ADVERTISEMENT

ಅಂತರರಾಷ್ಟ್ರೀಯ ಮಟ್ಟದ ಮೂಲ ಸೌಕರ್ಯ ಅಭಿವೃದ್ಧಿ

ಸಂಸದ ಬಿ.ವೈ.ರಾಘವೇಂದ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:21 IST
Last Updated 17 ಆಗಸ್ಟ್ 2025, 6:21 IST
ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ವಿನೋಬನಗರದ ನಿವಾಸದ ಎದುರು ಶನಿವಾರ ಅಂಗವಿಕಲರಿಗೆ ತ್ರಿಚಕ್ರ ವಾಹನ ಮತ್ತು ಶ್ರವಣ ಉಪಕರಣ ವಿತರಿಸಲಾಯಿತು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಂಡಿದ್ದರು
ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ವಿನೋಬನಗರದ ನಿವಾಸದ ಎದುರು ಶನಿವಾರ ಅಂಗವಿಕಲರಿಗೆ ತ್ರಿಚಕ್ರ ವಾಹನ ಮತ್ತು ಶ್ರವಣ ಉಪಕರಣ ವಿತರಿಸಲಾಯಿತು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಂಡಿದ್ದರು   

ಶಿವಮೊಗ್ಗ: ‘ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಜಿಲ್ಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದರಿಂದ, ಉದ್ಯೋಗ, ಪ್ರವಾಸೋದ್ಯಮ, ಕೈಗಾರಿಕೆ, ಆಧ್ಯಾತ್ಮಿಕ ಕೇಂದ್ರಗಳು ಬರಲಿವೆ. ಇದಕ್ಕೆ ಬೇಕಾದ ಎಲ್ಲ ಪ್ರಯತ್ನ ನಡೆಯುತ್ತಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕೋಟೆ ಗಂಗೂರಿನಲ್ಲಿ ₹ 100 ಕೋಟಿ ವೆಚ್ಚದ ರೈಲ್ವೆ ಕೋಚಿಂಗ್ ಡಿಪೊದ ಕೆಲಸ ನಡೆಯುತ್ತಿದೆ. ಇದರಿಂದ ಪ್ರಮುಖ ರೈಲುಗಳು ಇಲ್ಲಿಂದಲೇ ಓಡಾಡಲಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಾಳಗುಪ್ಪ-ಹೊನ್ನಾವರ, ತಾಳಗುಪ್ಪ-ಸಿದ್ದಾಪುರ ನಡುವೆ ರೈಲು ಮಾರ್ಗಕ್ಕೆ ಸರ್ವೆ ಆಗಿ, ವರದಿಯೂ ಬಂದಿದೆ. ಈ ಮಾರ್ಗ ನಿರ್ಮಾಣದ ವೆಚ್ಚ ಹೆಚ್ಚಾದರೂ ಅದನ್ನು ಮಾಡಲೇಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ. ಶಿವಮೊಗ್ಗ- ಹರಿಹರ ರೈಲ್ವೆ ಮಾರ್ಗಕ್ಕೆ ರಾಜ್ಯ ಸರ್ಕಾರದ ಅಸಹಕಾರದಿಂದ ರದ್ದುಗೊಳಿಸುವುದಾಗಿ ಕೇಂದ್ರ ರೈಲ್ವೆ ಸಚಿವರು ಹೇಳಿದ್ದಾರೆ. ಈ ಯೋಜನೆ ಕನಸಾಗಿಯೇ ಉಳಿಯಲು ಬಿಡುವುದಿಲ್ಲ ಎಂದರು.

ADVERTISEMENT

ಶಿಕಾರಿಪುರ –ರಾಣೆಬೆನ್ನೂರು ರೈಲು ಮಾರ್ಗಕ್ಕೆ ₹25 ಕೋಟಿ ಬಿಡುಗಡೆ ಆಗಿದೆ. ಇನ್ನೂ ಬಾಕಿ ₹75 ಕೋಟಿ ಬರಬೇಕಿದೆ. ಅದನ್ನು ತರಲು ಪ್ರಯತ್ನ ಮಾಡುತ್ತಿದ್ದೇನೆ. ಅರಸಾಳುನಿಂದ ತೀರ್ಥಹಳ್ಳಿ, ಶೃಂಗೇರಿ-ಚಿಕ್ಕಮಗಳೂರು ಲಿಂಕ್ ಮಾಡಿ ಅಲ್ಲಿಂದ ಹಾಸನ ಮೂಲಕ ಮಂಗಳೂರಿಗೆ ರೈಲ್ವೆ ಸಂಪರ್ಕ ಕಲ್ಪಿಸಲಾಗುವುದು ಎಂದರು.

ವಿಐಎಸ್‌ಎಲ್ ಪುನಶ್ಚೇತನ ಬಗ್ಗೆ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಡಿಸೆಂಬರ್ ವೇಳೆಗೆ ಕಾರ್ಖಾನೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎನ್.ಕೆ. ಜಗದೀಶ್, ಮಾಜಿ ಶಾಸಕರಾದ ಎಸ್. ರುದ್ರೇಗೌಡ, ಕೆ.ಬಿ.ಪ್ರಸನ್ನಕುಮಾರ್, ಅಶೋಕ್ ನಾಯ್ಕ, ಪ್ರಮುಖರಾದ ಎಸ್. ದತ್ತಾತ್ರಿ, ಟಿ.ಡಿ. ಮೇಘರಾಜ್, ಸಿ.ಎಚ್. ಮಾಲತೇಶ್ ಇದ್ದರು.

ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರ ಜನ್ಮದಿನದ ಪ್ರಯುಕ್ತ ಬೆಂಬಲಿಗರು ಮೆಗ್ಗಾನ್ ಆಸ್ಪತ್ರೆ ರೋಗಿಗಳಿಗೆ ಅನ್ನಸಂತರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಮೋಹನ್ ಆನಂದ್ ರಮೇಶ ಪ್ರವೀಣ್ಯೋಗೀಶ ನವೀನ್ ಶಿವು ಶಿವಯೋಗಿ ಸಚಿನ್ ಚೇತನ್ ಮುತ್ತು ಆಕಾಶ್ ಸಂತೋಷ್ ದೀಕ್ಷಿತ್ ಇದ್ದರು.

ದ್ವಿಚಕ್ರ ವಾಹನ ಸ್ವೆಟರ್ ವಿತರಣೆ..

ಸಂಸದ ಬಿ.ವೈ.ರಾಘವೇಂದ್ರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿನೋಬನಗರದ ಮನೆಗೆ ಬೆಂಬಲಿಗರು ಜಿಲ್ಲೆಯ ಬಿಜೆಪಿ ನಾಯಕರು ಬಂದು ಶುಭ ಹಾರೈಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಇದ್ದರು. ಈ ವೇಳೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಆರು ಅಂಗವಿಕಲ ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಣೆ ಮಾಡಲಾಯಿತು. ನಂತರ ಯುನೈಟೆಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ನೆಹರೂ ಕ್ರೀಡಾಂಗಣದಲ್ಲಿ ‘ಬಿವೈಆರ್ ಕಪ್‘ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ಸಾಕ್ಷರತಾ ಮಿಷನ್ ಯೋಜನೆ ಅಡಿ ಶಿವಮೊಗ್ಗದ ದುರ್ಗಿಗುಡಿ ಶಾಲೆಯ ಮಕ್ಕಳಿಗೆ ಸ್ವೆಟರ್ ವಿತರಣೆ ಮಾಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.