ADVERTISEMENT

ತುಂಗಾ ಪ್ರವಾಹ ಸಂತ್ರಸ್ತರಿಗೆ ಬಹುಮಹಡಿ ಮನೆಗಳು

ಜಿಲ್ಲೆಯ ಹಲವೆಡೆ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 12:16 IST
Last Updated 13 ಆಗಸ್ಟ್ 2019, 12:16 IST
ಶಿವಮೊಗ್ಗದ ರಾಜೀವ್‌ ಗಾಂಧಿ ಬಡಾವಣೆಗೆ ಮಂಗಳವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾನಿಯಾದ ಮನೆಗಳನ್ನು ವೀಕ್ಷಿಸಿದರು. ಶಾಸಕ ಕೆ.ಎಸ್.ಈಶ್ವರಪ್ಪ ಇದ್ದಾರೆ.
ಶಿವಮೊಗ್ಗದ ರಾಜೀವ್‌ ಗಾಂಧಿ ಬಡಾವಣೆಗೆ ಮಂಗಳವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾನಿಯಾದ ಮನೆಗಳನ್ನು ವೀಕ್ಷಿಸಿದರು. ಶಾಸಕ ಕೆ.ಎಸ್.ಈಶ್ವರಪ್ಪ ಇದ್ದಾರೆ.   

ಶಿವಮೊಗ್ಗ: ಜಿಲ್ಲೆಯಲ್ಲಿ ತುಂಗಾ ಪ್ರವಾಹದಿಂದ ಹಾನಿಗೆ ಒಳಗಾದ ಸಂತ್ರಸ್ತರಿಗೆ ಬಹುಮಹಡಿ ಮನೆಗಳನ್ನು ನಿರ್ಮಿಸಿಕೊಡಲು ಪ್ರಸ್ತಾವ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು.

ತುಂಗಾ ತೀರದ ರಾಜೀವ್‌ಗಾಂಧಿ ನಗರ, ಶಾಂತಮ್ಮ ಬಡಾವಣೆ, ಬಾಪೂಜಿ ನಗರಗಳಿಗೆ ಮಂಗಳವಾರ ಭೇಟಿ ನೀಡಿದ ನಂತರ ರಾಮಣ್ಣ ಶ್ರೇಷ್ಟಿ ಪಾರ್ಕ್‌ ನೆರೆ ಪರಿಹಾರ ಕೇಂದ್ರದಲ್ಲಿ ಅವರು ಮಾತನಾಡಿದರು.

ನೆರೆ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ನದಿಯ ಎರಡೂ ದಡದಲ್ಲಿ ತಡೆಗೋಡೆ ಎತ್ತರಿಸಲು ಕ್ರಮ ಕೈಗೊಳ್ಳಲಾಗುವುದು.

ADVERTISEMENT

ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸಧ್ಯದಲ್ಲಿಯೇ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು. ಪ್ರವಾಹದಿಂದ ಹಾನಿಗೀಡಾದ ಅರಣ್ಯ ಭೂಮಿ, ಕೃಷಿ ಭೂಮಿ, ಆಸ್ತಿ ಪಾಸ್ತಿಗಳ ಸಮಗ್ರ ಸಮೀಕ್ಷೆ ನಡೆಸುವರು. ಒಂದು ವಾರದ ಒಳಗಾಗಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ತಕ್ಷಣ ವಿಶೇಷ ಪರಿಹಾರದ ಪ್ಯಾಕೇಜ್ ನೀಡಲಾಗುವುದು ಎಂದು ಭರವಸೆ ನೀಡಿದರು.

ಅತಿವೃಷ್ಟಿಯಿಂದ ಬೆಳೆನಷ್ಟ ಅನುಭವಿಸಿದ ರೈತರು ಕಂಗಾಲಾಗುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ರೈತರ ಪರ ಇದೆ. ಎಲ್ಲಾ ರೀತಿಯ ನೆರವು ನೀಡಲು ಬದ್ಧ ಎಂದರು.

ಪ್ರಧಾನಮಂತ್ರಿ ಕೃಷಿ ಸನ್ಮಾನ್ ಯೋಜನೆ ಅಡಿ ಅರ್ಹ ರೈತರ ಖಾತೆಗಳಿಗೆ ರಾಜ್ಯ ಸರಕಾರ ₹4ಸಾವಿರ ಜಮೆ ಮಾಡುತ್ತದೆ. ಮೊದಲನೆ ಕಂತಿನ ₹2 ಸಾವಿರ ವಾರದ ಒಳಗಾಗಿ ಹಾಕಲಾಗುವುದು ಎಂದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ, ಮೇಯರ್ ಲತಾ ಗಣೇಶ್, ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್, ಜಿಲ್ಲಾಧಿಕಾರಿ ಶಿವಕುಮಾರ್, ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯಿತಿ ಸಿಇಒ ಶಿವರಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.