ತೀರ್ಥಹಳ್ಳಿ: ತಾಲ್ಲೂಕಿನಾದ್ಯಂತ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 169 ‘ಎ’ ಮಾರ್ಗದಲ್ಲಿ ಭೂಕುಸಿತವಾಗಿದ್ದು, ತಡೆಗೋಡೆ ಬೀಳುವ ಹಂತಕ್ಕೆ ತಲುಪಿದೆ.
ಬಾಳೇಬೈಲು ಸೇತುವೆ ಸಂಪರ್ಕದ ರಸ್ತೆಯನ್ನು 2024ರ ಫೆಬ್ರುವರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಉದ್ಘಾಟಿಸಿದ್ದರು. ಬೃಹತ್ ಗಾತ್ರದ ಗುಡ್ಡವನ್ನು ಸೀಳಿ ರಸ್ತೆಯನ್ನು ನಿರ್ಮಿಸಲಾಗಿತ್ತು. ಗುಡ್ಡ ಜರಿಯದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುಡ್ಡಕ್ಕೆ ಅಡ್ಡಲಾಗಿ ಸಿಮೆಂಟ್ ತಡೆಗೋಡೆ ನಿರ್ಮಿಸಿತ್ತು. ತಡೆಗೋಡೆ, ಚರಂಡಿ ಬಿರುಕು ಬಿಟ್ಟಿದ್ದು ಮುಂಜಾಗ್ರತೆ ಕ್ರಮವಾಗಿ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಆಗುಂಬೆಯಲ್ಲಿ ಪ್ರಸ್ತುತ ಸಾಲಿನಲ್ಲಿ ದಾಖಲೆಯ ಮಳೆಯಾಗಿದೆ. ಮಂಗಳವಾರ ಬೆಳಿಗ್ಗೆ 8.30ಕ್ಕೆ 34.2 ಸೆಂ.ಮೀ. ಮಳೆಯಾಗಿದೆ. 2023ನೇ ಸಾಲಿನಲ್ಲಿ ಗರಿಷ್ಠ 22 ಸೆಂ.ಮೀ. ಮಳೆಯಾಗಿತ್ತು. ಮೇಗರವಳ್ಳಿ 19.8, ಮಾಳೂರು 16.4 ತೀರ್ಥಹಳ್ಳಿ ಪಟ್ಟಣದಲ್ಲಿ 15, ಆರಗ 13.7, ಮೃಗವಧೆ 12.6 ಸೆಂ.ಮೀ. ಮಳೆಯಾಗಿದೆ.
ಭಾರಿ ಪ್ರಮಾಣದಲ್ಲಿ ಗಾಳಿ ಬೀಸುತ್ತಿರುವುದರಿಂದ ಹುರುಳಿ ಗ್ರಾಮದ ಶಾರದಮ್ಮ ಅವರ ಮನೆಯ ಗೋಡೆಗೆ ಹಾನಿಯಾಗಿದೆ. ಮಾಲತಿ ನದಿ ಉಕ್ಕಿ ಹರಿಯುತ್ತಿದ್ದು ನಾಬಳ ಸೇತುವೆ ಮೇಲೆ ಪ್ರವಾಹ ಬಂದಿದೆ. ಬಿದರಗೋಡು-ಗುಡ್ಡೇಕೇರಿ ಸಂಪರ್ಕ ಕಡಿತಗೊಂಡಿದೆ. ಪಟ್ಟಣದಲ್ಲಿ ತುಂಗಾ ನದಿ ಭೋರ್ಗರೆದು ಹರಿಯುತ್ತಿದ್ದು ಐತಿಹಾಸಿಕ ಹಿನ್ನಲೆಯುಳ್ಳ ರಾಮಮಂಟಪ ಮುಚ್ಚುವ ಹಂತಕ್ಕೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.