್ನೆ ಇಲ್ಲ. ಆದರೆ, ಬಿಜೆಪಿ ಆಶಯ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡುವ ಪಕ್ಷದ ಕಾರ್ಯಕರ್ತರಿಗೆ ಬೆಂಬಲ ನೀಡಲಾಗುವುದು. ಲೋಕಸಭೆ, ವಿಧಾನಸಬಾ ಕ್ಷೇತ್ರದ ಚುನಾವಣೆ ರೀತಿಯೇ ಗ್ರಾಮ ಪಂಚಾಯಿತಿ ಚುನಾವಣೆಗೂ ಆದ್ಯತೆ ನೀಡಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಿಜೆಪಿ ಪ್ರತಿ ಜಿಲ್ಲೆಯಲ್ಲೂ ಗ್ರಾಮಸ್ವರಾಜ್ ಸಮಾವೇಶಗಳನ್ನು ನಡೆಸುತ್ತಿದೆ. ಶಿವಮೊಗ್ಗ ಹಾಗೂ ಶಿಕಾರಿಪುರದಲ್ಲಿ ಈ ಸಮಾವೇಶ ನಡೆಯುತ್ತವೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗ್ರಾಮೀಣಾಭಿವೃದ್ಧಿಗೆ ಸಾಕಷ್ಟು ಅನುದಾನ ಖರ್ಚು ಮಾಡಿದ್ದಾರೆ. ಅಭಿವೃದ್ಧಿಯ ಜತೆಗೆ ಪಕ್ಷದ ಸಂಘಟನೆಯು ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ. ಆ ಮೂಲಕ ಬಿಜೆಪಿ ಯುವಕರಿಗೆ ಉದ್ಯೋಗ, ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ಬಿ.ಅಶೋಕ್ ನಾಯ್ಕ, ಬಿಜೆಪಿ ಮುಖಂಡರಾದ ಎಸ್.ಎಸ್. ಜ್ಯೋತಿಪ್ರಕಾಶ್, ಎಂ.ಬಿ. ಭಾನುಪ್ರಕಾಶ್, ಡಿ.ಎಸ್. ಅರುಣ್, ಪವಿತ್ರಾ ರಾಮಯ್ಯ, ಆರ್.ಕೆ. ಸಿದ್ದರಾಮಣ್ಣ, ಟಿ.ಡಿ. ಮೇಘರಾಜ್, ಮುನಿರಾಜ್, ಮಧುಸೂದನ್, ರುದ್ರೇಶ್, ವಿವೇಕಾನಂದ, ಸತೀಶ್, ಸುನಿತಾ ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.