ADVERTISEMENT

ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಸ್ಪಂದನೆ

ಅಡಿಕೆ ಸಹಕಾರ ಸಂಘಗಳ ಮಹಾಮಂಡಲದ ಸೂರ್ಯನಾರಾಯಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 16:25 IST
Last Updated 21 ಮಾರ್ಚ್ 2025, 16:25 IST
ಕೆ.ಎಂ.ಸೂರ್ಯನಾರಾಯಣ
ಕೆ.ಎಂ.ಸೂರ್ಯನಾರಾಯಣ   

ಸಾಗರ: ಅಡಿಕೆ ಬೆಳೆಗಾರರು, ಮಾರಾಟಗಾರರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಎದುರಿಸುತ್ತಿರುವ ಸಮಸ್ಯೆ ಪರಿಹಾರ ಸಂಬಂಧ ಸಂಘಟನೆಯ ನಿಯೋಗವು ರಾಜ್ಯದ ಕೃಷಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಲದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ತಿಳಿಸಿದ್ದಾರೆ.

ಮಾರುಕಟ್ಟೆ ಪ್ರಾಂಗಣದಲ್ಲಿ ಬಹು ಮಹಡಿ ಕಟ್ಟಡಗಳ ಮೇಲೆ ಹೊಸದಾಗಿ ಶುಲ್ಕ ವಿಧಿಸಲಾಗಿದೆ. ಸಹಕಾರ ಸಂಘಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಬೇಕು ಎಂಬ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ರಾಜ್ಯಾದ್ಯಂತ ಇರುವ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಗೋದಾಮುಗಳನ್ನು ನಿರ್ಮಿಸಲಾಗಿದೆ. ಆದರೆ ಈ ಗೋದಾಮುಗಳಿಗೆ ನಿಗದಿ ಪಡಿಸಿರುವ ಬಾಡಿಗೆ ದುಬಾರಿಯಾಗಿದೆ. ಬಾಡಿಗೆ ದರವನ್ನು ಮರು ಪರಿಷ್ಕರಿಸುವಂತೆ ನಮ್ಮ ಸಂಘದ ವತಿಯಿಂದ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ದಾಸ್ತಾನು ಇಟ್ಟಿರುವ ಅಡಿಕೆಯನ್ನು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ನೀಡಲಾಗುವ ಎಪಿಎಂಸಿ ಪರ್ಮಿಟ್ ನ ಅವಧಿಯನ್ನು ಎರಡು ದಿನದಿಂದ ನಾಲ್ಕು ದಿನಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಮಂಡಿಸಲಾಗಿದೆ. ಎಪಿಎಂಸಿ ವ್ಯಾಪ್ತಿಯಲ್ಲಿ ನೇರ ಖರೀದಿಯನ್ನು ನಡೆಸಲು ಅವಕಾಶ ನೀಡಬಾರದು. ಎಪಿಎಂಸಿಯೊಳಗಿನ ಕಟ್ಟಡಗಳಿಗೆ ಸ್ಥಳೀಯ ಸಂಸ್ಥೆಗಳು ವಿಧಿಸುವ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ನಿಯೋಗ ತೆರಳಿದ್ದ ಸಂದರ್ಭದಲ್ಲಿ ಮನವಿ ನೀಡಲಾಗಿದೆ ಎಂದು ಅವರು ಹೇಳಿದರು.

ಕೃಷಿ ಸಚಿವರನ್ನು ನಮ್ಮ ಸಂಘಟನೆ ಪ್ರಮುಖರು ಭೇಟಿ ಮಾಡಿದ್ದ ಸಂದರ್ಭದಲ್ಲಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಆರಗ ಜ್ಞಾನೇಂದ್ರ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೋಡ್ಗಿ, ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ ಸೇರಿದಂತೆ ಹಲವು ಪ್ರಮುಖರು ಜೊತೆಯಾಗಿದ್ದರು ಎಂದು ಅವರು ತಿಳಿಸಿದರು.

ತೋಟಗಾರ್ಸ್ ಅಧ್ಯಕ್ಷ ಕೆ.ಸಿ.ದೇವಪ್ಪ, ಮ್ಯಾಮ್ಕೋಸ್ ನಿರ್ದೇಶಕರಾದ ತಿಮ್ಮಪ್ಪ ಶ್ರೀಧರಪುರ, ಕೀರ್ತಿರಾಜ್ ಕೆ.ಕಾನಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.