ಶಿವಮೊಗ್ಗ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಕ್ಲೀನ್ ಚಿಟ್ ಪಡೆಯಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಸರ್ಕಾರಕ್ಕೆ ಮಾನ– ಮರ್ಯಾದೆ ಇದ್ದರೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಕಾಲ್ತುಳಿತದ ದುರ್ಘಟನೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಎ–1, ಎ–2 ಹಾಗೂ ಎ–3 ಆರೋಪಿಗಳು. ಆದರೆ, ಲೋಪ ಮುಚ್ಚಿ ಹಾಕಲು ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಿದ್ದಾರೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಆರ್‌ಸಿಬಿ ಜನಪ್ರಿಯತೆಯಡಿ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪೈಪೋಟಿಗಿಳಿದಿದ್ದರು. ಹೀಗಾಗಿಯೇ ವಿಧಾನಸೌಧ ಆವರಣದ ಕಾರ್ಯಕ್ರಮವನ್ನು ಒಬ್ಬರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ವಿಜಯೋತ್ಸವವನ್ನು ಮತ್ತೊಬ್ಬರು ಹಂಚಿಕೊಂಡಿದ್ದರು.
ಅದೇ ಕಾರಣಕ್ಕೆ ‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರ್ಘಟನೆಗೆ ನಾನು ಜವಾಬ್ದಾರ ಅಲ್ಲ’ ಎಂದು ಸಿ.ಎಂ ಹೇಳುತ್ತಿದ್ದಾರೆ. ಪರೋಕ್ಷವಾಗಿ ಉಪಮುಖ್ಯಮಂತ್ರಿ ಕಡೆ ಬೊಟ್ಟು ಮಾಡುತ್ತಿದ್ದಾರೆ ಎಂದರು.
11 ಜನ ಅಮಾಯಕು ಸಾವಿಗೀಡಾದ ಪ್ರಕರಣವನ್ನು ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ಪರಿಗಣಿಸಿದೆಯೋ ಗೊತ್ತಿಲ್ಲ. ಆ ಪಕ್ಷದ ಹೈಕಮಾಂಡ್ ಪ್ರಬಲವಾಗಿದ್ದರೆ, ರಾಜ್ಯದ ಜನರ ಆಕ್ರೋಶವನ್ನು ಗ್ರಹಿಸಿ ಇಷ್ಟೊತ್ತಿಗೆ ಸಿ.ಎಂ, ಡಿ.ಸಿ.ಎಂ ಹಾಗೂ ಗೃಹ ಸಚಿವರ ರಾಜೀನಾಮೆ ಪಡೆಯಬೇಕಿತ್ತು. ಆದರೆ, ರಾಜ್ಯದಲ್ಲಿ ಪ್ರಬಲರೇ ಅಧಿಕಾರದಲ್ಲಿ ಜಂಡಾ ಹೂಡಿದ್ದಾರೆ. ಇಲ್ಲಿ ಬಾಲವೇ ದೇಹವನ್ನು ಅಲುಗಾಡಿಸುತ್ತಿದೆ. ಹೀಗಾಗಿ ಸರ್ಕಾರ ಹುಚ್ಚು ಕುದುರೆಯಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹಿರಂಗ ಪತ್ರ:
ರಾಜ್ಯದ ಇತಿಹಾಸದಲ್ಲಿ ಜೂನ್ 4 ಕರಾಳ ದಿನ. ಆ ದುರ್ಘಟನೆಯ ನೈತಿಕ ಹೊಣೆ ಹೊತ್ತು ಸಿ.ಎಂ, ಡಿ.ಸಿ.ಎಂ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು. ಆ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿರುವೆ ಎಂದು ವಿಜಯೇಂದ್ರ ಪತ್ರ ಪ್ರದರ್ಶಿಸಿದರು.
ರಾಜೀನಾಮೆಯ ಬೇಡಿಕೆಗೆ ಸ್ಪಂದನೆ ದೊರೆತರೆ ಸರಿ. ಇಲ್ಲದಿದ್ದರೆ ಸರ್ಕಾರವನ್ನು ಕಿತ್ತು ಹಾಕಲು ಜೂನ್ 13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಆ ದಿನ ಸಿ.ಎಂ ಮನೆಗೆ ಮುತ್ತಿಗೆ ಕೂಡ ಹಾಕಲಾಗುವುದು ಎಂದು ತಿಳಿಸಿದರು.
ಜೂನ್ 16ರಂದು ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಪಕ್ಷದಿಂದ ಪ್ರತಿಭಟನೆ ನಡೆಯಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.