ADVERTISEMENT

ಭದ್ರಾವತಿ ನಗರಸಭೆ | ₹ 1.31 ಕೋಟಿ ಉಳಿತಾಯ ಬಜೆಟ್ ಮಂಡನೆ

ಭದ್ರಾವತಿ ನಗರಸಭೆ: ಸುಂದರ ನಗರವಾಗಿಸಲು ಒತ್ತು– ಅಧ್ಯಕ್ಷ ಎಂ.ಮಣಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 13:14 IST
Last Updated 14 ಫೆಬ್ರುವರಿ 2025, 13:14 IST
ಭದ್ರಾವತಿಯ ನಗರಸಭೆ ಸಭಾಂಗಣದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅಧ್ಯಕ್ಷ ಎಂ.ಮಣಿ ಬಜೆಟ್‌ ಮಂಡಿಸಿದರು
ಭದ್ರಾವತಿಯ ನಗರಸಭೆ ಸಭಾಂಗಣದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅಧ್ಯಕ್ಷ ಎಂ.ಮಣಿ ಬಜೆಟ್‌ ಮಂಡಿಸಿದರು   

ಭದ್ರಾವತಿ: ನಗರಸಭೆಯಿಂದ ಈ ಬಾರಿ ಹಲವು ಹೊಸ ಯೋಜನೆಗಳೊಂದಿಗೆ ₹ 1.31 ಕೋಟಿ ಉಳಿತಾಯ ಬಜೆಟ್ ಅನ್ನು ಈಚೆಗೆ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಎಂ.ಮಣಿ ಮಂಡಿಸಿದರು.

‘ಸ್ವಚ್ಛ, ಸುಂದರ ನಗರವನ್ನಾಗಿಸಲು ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಯೋಜನೆಗಳನ್ನು  ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಶಾಸಕರ ಬೆಂಬಲ ಮತ್ತು ನಗರಸಭೆಯ ಸರ್ವ ಸದಸ್ಯರ ಸಹಕಾರ ಕೋರುವೆ. ನಗರದ ನಾಗರಿಕರ ಪ್ರೋತ್ಸಾಹ ಸಹ ನಮಗೆ ಬಹಳ ಮುಖ್ಯ’ ಎಂದು ಮಣಿ ಹೇಳಿದರು.

‘ಕಳೆದ ಸಾಲಿನ ವಾಸ್ತವ ಆದಾಯ ಮತ್ತು ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನ ಆದಾಯ ಮತ್ತು ವೆಚ್ಚದ ನಿರೀಕ್ಷೆ ಇಟ್ಟುಕೊಂಡು ಈ ಬಾರಿಯ ಬಜೆಟ್ ಸಿದ್ಧಪಡಿಸಲಾಗಿದೆ’ ಎಂದು ಆಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ತಿಳಿಸಿದರು.

ADVERTISEMENT

ನಗರಸಭೆ ಹಾಗೂ ನಗರ ಭೂ ಸಾರಿಗೆ ನಿರ್ದೇಶನಾಲಯದವತಿಯಿಂದ ತರೀಕೆರೆ ರಸ್ತೆಯಲ್ಲಿ ಅಂದಾಜು ₹ 44 ಲಕ್ಷ ಅನುದಾನದಲ್ಲಿ ಸುಸಜ್ಜಿತ ದ್ವಿಚಕ್ರ ವಾಹನ ನಿಲುಗಡೆ ತಾಣ ನಿರ್ಮಾಣ ಮಾಡಲಾಗಿದ್ದು, ಶೀಘ್ರ ಅದನ್ನು ಉದ್ಘಾಟಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಲಾಗುವುದು ಎಂದು ಹೇಳಿದರು.

ವಾರದ ಸಂತೆ ಸ್ಥಳಾಂತರ:

ಹೊಸಮನೆ ಮುಖ್ಯರಸ್ತೆಯ ಸಂತೆ ಮೈದಾನದಲ್ಲಿ ನಡೆಯುವ ವಾರದ ಸಂತೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಿ ಈ ಜಾಗದಲ್ಲಿ ನಗರಸಭೆಯ ನೂತನ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯ ಶೀಘ್ರ ಕೈಗೊಳ್ಳಲಾಗುವುದು’ ಎಂದು ಆಯುಕ್ತರು ಮಾಹಿತಿ ನೀಡಿದರು.

‘ಹಳೆ ನಗರದ ಬಸವೇಶ್ವರ ವೃತ್ತದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಸಂಬಂಧ ಡಿಪಿಆರ್ ತಯಾರಿಸಿ ಪ್ರಸ್ತಾವ ಸಲ್ಲಿಸಲಾಗುವುದು. ವಾರ್ಡ್ ನಂ. 8, 9, 10 ಮತ್ತು 11ರಲ್ಲಿ ಪ್ರಾಯೋಗಿಕವಾಗಿ 24X7 ಕುಡಿಯುವ ನೀರಿನ ಘಟಕ ಅಳವಡಿಸಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ನ್ಯೂಟೌನ್ ಭಾಗದಲ್ಲಿ ಹಾಗೂ ಹಳೆ ನಗರ ಬಸವೇಶ್ವರ ವೃತ್ತದಲ್ಲಿ ಸುಸಜ್ಜಿತವಾದ ಫುಡ್‌ಕೋರ್ಟ್ ನಿರ್ಮಾಣ ಮಾಡಲು ಉದ್ದೇಶಗಳಾಗಿದೆ. ನಾಗರಿಕರಿಗೆ ಅನುಕೂಲವಾಗುವಂತೆ ಜನ್ನಾಪುರದಲ್ಲಿ ಕೂಡ ಎಂ.ಟಿ.ಬಿ ಶಾಖಾ ಕಚೇರಿ ಕಟ್ಟಡದಲ್ಲಿ ಆಸ್ತಿ ತೆರಿಗೆ ಪಾವತಿ, ನೀರಿನ ಶುಲ್ಕ ಹಾಗೂ ಇತರೆ ಶುಲ್ಕಗಳ ಪಾವತಿಗೆ ಅನುಕೂಲವಾಗುವಂತೆ ಒಂದು ಬ್ಯಾಂಕ್ ಕೌಂಟರ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಸೈಯದ್ ರಿಯಾದ್ ಉಪಸ್ಥಿತರಿದ್ದರು. ನಗರಸಭೆ ಅಧಿಕಾರಿಗಳು, ಸಿಬ್ಬಂದಿ  ಹಾಗೂ ಚುನಾಯಿತ ಹಾಗೂ ನಾಮನಿರ್ದೇಶಕ ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.