ADVERTISEMENT

ಶಿವಮೊಗ್ಗ: ಕಾರ್ಖಾನೆ ಉಳಿಸಲು ಪ್ರಯತ್ನ: ರಾಘವೇಂದ್ರ

ಕಾರ್ಮಿಕರಿಗೆ ಆತಂಕ ಬೇಡ; ಸರ್ಕಾರ ವಿಐಎಸ್‌ಎಲ್‌ಗೆ ಅನ್ಯಾಯ ಮಾಡಲ್ಲ: ಸಂಸದರ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 5:27 IST
Last Updated 29 ಜನವರಿ 2023, 5:27 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ‘ಪ್ರತೀ ವರ್ಷ ₹ 80 ಕೋಟಿ ನಷ್ಟದ ಕಾರಣ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಸ್ಥಿತಿಗೆ ಹೋಗುತ್ತಿದೆ. ಆದರೆ ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ. ಕಾರ್ಖಾನೆಯ ಪುನಶ್ಚೇತನಕ್ಕೆ ಅಗತ್ಯವಿರುವ ಎಲ್ಲ ಪ್ರಯತ್ನ ನಡೆಸಿದ್ದೇವೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಯ ನೀಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತೀಯ ಉಕ್ಕು ಪ್ರಾಧಿಕಾರದಿಂದ (ಸೇಲ್‌) ಹಣ ಹಾಕಿಸಿ ಈ ಎರಡು ಮೂರು ವರ್ಷಗಳಿಂದ ಬಂಡವಾಳ ಹಾಕಿ ಜೀವ ತುಂಬುವ ಪ್ರಯತ್ನ ಮಾಡಿದ್ದೇನೆ. ಆದರೆ ಕಾರ್ಖಾನೆಯಲ್ಲಿ ಹಾಟ್‌ಮೆಟಲ್, ಲಿಕ್ವಿಡ್ ಸ್ಟೀಲ್, ಕ್ರೂಡ್ ಸ್ಟೀಲ್ ಉತ್ಪಾದನೆ ಶೂನ್ಯಕ್ಕೆ ಕುಸಿದಿದೆ. ಉಳಿದ ಘಟಕಗಳು ಸಾಮರ್ಥ್ಯದಷ್ಟು ಉತ್ಪಾದನೆ ಮಾಡುತ್ತಿಲ್ಲ. ಹೀಗಿದ್ದರೂ ಕಾರ್ಖಾನೆ ಮುಂದುವರಿಸಿಕೊಂಡು ಬಂದಿದ್ದೇವೆ’ ಎಂದರು.

‘ಅನೇಕ ವರ್ಷಗಳಿಂದ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಮೈಸೂರು ಮಹಾರಾಜರು ಆರಂಭಿಸಿದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಸ್ಥಿತಿಗೆ ಹೋಗುತ್ತಿರುವುದು ದುರ್ದೈವ’ ಎಂದು ಬೇಸರಿಸಿದರು.

ADVERTISEMENT

‘ಕಾರ್ಖಾನೆಗೆ ಜೀವ ತುಂಬುವ ಎಲ್ಲ ಪ್ರಯತ್ನ ಕೇಂದ್ರ ಸರ್ಕಾರ ಮಾಡಿದೆ. ಆದರೆ ಅದು ಸಫಲವಾಗಿಲ್ಲ. ಕಾರ್ಖಾನೆ ಅನೇಕ ದಶಕಗಳಿಂದ ನಷ್ಟದ ಸುಳಿಗೆ ಸಿಲುಕಿದೆ. ಅಂದಿನ ಯುಪಿಎ ಸರ್ಕಾರ ಸಹ ಸರ್ಕಾರಿ ಸೌಮ್ಯದ
ಸೇಲ್‌ಗೆ ವಹಿಸಿ ಕಾರ್ಖಾನೆಗೆ ಜೀವ ತುಂಬಲು ಪ್ರಯತ್ನಿಸಿತ್ತು. ಸಂಸದನಾಗಿ ನಾನು ಎರಡು ಬಾರಿ ಕೇಂದ್ರ ಸಚಿವರನ್ನು ಭದ್ರಾವತಿಗೆ ಕರೆಸಿ ಅಲ್ಲಿನ ಸ್ಥಿತಿಗತಿ ಮನವರಿಕೆ ಮಾಡಿಕೊಟ್ಟಿದ್ದೆ. ಅವರು ಸಹ ಕಾರ್ಖಾನೆಯ ಅಭಿವೃದ್ಧಿಗೆ ಭರವಸೆ ನೀಡಿದ್ದರೂ
ಸಾಧ್ಯವಾಗಲಿಲ್ಲ. ನಷ್ಟದಿಂದ
ಪಾರಾಗಲು ಖಾಸಗಿಯವರಿಗೆ ಕಾರ್ಖಾನೆ ವಹಿಸುವ ಪ್ರಯತ್ನವಾಗಿ 2019ರ ಜುಲೈನಲ್ಲಿ ಟೆಂಡರ್ ಕರೆಯಲಾಗಿತ್ತು. ಯಾವುದೇ ಕಂಪನಿ ಇದಕ್ಕೆ ಆಸಕ್ತಿ ತೋರಲಿಲ್ಲ. ಮತ್ತೆ ಟೆಂಡರ್ ಕರೆದರೂ ಬರಲಿಲ್ಲ’
ಎಂದರು.

