ADVERTISEMENT

ದೈವೀಕರಣದಿಂದ ಸಾಮಾಜೀಕರಣದೆಡೆಗೆ ಸಾಗಿದ ಬಸವಣ್ಣ: ಸುಮತಿ ಜಯಪ್ಪ

ಬಸವಣ್ಣ ಜಯಂತಿ

​ಪ್ರಜಾವಾಣಿ ವಾರ್ತೆ
Published 19 ಮೇ 2019, 14:03 IST
Last Updated 19 ಮೇ 2019, 14:03 IST
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು   

ಶಿವಮೊಗ್ಗ: ಬಸವಣ್ಣನವರು ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಕ್ರಾಂತಿಗೆ ನಾಂದಿ ಹಾಡಿದರು. ವೈಜ್ಞಾನಿಕತೆ, ವೈಚಾರಿಕತೆಯ ಆಧಾರ‌ದ ಮೇಲೆ ಕ್ರಾಂತಿ ರೂಪಿಸಿದರು ಎಂದುಕುಂಬಳೂರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸುಮತಿ ಜಯಪ್ಪ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಹಮ್ಮಿಕೊಂಡಿದ್ದವಿಶ್ವಗುರು ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣನವರು ದೈವೀಕರಣದಿಂದ ಸಾಮಾಜೀಕರಣದೆಡೆಗೆ ಸಾಗಿದರು. ಆತ್ಮೋದ್ಧಾರದಿಂದ ಸಮಾಜೋದ್ಧಾರಕ್ಕೆ ಕೊಂಡೊಯ್ದರು. ಲಿಂಗದಿಂದ ಜಂಗಮದೆಡೆಗೆ ನಡೆಸಿದರು. ಅವರು ಧರ್ಮ ಇಲ್ಲದವರಿಗೆ ಧರ್ಮ ಕೊಟ್ಟು, ಲಿಂಗವಿಲ್ಲದವರಿಗೆ ಲಿಂಗ ಕೊಟ್ಟು, ಹಸಿದವರಿಗೆ ಅನ್ನ ಕೊಟ್ಟು, ಅನಕ್ಷರಸ್ಥರಿಗೆ ಅಕ್ಷರ ಕೊಟ್ಟು, ದಮನಿತರನ್ನು ಮೇಲೆತ್ತಿ ತನ್ನಂತೆ ಮಾಡಿಕೊಂಡರು ಎಂದು ಹೇಳಿದರು.

ADVERTISEMENT

ಬಸವಣ್ಣನವರುಜನರನ್ನು ಮೌಢ್ಯದಿಂದ ಹೊರತರಲು ಸತತವಾಗಿ ಶ್ರಮಿಸಿದರು. ಸಮಾಜವನ್ನು ಶುದ್ಧೀಕರಿಸುವ ಕಾರ್ಯ ಕೈಗೊಂಡರು. ಕಾಯಕ ಮತ್ತು ದಾಸೋಹ ಅವರ ಎರಡು ಕಣ್ಣುಗಳು. ದೈಹಿಕ ಶ್ರಮದಿಂದ ಏನಾದರೂಂದು ಕಾಯಕ ಮಾಡಬೇಕು. ಅದರಿಂದ ಬಂದಿದ್ದರಲ್ಲಿ ಸ್ವಲ್ಪ ಜಂಗಮ ದಾಸೋಹ ಮಾಡಬೇಕು ಎಂದು ಹೇಳಿದ್ದ ಅವರುದುಡಿದದ್ದನ್ನು ಹಂಚಿ ತಿನ್ನುವ ಸಂಸ್ಕೃತಿ ಬೆಳೆಸಿದರು ಎಂದು ತಿಳಿಸಿದರು.

ಸ್ತ್ರೀ ಸಮಾನತೆಗೆ ಅಂದೇ ಅವರು ಹೋರಾಟದ ಹೆಜ್ಜೆ ಇಟ್ಟರು. ಅವರ ಪ್ರೋತ್ಸಾಹದಿಂದ 36 ಜನ ವಚನಕಾರ್ತಿಯರು ಎಲ್ಲಾ ಜಾತಿ, ವರ್ಗದವರು ಅಕ್ಷರ ಕಲಿತು ತಮ್ಮ ಬದುಕಿನ ಅನುಭವ ಮತ್ತು ಅಧ್ಯಾತ್ಮದ ಅನುಭಾವದಿಂದ ಶ್ರೇಷ್ಠ ವಚನಗಳನ್ನು ಬರೆಯಲು ಸಾಧ್ಯವಾಯಿತು ಎಂದರು.

ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಸರ್ವ ಶರಣರ ಮತ್ತು ವಯಸ್ಕರ ಶಿಕ್ಷಣ ಕೇಂದ್ರವಾಗಿತ್ತು. ದುಡಿಯುವ ಜನರ ಮೊದಲ ವಿಶ್ವವಿದ್ಯಾಲಯವೂ ಆಗಿತ್ತು. ಅವರ ದಲಿತ ಸಂವೇದನೆ ಅನನ್ಯವಾದುದು. ಅವರ ಮನೆಗಳಿಗೆ ಹೋಗಿ ಪ್ರಸಾದ ಸೇವಿಸಿದ್ದರು. ದಲಿತರಿಗಾಗಿ, ಶೋಷಿತರಾಗಿ, ನೊಂದವರಿಗಾಗಿ ಅವರ ಮನ ತಾಯಿಯ ವಾತ್ಸಲ್ಯದಿಂದ ಮಿಡಿಯುತ್ತಿತ್ತು ಎಂದು ತಿಳಿಸಿದರು.

ಇಂದು ಎಲ್ಲಿ ನೋಡಿದರೂ ಭ್ರಷ್ಟಾಚಾರ, ಮೋಸ ಹೆಚ್ಚಾಗಿದೆ.ವೃತ್ತಿಗಳು ಜಾತಿಗಳಾಗಿ ಪರಿವರ್ತನೆ ಹೊಂದಿವೆ. ಎಲ್ಲರೂ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೆಸ್ಕಾಂ ಶಿವಮೊಗ್ಗ ವಲಯ ಮುಖ್ಯ ಎಂಜಿನಿಯರ್ ಎ.ಸಿ. ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸಾಹಿತಿ ರಮೇಶ್ ಗುಬ್ಬಿ, ಚಂದ್ರಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.