ADVERTISEMENT

‘ಅನುಭವ ಮಂಟಪ’ ನಿರ್ಮಾತೃ ಗುರು ಬಸವಣ್ಣ: ಸುಂದರೇಶ

-

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:34 IST
Last Updated 9 ಮೇ 2025, 15:34 IST
ಶಿವಮೊಗ್ಗದ ರಾಷ್ಟ್ರೀಯ ಬಸವದಳ ಟ್ರಸ್ಟ್‌ನ ಬಸವ ಮಂಟಪದಲ್ಲಿ ಈಚೆಗೆ ಆಯೋಜಿಸಿದ್ದ ಗುರು ಬಸವಣ್ಣನವರ 892ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್  ಉದ್ಘಾಟಿಸಿದರು. 
ಶಿವಮೊಗ್ಗದ ರಾಷ್ಟ್ರೀಯ ಬಸವದಳ ಟ್ರಸ್ಟ್‌ನ ಬಸವ ಮಂಟಪದಲ್ಲಿ ಈಚೆಗೆ ಆಯೋಜಿಸಿದ್ದ ಗುರು ಬಸವಣ್ಣನವರ 892ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್  ಉದ್ಘಾಟಿಸಿದರು.    

ಶಿವಮೊಗ್ಗ: ಜಗತ್ತಿನ ಮೊಟ್ಟ ಮೊದಲ ಸಂಸತ್ತಿನ ನಿರ್ಮಾತೃ ಗುರು ಬಸವಣ್ಣನವರು ಪ್ರಜಾಪ್ರಭುತ್ವ ತತ್ವ ಮೌಲ್ಯಗಳ ಪ್ರತಿಪಾದಕರು ಎಂದು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

ಶಿವಮೊಗ್ಗದ ರಾಷ್ಟ್ರೀಯ ಬಸವದಳ ಟ್ರಸ್ಟ್‌ನ ಬಸವ ಮಂಟಪದಲ್ಲಿ ಈಚೆಗೆ ಆಯೋಜಿಸಿದ್ದ ಗುರು ಬಸವಣ್ಣನವರ 892ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಬಸವಣ್ಣನವರು ಜಗತ್ತು ಕಂಡ ಶ್ರೇಷ್ಠ ಮಾನವತಾವಾದಿ. ಅವರು ನೀಡಿರುವ ಕಾಯಕ ತತ್ವ ಸಂದೇಶಗಳು ಲೋಕಮಾನ್ಯ ಎನಿಸಿದ್ದು, ಆ ತತ್ವ ಸಂದೇಶದ ಮಾರ್ಗದಲ್ಲಿ ವಿಶ್ವ ಸಾಗಿದರೆ ಜಗತ್ತು ನೆಮ್ಮದಿಯಾಗಿರಲು ಸಾಧ್ಯ. ಬಸವಣ್ಣನವರು ನೀಡಿರುವ ಸಂದೇಶ ಮಾರ್ಗದಲ್ಲಿ ಸಾಗಿ ಅವರ ಜಯಂತ್ಯುತ್ಸವವನ್ನು ಅರ್ಥಪೂರ್ಣಗೊಳಿಸುವ ಕಾರ್ಯ ಮಾಡೋಣ’ ಎಂದು ತಿಳಿಸಿದರು. 

ADVERTISEMENT

ಜಯಂತ್ಯುತ್ಸವದ ಗೌರವ ಸ್ವೀಕರಿಸಿ ಮಾತನಾಡಿದ ಶಿಲ್ಪಿ ಕಾಶೀನಾಥ್‌, ‘ಗುರು ಬಸವಣ್ಣನವರ ಸಂದೇಶಗಳು ಪ್ರತಿಯೊಬ್ಬರನ್ನು ಪರಿಶುದ್ಧ ಮಾಡುವಂತಹ ಪವಿತ್ರ ಜಲದಂತೆ. ಬಸವಕಲ್ಯಾಣದಲ್ಲಿ ಗುರು ಬಸವಣ್ಣನವರ ಪುತ್ಥಳಿ ನಿರ್ಮಾಣ ಮಾಡುವ ಕಾರ್ಯ ನನಗೆ ಒದಗಿ ಬಂದದ್ದು ನನ್ನ ಜೀವನದ ಬಹುದೊಡ್ಡ ಭಾಗ್ಯ ಎಂದು ಭಾವಿಸುತ್ತೇನೆ. ಗುರು ಬಸವಣ್ಣನವರ ಸಂದೇಶ ಮಾರ್ಗದಲ್ಲಿ ಸಾಗುವ ಪ್ರಯತ್ನವೇ ಜಯಂತ್ಯುತ್ಸವದ ಉದ್ದೇಶವಾಗಲಿ’ ಎಂದರು.

ಶಿವಮೊಗ್ಗ ರೋಟರಿ ಮಿಡ್‌ಟೌನ್ ಅಧ್ಯಕ್ಷ ಸುರೇಶ ಕುಮಾರ್ ದುರ್ಗಪ್ಪ ‘ಮಾನವೀಯ ಸಮಾಜವನ್ನು ಆದರ್ಶದ ಸನ್ಮಾರ್ಗದಲ್ಲಿ ಕರೆದೊಯ್ಯುವಂತಹ ದಿವ್ಯಶಕ್ತಿ ಗುರು ಬಸವಣ್ಣನವರ ತತ್ವ ಸಂದೇಶಗಳಲ್ಲಿ ಕಾಣಬಹುದು. ಗುರು ಬಸವಣ್ಣನವರು ನಮ್ಮೆಲ್ಲರಿಗೂ ಆದರ್ಶ ಪುರುಷ’ ಎಂದು ತಿಳಿಸಿದರು.

ಹಿರಿಯ ಅನುಭಾವಿ ನೀಲಲೋಚನ ಹಾಲಪ್ಪನವರು ತಮ್ಮ ಅನುಭವ ಸಂದೇಶದಲ್ಲಿ ‘ ಗುರು ಬಸವಣ್ಣನ ವರು ಪ್ರತಿಪಾದಿಸಿದ ಧರ್ಮವು ವಿಶ್ವ ಭ್ರಾತೃತ್ವ ಧರ್ಮ ಎನಿಸಿದೆ. ದಯೆ, ಕರುಣೆ, ಅನುಕಂಪ , ಪ್ರೀತಿ ವಿಶ್ವಾಸಗಳ ಮೌಲ್ಯಗಳಿಲ್ಲದ ಧರ್ಮ ಅದು ಧರ್ಮವೇ ಅಲ್ಲ ಎಂಬುದು ಗುರು ಬಸವಣ್ಣನವರ ದೃಷ್ಟಿ’ ಎಂದು ತಿಳಿಸಿದರು.

ರಾಷ್ಟ್ರೀಯ ಬಸವದಳ ಟ್ರಸ್ಟ್ ಅಧ್ಯಕ್ಷ ರಾಮಪ್ಪ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು.  ಬಾಳಾನಂದ ಮತ್ತು ಶಾಂತಮ್ಮ ಅವರಿಗೆ ಬಸವೇಶ್ವರ ಪೂಜಾ ವ್ರತದ ಮೂಲಕ ಭಕ್ತಿ ಸಮರ್ಪಣೆ ನಡೆಯಿತು. ಯೋಗೀಶ್ ನಿರ್ವಿಕಲ್ಪ ಪ್ರಾಸ್ತಾವಿಕ ನುಡಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.