‘ಜಗತ್ತಿನಾದ್ಯಂತ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇದು ನಮ್ಮ ದೇಶದಲ್ಲೂ ಇದೆ. ಇದನ್ನು ಸರಿದೂಗಿಸಲು 2018-19ರಲ್ಲಿ 28 ಕಂಪನಿಗಳಿಂದ ₹ 85 ಸಾವಿರ ಕೋಟಿ ಮೌಲ್ಯದ ಸರ್ಕಾರದ ಷೇರು ವಾಪಸ್‌
ಪಡೆಯಲಾಯಿತು. 2019-20ರಲ್ಲಿ 15 ಕಂಪನಿಗಳಿಂದ
₹ 15 ಸಾವಿರ ಕೋಟಿ, 2020-21ರಲ್ಲಿ 18 ಕಂಪನಿಗಳಿಂದ ₹ 32 ಸಾವಿರ ಕೋಟಿ, 2021-22ರಲ್ಲಿ 10 ಕಂಪನಿಗಳಿಂದ ₹ 13,500 ಕೋಟಿ ಹಾಗೂ 2022-23ರಲ್ಲಿ ಎಂಟು ಕಂಪನಿಗಳಿಂದ ₹ 38 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ವಾಪಸ್ ಪಡೆಯಲಾಗಿದೆ’ ಎಂದು ಹೇಳಿದರು.

‘ದೇಶದಲ್ಲಿ ನಷ್ಟದಲ್ಲಿರುವ ಸುಮಾರು 80 ಕಾರ್ಖಾನೆಗಳನ್ನೂ ಮುಚ್ಚಲಾಗುತ್ತಿದೆ. ಇದಕ್ಕೆ ವಿಐಎಸ್‌ಎಲ್ ಹೊರತಾಗಿಲ್ಲ. ಕೇಂದ್ರ ಸರ್ಕಾರ ಬಂಡವಾಳ ಹೂಡುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಜಿಲ್ಲೆಯ ಆಸ್ತಿಯಾಗಿರುವ ಈ ಕಾರ್ಖಾನೆ ಮುಚ್ಚುವ ಸ್ಥಿತಿಯಲ್ಲಿದ್ದರೂ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಬಂದಿದೆ. ವಿಮಾನ ನಿಲ್ದಾಣ ಉದ್ಘಾಟನೆ ನಂತರ ವಿಮಾನದ ಹಾರಾಟದಿಂದ ಬಂಡವಾಳ ಹೂಡಿಕೆದಾರರು ಕಾರ್ಖಾನೆಗೆ ಬಂಡವಾಳ ಹೂಡಲು ಮುಂದೆ ಬರಬಹುದು ಎಂಬ ಆತ್ಮ ವಿಶ್ವಾಸವಿದೆ ಹಾಗೂ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಬಲವಾಗಿರುತ್ತದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಬಿ.ಕೆ.ಶ್ರೀನಾಥ್, ಎಸ್.ಎನ್.ಚನ್ನಬಸಪ್ಪ, ಶಿವರಾಜ್, ಧರ್ಮಪ್ರಸಾದ್, ರಮೇಶ್, ಚಂದ್ರಶೇಖರ್, ವಿನ್ಸೆಂಟ್, ಕೆ.ವಿ.ಅಣ್ಣಪ್ಪ ಇದ್ದರು.

