ADVERTISEMENT

ಆಯನೂರು, ಕುಂಸಿ: 75 ಕೆರೆಗಳ ಏತ ನೀರಾವರಿಗೆ ಅಸ್ತು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 16:26 IST
Last Updated 5 ಆಗಸ್ಟ್ 2019, 16:26 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ: ಕುಂಸಿ, ಆಯನೂರು, ಹಾರನಹಳ್ಳಿ ಹೋಬಳಿಯ 75 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ.

ಭದ್ರಾ, ತುಂಗಾ ಜಲಾಶಯಗಳು ಇದ್ದರೂ ಜಿಲ್ಲೆಯ ರೈತರಿಗೆ ಪ್ರಯೋಜನವಾಗಿಲ್ಲ. ಸೂಕ್ತ ನೀರಾವರಿ ಸೌಲಭ್ಯ ದೊರಕಿರಲಿಲ್ಲ. ಮುಖ್ಯಮಂತ್ರಿಯಾದ ವಾರದಲ್ಲೇ ಯಡಿಯೂರಪ್ಪ ಅವರು ₨ 250 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗೆ ಅನುಮತಿ ನೀಡಿದ್ದಾರೆ. ಶೀಘ್ರ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೂರು ಹೋಬಳಿಗಳ 75 ಕೆರೆಗಳಿಗೆ ತುಂಗಾ ನದಿಯಿಂದ 0.75 ಟಿಎಂಸಿ ನೀರು ತುಂಬಿಸಲಾಗುವುದು. ಕೆರೆಗಳನ್ನು ತುಂಬಿಸಿದ ನಂತರ ಆ ನೀರು ಅಂಜನಾಪುರ ಜಲಾಶಯ ತಲುಪುವುದು. ಇದರಿಂದ ಶಿಕಾರಿಪುರ ತಾಲ್ಲೂಕಿನ ಜಮೀನುಗಳಿಗೂ ಪ್ರಯೋಜನವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

3 ಹೋಬಳಿಗಳ 145 ಹಳ್ಳಿಗಳಿಗೆ ನೀರಾವರಿ ಯೋಜನೆ ಸೌಲಭ್ಯ ದೊರೆಯಲಿದೆ. ಈ ಯೋಜನೆ ಜಾರಿಗೆ ಸಂಸದ ಬಿ.ವೈ.ರಾಘವೇಂದ್ರ ಅವ ಶ್ರಮವಿದೆ. ಸೂಗೂರು ಬಳಿ ₹10 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲು ಅನುಮೋದನೆ ದೊರೆತಿದೆ. ಈ ಕಾಮಗಾರಿಯೂ ಶೀಘ್ರ ಆರಂಭಗೊಳ್ಳಲಿದೆ ಎಂದರು.

ವಿಶೇಷ ಸ್ಥಾನಮಾನ ರದ್ದು ಐತಿಹಾಸಕ ಕ್ರಮ:ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡುವ ಮೂಲಕ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ ಎಂದು ಆಯನೂರು ಮಂಜುನಾಥ್ ಶ್ಲಾಘಿಸಿದರು.

ಜಮ್ಮು ಮತ್ತು ಕಾಶ್ಮೀರ ಈಗ ಸಂಪೂರ್ಣ ಸ್ವಾತಂತ್ರ್ಯ ಪಡೆದಿದೆ. ಸಂವಿಧಾನದ 370ನೇ ವಿಧಿ, 35(ಎ)ನಿಯಮ ರದ್ದುಗೊಳಿಸಲಾಗಿದೆ. ಲಡಾಕ್ ವಿಭಜಿಸಿ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲಾಗಿದೆ. ಅಲ್ಲಿನ ಉಗ್ರರ ಉಪಟಳ ನಿಯಂತ್ರಿಸಲು ಇಂತಹ ನಿರ್ಧಾರ ಸಹಕಾರಿಯಾಗಲಿದೆ. ಸಂಸತ್ ಜಾರಿಗೆ ತಂದ ಎಲ್ಲ ಕಾನೂನುಗಳೂ ಕಾಶ್ಮೀಕರಕ್ಕೂ ಅನ್ವಯವಾಗಲಿವೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಆ ಪ್ರದೇಶದಲ್ಲಿ ಉದ್ಯಮಗಳೂ ಬರಲಿವೆ ಎಂದರು.

ಕೇಂದ್ರದ ಈ ದಿಟ್ಟ ನಿರ್ಧಾರದಿಂದ ಅಂಬೇಡ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೂ ಶಾಂತಿ ಸಿಕ್ಕಿದೆ. ಜಿಲ್ಲೆಯ ಹಲವು ಮುಖಂಡರು ಕಾಶ್ಮೀರ ಸ್ವಾತಂತ್ರ್ಯಕ್ಕೆ ಧ್ವನಿ ಎತ್ತಿದ್ದರು. ಹಿಂದೆ ಅಲ್ಲಿಗೆ ತೆರಳಿ ಹೋರಾಟ ನಡೆಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಶಂಕರ್, ಎನ್.ಜೆ.ರಾಜಶೇಖರ್, ಬಿಳಕಿ ಕೃಷ್ಣಮೂರ್ತಿ, ನಾಗರಾಜ್, ಎಚ್.ಸಿ.ಬಸವರಾಜಪ್ಪ, ಮಧುಸೂದನ್, ಹಿರಣ್ಣಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.