ADVERTISEMENT

ರಾಜ್ಯ ಬಿಜೆಪಿ ವಿಶೇಷ ಸಭೆಗೆ ಗಣ್ಯರ ದಂಡು

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 17:36 IST
Last Updated 2 ಜನವರಿ 2021, 17:36 IST
ಶಿವಮೊಗ್ಗಕ್ಕೆ ಶನಿವಾರ ಆಗಮಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್.
ಶಿವಮೊಗ್ಗಕ್ಕೆ ಶನಿವಾರ ಆಗಮಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್.   

ಶಿವಮೊಗ್ಗ: ಪೆಸಿಟ್‌ ಕಾಲೇಜು ಪ್ರೇರಣಾ ಸಭಾಂಗಣದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ರಾಜ್ಯ ಬಿಜೆಪಿ ವಿಶೇಷ ಸಭೆಯಲ್ಲಿ ಭಾಗವಹಿಸಲು ಪಕ್ಷದ ಜಿಲ್ಲಾ ಉಸ್ತುವಾರಿ ಅರುಣ್‌ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಗಣ್ಯರ ದಂಡು ಶಿವಮೊಗ್ಗಕ್ಕೆ ಆಗಮಿಸಿದೆ.

ತೀರ್ಥಹಳ್ಳಿ ಮಾರ್ಗವಾಗಿ ಬಂದ ಕಟೀಲ್‌ ಅವರನ್ನು ಸಕ್ರೆಬೈಲು ಆನೆ ಬಿಡಾರ ಬಳಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಭದ್ರಾವತಿ ಬಳಿ ಕಾರ್ಯಕರ್ತರು ಸ್ವಾಗತ ನೀಡಿದರು. ಹೆಲಿಕಾಪ್ಟರ್ ಮೂಲಕ ಬಂದಿಳಿದ ಅರುಣ್ ಸಿಂಗ್, ಯಡಿಯೂರಪ್ಪ, ಕಾರಜೋಳ ಅವರಿಗೆ ಹೆಲಿಪ್ಯಾಡ್‌ ಬಳಿ ಡೊಳ್ಳು, ತಮಟೆ ಬಾರಿಸುತ್ತಾ ಅದ್ದೂರಿ ಸ್ವಾಗತ ಕೋರಲಾಯಿತು.ದಾರಿಯದ್ದಕ್ಕೂ ರಾಮ ಮಂದಿರ, ಗೋವುಗಳು, ಆಂಜನೇಯ ಚಿತ್ರಗಳಿರುವ ಫ್ಲೆಕ್ಸ್‌ಗಳು, ಕೇಸರಿ ಬಂಟಿಂಗ್ಸ್‌, ಬ್ಯಾನರ್‌ಗಳು ಗಮನ ಸೆಳದವು. ಪ್ರತಿ ವೃತ್ತಗಳನ್ನೂ ಕೇಸರಿ ಮಯಗೊಳಿಸಲಾಗಿತ್ತು.

ವಿಶೇಷ ಸಭೆ ನಡೆಯುವ ಪೆಸಿಟ್‌ ಕಾಲೇಜು ಪ್ರೇರಣಾ ಸಭಾಂಗಣವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಬಣ್ಣದ ರಂಗೋಲಿ ಗನ ಸಳೆಯುತ್ತಿವೆ. ಪ್ರವೇಶ ದ್ವಾರ, ಸಭಾಂಗಣಗಳನ್ನು ಅಚ್ಚುಕಟ್ಟಾಗಿ ಸಜ್ಜುಗೊಳಿಸಲಾಗಿದೆ. ಬಗೆಬಗೆಯ ತಿನಿಸುಗಳು, ಊಟ, ಉಪಹಾರಗಳ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಶಿವಮೊಗ್ಗಕ್ಕೆ ಬಂದ ತಕ್ಷಣ ಅರುಣ್‌ಸಿಂಗ್ ಹೋಟೆಲ್‌ ಹರ್ಷದಲ್ಲಿ, ಯಡಿಯೂರಪ್ಪ ಅವರು ವಿನೋಬ ನಗರದ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದರು. ನಂತರ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಕಾರಜೋಳ ಅವರು ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದರು.

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಮುಂದಿನ ಗುರಿ:ಗ್ರಾಮ ಪಂಚಾಯಿತಿ ಚುನಾವಣೆಯ ಯಶಸ್ವಿನಿಂದ ಪಕ್ಷ ಬಲಗೊಂಡಿದೆ. ಮುಂದಿನ ಗುರಿ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ. ಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕುರಿತು ಕಾರ್ಯತಂತ್ರ ರೂಪಿಸಲಾಗುವುದು. ಗ್ರಾಮ ಪಂಚಾಯಿತಿಗಳಿಗೆ ರೂಪಿಸಿದ ಗ್ರಾಮ ಸ್ವರಾಜ್ ರೀತಿಯ ಯಾತ್ರೆಗಳನ್ನು ರೂಪಿಸಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಪ್ರತಿನಿಧಿಗಳ ಸಭೆ ನಡೆಸಲಾಗುವುದು. ಜ.11ರಿಂದ ಮೂರು ದಿನ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಾಗುವುದು ಎಂದು ನಳಿನ್‌ಕುಮಾರ್ ಕಟೀಲ್ ಮಾಹಿತಿ ನೀಡಿದರು.

ಮೋದಿ ವಿಶ್ವ ಶ್ರೇಷ್ಠ ನಾಯಕ:ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಶ್ರೇಷ್ಠ ನಾಯಕ. ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಹಲವು ದೇಶಗಳು ಗುರುತಿಸಿವೆ.ಕೋವಿಡ್ ನಿರ್ವಹಣೆಯಲ್ಲಿ ಪ್ರಧಾನಿ ಮೋದಿಗೆ ಜಗತ್ತಿನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಶ್ಲಾಘಿಸಿದರು.

ಸಚಿವರ ಮೌಲ್ಯ ಮಾಪನ ಅನಗತ್ಯ:ಬಿಜೆಪಿ ಗ್ರಾಮೀಣ ಮಟ್ಟದಲ್ಲೂ ಬಲಿಷ್ಠವಾಗಿದೆ. ಯಾವುದೇ ಪಕ್ಷದ ಜತೆ ಸಖ್ಯ ಬೆಳೆಸುವ ಆವಶ್ಯಕತೆ ಇಲ್ಲ. ಸರ್ಕಾರದ ಎಲ್ಲ ಸಚಿವರೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವ ಸಚಿವರ ಕಾರ್ಯವೈಖರಿಯನ್ನೂ ಮೌಲ್ಯ ಮಾಪನ ಮಾಡುವ ಆವಶ್ಯಕತೆ ಇಲ್ಲ ಎಂದರು.

ದೆಹಲಿ ಹೋರಾಟ ರಾಜಕೀಯ ಪ್ರೇರಿತ:ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ರಾಜಕೀಯ ಪ್ರೇರಿತ. ಇಂತಹ ಹೋರಾಟಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಬಿಜೆಪಿಗೆ ಗೊತ್ತಿದೆ. ಮಾತುಕತೆ ನಡೆಯುತ್ತಿದೆ. ಹೋರಾಟಗಾರರ ರಾಜಕಾರಣಕ್ಕಾಗಿ ಬದಲಾವಣೆಗಳು ಆಗುತ್ತಿವೆ. ಅವರ ಬೇಡಿಕೆ ಬೇರೆಬೇರೆ ಇದೆ. ಚರ್ಚೆ ಮುಂದಕ್ಕೆ ಹೋಗುತ್ತಿದೆ. ರೈತರಿಗೆ ನ್ಯಾಯ ದೊರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.