ADVERTISEMENT

ದಲಿತ ಚಳವಳಿಯ ಹರಿಕಾರ ಬಾಬೂಜಿ: ಎ.ಕೆ. ತಿಮ್ಮಪ್ಪ

ಜಗಜೀವನ್‌ರಾಂ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 12:45 IST
Last Updated 5 ಏಪ್ರಿಲ್ 2019, 12:45 IST
ಶಿವಮೊಗ್ಗದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನ್‌ರಾಂ ಅವರ 112ನೇ ಜನ್ಮ ದಿನಾಚರಣೆಯನ್ನು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಉದ್ಘಾಟಿಸಿದರು
ಶಿವಮೊಗ್ಗದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನ್‌ರಾಂ ಅವರ 112ನೇ ಜನ್ಮ ದಿನಾಚರಣೆಯನ್ನು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಉದ್ಘಾಟಿಸಿದರು   

ಶಿವಮೊಗ್ಗ: ಸರ್ಕಾರ ನೀಡುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಮತ್ತೊಬ್ಬರ ಮನೆಯಲ್ಲಿ ಜೀತದಾಳಾಗಿ ಮಾಡಬೇಡಿ ಎಂದು ಜಗಜೀವನ್‌ರಾಂ ಅವರು ಅಂದೇ ಶಿಕ್ಷಣದ ಮಹತ್ವ ಸಾರಿದ್ದರುಎಂದುಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ.ಕೆ. ತಿಮ್ಮಪ್ಪ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಶುಕ್ರವಾರಆಯೋಜಿಸಿದ್ದ ಬಾಬೂ ಜಗಜೀವನ್‌ರಾಂ ಅವರ112ನೇ ಜನ್ಮದಿನಾಚರಣೆಯಲ್ಲಿ ಅವರುಮಾತನಾಡಿದರು.

ದಲಿತರು ಸಮಾಜದಲ್ಲಿ ನೆಮ್ಮದಿಯಾಗಿ ಬದುಕಬೇಕು. ಯಾರದೇ ಶೋಷಣೆಗೆ ಒಳಗಾಗಬಾರದು ಎಂದರೆ ಶಿಕ್ಷಣ ಪಡೆಯಬೇಕು ಎನ್ನುತ್ತಿದ್ದರು. ಶೋಷಿತ ವರ್ಗಗಳ ಸಂಘ ಸ್ಥಾಪಿಸಿದ್ದರು. ಆ ಮೂಲಕ ಶೋಷಿತ ವರ್ಗಗಳಿಗೆ ಸಹಕಾರ ನೀಡುತ್ತಿದ್ದರು ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಕೆ.ಎ. ದಯಾನಂದ, ‘ದೇಶದಲ್ಲಿ ಇಂದಿಗೂ ದಲಿತರ ಮೇಲಿನ ದೌರ್ಜನ್ಯ ನಡೆಯುತ್ತಿದೆ. ನೂರು ವರ್ಷಗಳ ಹಿಂದಿನ ತೀವ್ರತೆ ಎಷ್ಟಿರಬಹುದು ಎಂದು ಊಹಿಸಿದರೆ ಅದರ ಕರಾಳ ಮುಖದ ಅರಿವಾಗುತ್ತದೆ. ಅಂಬೇಡ್ಕರ್ ಹಾಗೂ ಬಾಬೂ ಜಗಜೀವನ್‌ರಾಂ ದಲಿತ ಚಳವಳಿಗಳ ಎರಡು ಕಣ್ಣುಗಳಿದ್ದಂತೆ. ಇಂದು ನಾವು ಹೋರಾಟ ಹಾಗೂ ಚಳವಳಿ ಎಂದು ದೌರ್ಜನ್ಯಗಳ ವಿರುದ್ಧ ದ್ವನಿ ಎತ್ತುವುದು ದೊಡ್ಡದಲ್ಲ. ಅದನ್ನು ಬಾಬೂಜಿ ಹಿಂದೆಯೇ ಮಾಡಿದ್ದರು. ಅವರ ಹೋರಾಟ ಎಲ್ಲರಿಗೂ ಸ್ಫೂರ್ತಿ’ ಎಂದರು.

‘ಹಸಿರು ಕ್ರಾಂತಿಯ ಸಂದರ್ಭವನ್ನು ನೆನಪಿಸುವಾಗ ಆಗಿನ ಪ್ರಧಾನಿ ಹಾಗೂ ವಿಜ್ಞಾನಿಗಳ ಬಗ್ಗೆಯಷ್ಟೇ ನಾವು ಸ್ಮರಿಸುತ್ತೇವೆ. ಆದರೆ, ಆಗಿನ ಕೃಷಿ ಸಚಿವರಾಗಿದ್ದ ಬಾಬೂಜಿ ಅವರನ್ನು ಮರೆಯುತ್ತಿದ್ದೇವೆ. ಹಾಗೆಯೇ ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಸಿಕ್ಕಂತಹ ವಿಜಯಕ್ಕೆಅಂದಿನ ಪ್ರಧಾನಿಯನ್ನಷ್ಟೇ ನೆನೆಯುತ್ತೇವೆ. ಅಂದಿನ ರಕ್ಷಣಾ ಸಚಿವರಾಗಿದ್ದ ಜಗಜೀವನ್‌ರಾಂ ಅವರನ್ನು ಮರೆತಿದ್ದೇವೆ. ಅವರ ಇಂತಹ ಹಲವು ಕೊಡುಗೆಗಳನ್ನು ಮರೆಯುತ್ತಿರುವುದು ವಿಷಾದದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಸಚಿವ ಸ್ಥಾನಕ್ಕೇರಿ ದೀರ್ಘಾವಧಿಕೇಂದ್ರ ಸಚಿವರಾಗಿದ್ದಂತಹ ಏಕೈಕ ವ್ಯಕ್ತಿ ಅವರು. ಉತ್ತಮ ವಾಗ್ಮಿಗಳಾಗಿದ್ದರು. ಅವರು ಮಾಡಿದಂತಹ ಸ್ವಾಗತ ಭಾಷಣವನ್ನು ಮೆಚ್ಚಿ ಬನಾರಸ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣಕ್ಕಾಗಿ ಪ್ರವೇಶ ನೀಡಲಾಯಿತು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ. ಶಿವರಾಮೇಗೌಡ, ‘ಜಗಜೀವನ್‌ರಾಂ ಅವರಿಗೆ ಅಪಾರ ಅನುಭವ ಹಾಗೂ ಬುದ್ಧಿಶಕ್ತಿ ಇತ್ತು. ಹಾಗಾಗಿಯೇ ಅವರಿಗೆ ಪದವಿಗಳು ದೊರೆತವು. ಅವರು ವ್ಯವಸ್ಥೆಯ ಒಳಗೆ ತಪ್ಪುಗಳನ್ನು ಸೌಮ್ಯವಾದಿಯಾಗಿಯೇ ವಿರೋಧಿಸಿದ್ದರು’ ಎಂದು ತಿಳಿಸಿದರು.

ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.