ADVERTISEMENT

ಫೆಬ್ರುವರಿಯಲ್ಲಿ ವಿಮಾನನಿಲ್ದಾಣ ಲೋಕಾರ್ಪಣೆ: ಬಿ.ಎಸ್.ಯಡಿಯೂರಪ್ಪ

ಅಂತಿಮ ಹಂತದಲ್ಲಿ ರನ್‌ ವೇ ಕಾಮಗಾರಿ, ಎಟಿಸಿ ಕಟ್ಟಡ ಸಿದ್ಧ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:54 IST
Last Updated 27 ನವೆಂಬರ್ 2022, 2:54 IST
ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಶನಿವಾರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಪರಿಶೀಲಿಸಿದರು
ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಶನಿವಾರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಪರಿಶೀಲಿಸಿದರು   

ಶಿವಮೊಗ್ಗ: ಇಲ್ಲಿನ ಸೋಗಾನೆಯಲ್ಲಿ ಸಿದ್ಧವಾಗಿರುವ ವಿಮಾನ ನಿಲ್ದಾಣವನ್ನು ಫೆಬ್ರುವರಿ ಮೊದಲ ವಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕರೆಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ವಿಮಾನ ನಿಲ್ದಾಣದ ಕಾಮಗಾರಿ ಪರಿಶೀಲಿಸಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಂಕುಸ್ಥಾಪನೆ ನೆರವೇರಿ ಕೇವಲ ಎರಡು ವರ್ಷಗಳಲ್ಲಿ ಪೂರ್ಣಗೊಂಡ ಮೊದಲ ವಿಮಾನ ನಿಲ್ದಾಣದ ಶ್ರೇಯ ಶಿವಮೊಗ್ಗಕ್ಕೆ ಸಲ್ಲುತ್ತದೆ’ ಎಂದರು.

ವಿಮಾನನಿಲ್ದಾಣದಲ್ಲಿ ರನ್‌ ವೇ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. 3110 ಮೀಟರ್ ಉದ್ದ ಹಾಗೂ 45 ಮೀಟರ್ ಅಗಲ ಇರುವ ಈ ರನ್‌ ವೇ ರಾಜ್ಯದಲ್ಲಿ ಅತಿ ಉದ್ದದ ಎರಡನೇ ರನ್‌ ವೇ ಎಂದು ಹೇಳಿದರು. ವಿಮಾನ ನಿಲ್ದಾಣಕ್ಕೆ ಅಪ್ರೋಚ್ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ. 13.5 ಕಿ.ಮೀ ದೂರದ ಬೃಹತ್ ಕಾಂಪೌಂಡ್ ಗೋಡೆ ನಿರ್ಮಾಣವಾಗಿದೆ. 8 ಕಿ.ಮೀ ದೂರದ ಫೆರಿಪಿರಲ್ ರಸ್ತೆ ಸಿದ್ಧವಾಗಿದ್ದು, ಏಫ್ರಾನ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.

ADVERTISEMENT

ಟರ್ಮಿನಲ್ ಕಟ್ಟಡ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.

‘ಡಿಸೆಂಬರ್ ನಂತರ ಪ್ರಧಾನಿ ಭೇಟಿ ಮಾಡಿ ಲೋಕಾರ್ಪಣೆ ಸಮಾರಂಭದ ದಿನಾಂಕ ನಿಶ್ಚಯ ಮಾಡಲಾಗುವುದು. ಎರಡು ವರ್ಷಗಳಲ್ಲಿ ಕೆಲಸ ಪೂರ್ಣಗೊಳಿಸಲು ತೀವ್ರಗತಿಯಲ್ಲಿ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವೆ. ಭೂಮಿ ಕೊಟ್ಟವರಿಗೆ ಕೃತಜ್ಞತೆ ಸಲ್ಲಿಸುವೆ’ ಎಂದು ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಕೆ.ಬಿ.ಅಶೋಕ ನಾಯ್ಕಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.