ADVERTISEMENT

ಭದ್ರಾವತಿ: ಹದಗೆಟ್ಟ ಬಿಎಸ್ಎನ್ಎಲ್ ನೆಟ್‌ವರ್ಕ್‌

3 ತಿಂಗಳಲ್ಲಿ 110ಕ್ಕೂ ಹೆಚ್ಚು ಗ್ರಾಹಕರು ಖಾಸಗಿ ಸಂಸ್ಥೆಗೆ ಬದಲು

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 4:50 IST
Last Updated 26 ಜುಲೈ 2025, 4:50 IST
ಭದ್ರಾವತಿ ಬಸವೇಶ್ವರ ವೃತ್ತದ ಬಳಿ ಇರುವ ಬಿಎಸ್ಎನ್ಎಲ್ ಟವರ್
ಭದ್ರಾವತಿ ಬಸವೇಶ್ವರ ವೃತ್ತದ ಬಳಿ ಇರುವ ಬಿಎಸ್ಎನ್ಎಲ್ ಟವರ್   

ಭದ್ರಾವತಿ: ತಾಲ್ಲೂಕಿನಲ್ಲಿ ಭಾರತ್ ಸಂಚಾರ ನಿಗಮ್ ನಿಯಮಿತ (ಬಿಎಸ್ಎನ್ಎಲ್) ನೆಟ್‌ವರ್ಕ್‌ನಲ್ಲಿ ಸಂವಹನ ಸಮಸ್ಯೆ ಈಚೆಗೆ ವಿಪರೀತವಾಗಿದ್ದು, ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ.

ಭದ್ರಾವತಿ ನಗರದಲ್ಲಿ ನೆಟ್‌ವರ್ಕ್‌ ಸಮಸ್ಯೆ ಹೆಚ್ಚುತ್ತಿದೆ. ಗ್ರಾಮಗಳಲ್ಲಿ ನೆಟ್‌ವರ್ಕ್‌ ಸಂಪೂರ್ಣ ಬಂದ್ ಆಗಿದೆ. ಈ ವಿಷಯವಾಗಿ ಸ್ಥಳೀಯ ಬಿಎಸ್ಎನ್ಎಲ್ ಕಚೇರಿಗೆ ಹಲವು ಬಾರಿ ದೂರುಗಳು ಸಲ್ಲಿಕೆಯಾಗಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಅಳಲು ಗ್ರಾಹಕರದ್ದು.

ಕಳೆದ ಮೂರು ತಿಂಗಳಲ್ಲಿ 110ಕ್ಕೂ ಹೆಚ್ಚು ಬಿಎಸ್‌ಎನ್‌ಎಲ್ ಗ್ರಾಹಕರು ಖಾಸಗಿ ನೆಟ್‌ವರ್ಕ್‌ಗೆ ಬದಲಾಯಿಸಿಕೊಂಡಿದ್ದಾರೆ. ಇಷ್ಟು ದಿನ ನೆಟ್‌ವರ್ಕ್‌ ಹುಡುಕಿಕೊಂಡು ಮನೆಯಿಂದ ಹೊರ ಬಂದು ಹಲೋ... ಹಲೋ... ಕೇಳಿಸುತ್ತಿದೆಯೇ ಎಂದು ಮಾತನಾಡಿ ಬರುವ ಪ್ರತೀತಿ ಇತ್ತು. ಈಗ ಅದೂ ಇಲ್ಲದೆ ಸಮಸ್ಯೆ ಹೆಚ್ಚಳಗೊಂಡಿದೆ. ಒಳಬರುವ ಕರೆಗಳಲ್ಲಿ ಕರೆ ಮಾಡಿದವರು ಬಿಟ್ಟು ಬೇರೆ ಯಾರೋ ಮಾತನಾಡುವುದು ಹಾಗೂ ಮಾತನಾಡುತ್ತಿದ್ದಂತೆಯೇ ಕರೆ ಸ್ಥಗಿತಗೊಳ್ಳುವುದು ಆಗುತ್ತಿದೆ ಎಂದು ಜನರು ದೂರಿದ್ದಾರೆ. 

ADVERTISEMENT

ಇಲ್ಲಿ 3ಜಿ ಸಿಗ್ನಲ್‌ ಇದ್ದರೂ ಸರಿಯಾಗಿ ಇಂಟರ್‌ನೆಟ್‌ ಸಂಪರ್ಕ ಸಿಗುತ್ತಿಲ್ಲ. 2ಜಿ ನೆಟ್‌ವರ್ಕ್‌ ನಿಧಾನಗತಿಯಲ್ಲಿದೆ. ನ್ಯಾಯಬೆಲೆ ಅಂಗಡಿಯ ಪಡಿತರ ವಿತರಣೆಯಲ್ಲಿ ಆನ್‌ಲೈನ್ ವ್ಯವಸ್ಥೆ ಅಳವಡಿಸಲಾಗಿದೆ. ಆದರೆ ನೆಟ್‌ವರ್ಕ್ ಸಮಸ್ಯೆಯಿಂದ ಪಡಿತರ ವಿತರಣೆಗೆ ಅಡ್ಡಿಯಾಗಿದೆ.

ತುರ್ತು ಪರಿಸ್ಥಿತಿಯಲ್ಲೂ ಆಂಬುಲೆನ್ಸ್‌ ವಾಹನಕ್ಕೆ ಕರೆ ಮಾಡಲೂ ನೆಟ್‌ವರ್ಕ್‌ ಸಿಗುವುದಿಲ್ಲ ಎಂದು ವಿದ್ಯಾರ್ಥಿ ಪ್ರಜ್ವಲ್ ಹೇಳಿದರು.

ತಾಲ್ಲೂಕಿನಲ್ಲಿ ಬಿಎಸ್‌ಎನ್‌ಎಲ್‌ನ ಒಟ್ಟು 17 ಟವರ್‌ಗಳಿವೆ. ಅವುಗಳಲ್ಲಿ 7 ಟವರ್‌ಗಳನ್ನು ಖಾಸಗಿ ಕಂಪೆನಿಯೊಂದಿಗೆ ಹಂಚಿಕೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 30,130 ಗ್ರಾಹಕರು ಬಿಎಸ್ಎನ್ಎಲ್ ಉಪಯೋಗಿಸುತ್ತಿದ್ದಾರೆ. ಅವರಲ್ಲಿ 230 ಗ್ರಾಹಕರು ಪೋಸ್ಟ್ ಪೇಯ್ಡ್ ಸಂಪರ್ಕ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.