ಸಿಎಂ ಭೇಟಿಗೆ ನಿಯೋಗ ಶೀಘ್ರ

’ನಾವು ಕೈಕಟ್ಟಿ ಕುಳಿತಿಲ್ಲ ಎಲ್ಲ ರೀತಿಯ ಪ್ರಯತ್ನ. ಬೇರೆ ಬೇರೆ ದಾರಿಗಳನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ. ಈಗಲೂ ಕೂಡ ಸ್ಥಳೀಯವಾಗಿ ಉದ್ಯಮಿಗಳನ್ನು ಸಂಪರ್ಕಿಸಿ ಬಂಡವಾಳ ಹೂಡಿಕೆಗೆ ಪ್ರಯತ್ಬ ನಡೆಸಿದ್ದೇನೆ. ಕಾರ್ಖಾನೆ ಮುಚ್ಚಿದ ಮೇಲೂ ಖಾಸಗಿಯವರ ಸಹಭಾಗಿತ್ವದಲ್ಲಿ ಮತ್ತೆ ತೆರೆಯುವ ಪ್ರಯತ್ನ ಮಾಡಲಾಗುವುದು‘ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ವಿಐಎಸ್‌ಎಲ್‌ಗೆ ರಾಜ್ಯದಲ್ಲಿಯೇ ಹೂಡಿಕೆದಾರರ ಆಕರ್ಷಿಸಲು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗಿದೆ. ಆ ಬಗ್ಗೆ ಶೀಘ್ರ ಜಿಲ್ಲೆಯಿಂದ ನಿಯೋಗ ತೆರಳಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

‘ನೌಕರರ ಹಿತಕ್ಕೆ ಸಂಬಂಧಿಸಿದಂತೆ ಯಾರೂ ಗಾಬರಿ ಆಗುವುದು ಬೇಡ. ನಿಮ್ಮ ಜೊತೆ ನಾವು ಇದ್ದೇವೆ. ಕಾರ್ಖಾನೆ ಮುಚ್ಚುವ ಬಗ್ಗೆ ಇನ್ನೂ ಅಧಿಕೃತ ಆದೇಶ ಬಂದಿಲ್ಲ. ನೌಕರರ ಹಿತಕ್ಕೆ ಸಂಬಂಧಿಸಿದಂತೆ ಏನೇನು ಮಾಡಬಹುದು ಎಂಬುದನ್ನು ಚರ್ಚಿಸಿದ್ದೇವೆ. ಕಾರ್ಮಿಕರ ಹಿತದೃಷ್ಟಿಯಿಂದ ರಾಜಕೀಯ ಕೆಸರೆರಚಾಟಕ್ಕೆ ಅವಕಾಶ ಬೇಡ. ಚುನಾವಣೆ ಹತ್ತಿರ ಬಂದಿದೆ. ಹೀಗಾಗಿ ಯಾವುದೇ ಪಕ್ಷವನ್ನು ದೂಷಿಸುವುದಿಲ್ಲ. ಕಾರ್ಖಾನೆ ಉಳಿಸಲು ಮತ್ತೆ ಪತ್ರ ವ್ಯವಹಾರ ಹಾಗೂ ಸಭೆಗಳ ನಡೆಸಲಾಗುವುದು’ ಎಂದು ಹೇಳಿದರು.

ಎಲ್ಲವೂ ಮುಗಿದುಹೋಗಿದೆ ಎಂದು ಯಾರೂ ಭಾವಿಸುವುದು ಬೇಡ. ಭದ್ರಾವತಿಯಲ್ಲಿ ಭೂಮಿ ಇದೆ. ಪರ್ಯಾಯ ಉದ್ಯಮಗಳನ್ನು ತಂದು ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಬಹುದು. ಯಾರೂ ಧೃತಿಗೆಡುವುದು ಬೇಡ.

–ಬಿ.ವೈ.ರಾಘವೇಂದ್ರ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.