ADVERTISEMENT

ಸಮರ್ಪಕ ಆರೋಗ್ಯ ಸೇವೆ ನೀಡಲು ಬದ್ಧ: ಶಾಸಕ ಹಾಲಪ್ಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 4:52 IST
Last Updated 18 ಡಿಸೆಂಬರ್ 2021, 4:52 IST
ಸಾಗರದಲ್ಲಿ ಆರೋಗ್ಯ ಇಲಾಖೆಯಿಂದ ಆನಂದಪುರ ಭಾಗಕ್ಕೆ ಹೊಸ ಆಂಬುಲೆನ್ಸ್ ವಾಹನ ಮತ್ತು ತುಮರಿ ಭಾಗಕ್ಕೆ ರಿಪೇರಿಯಾಗಿ ಬಂದ ಆಂಬುಲೆನ್ಸ್ ಸೇವೆಗೆ ಶಾಸಕ ಹಾಲಪ್ಪ ಹರತಾಳು ಅವರು ಶುಕ್ರವಾರ ಚಾಲನೆ ನೀಡಿದರು.
ಸಾಗರದಲ್ಲಿ ಆರೋಗ್ಯ ಇಲಾಖೆಯಿಂದ ಆನಂದಪುರ ಭಾಗಕ್ಕೆ ಹೊಸ ಆಂಬುಲೆನ್ಸ್ ವಾಹನ ಮತ್ತು ತುಮರಿ ಭಾಗಕ್ಕೆ ರಿಪೇರಿಯಾಗಿ ಬಂದ ಆಂಬುಲೆನ್ಸ್ ಸೇವೆಗೆ ಶಾಸಕ ಹಾಲಪ್ಪ ಹರತಾಳು ಅವರು ಶುಕ್ರವಾರ ಚಾಲನೆ ನೀಡಿದರು.   

ಸಾಗರ: ಶರಾವತಿ ಹಿನ್ನೀರು ಪ್ರದೇಶದ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಹಾಳಾಗಿದ್ದನ್ನು ದುರಸ್ತಿಪಡಿಸಿ ಮಾಡಿಸಿ ಸ್ಥಳೀಯರ ಅನುಕೂಲಕ್ಕೆ ಬಿಡಲಾಗಿದೆ. ಜೊತೆಗೆ ಆನಂದಪುರಂ ಹೋಬಳಿ ವ್ಯಾಪ್ತಿಗೆ ಹೊಸ ಆಂಬುಲೆನ್ಸ್‌ ಅನ್ನು ಬಿಡಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯಿಂದ ಆನಂದಪುರ ಭಾಗಕ್ಕೆ ಹೊಸ ಆಂಬುಲೆನ್ಸ್ ವಾಹನ ಮತ್ತು ತುಮರಿ ಭಾಗಕ್ಕೆ ದುರಸ್ತಿಯಾಗಿ ಬಂದ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಿನ್ನೀರು ಭಾಗದಲ್ಲಿ ಸಮರ್ಪಕವಾದ ಆರೋಗ್ಯ ಸೇವೆ ಸಲ್ಲಿಸಲು ಸರ್ಕಾರ ಬದ್ಧವಾಗಿದೆ. ಎರಡು ದಿನಗಳ ಹಿಂದೆ ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸೇವೆ ಸಿಗದೆ ಎರಡು ಜೀವ ಹಾನಿಯಾದ ಬಗ್ಗೆ ತಿಳಿದುಕೊಂಡಿದ್ದೇನೆ. ಇಂತಹ ಘಟನೆಗಳು ನಡೆಯಬಾರದು. ಇದರಿಂದ ನನಗೆ ಬೇಸರವಾಗಿದೆ. ಸಮರ್ಪಕ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಕರ್ತವ್ಯವೂ ಆಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಗಮನ ಹರಿಸಲಾಗುತ್ತದೆ’ ಎಂದರು.

ADVERTISEMENT

‘ಕರೂರು ಭಾರಂಗಿ ಹೋಬಳಿಯ ನೆಟ್‍ವರ್ಕ್ ಸಮಸ್ಯೆ ಬಗೆಹರಿಸುವ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬಿ.ಎಸ್‌.ಎನ್.ಎಲ್ ಸೇವೆ ಸಮರ್ಪಕವಾಗಿ ದೊರಕದೇ ಇರುವುದರಿಂದ ಖಾಸಗಿ ಟೆಲಿಕಾಂ ಸಂಸ್ಥೆಗಳ ಜೊತೆಗೆ ಮಾತುಕತೆ ನಡೆಸಲಾಗಿದೆ. ಸಂಸದರು ಮತ್ತು ಶಾಸಕರ ನಿಧಿಯಿಂದ ಶಾಲೆಗಳಿಗೆ ನೆಟ್‍ವರ್ಕ್ ಕಲ್ಪಿಸುವ ಯೋಜನೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುತ್ತಿದೆ. ಶಾಲೆ ಹತ್ತಿರ ಬಂದರೆ ಎಲ್ಲರಿಗೂ ನೆಟ್‍ವರ್ಕ್ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಹಿನ್ನೀರು ಭಾಗದಲ್ಲಿ ಗುಡ್ಡಗಳ ನಡುವೆ
ಮನೆ ಇರುವುದರಿಂದ ಟವರ್ ಅಳವಡಿಸಿ ನೆಟ್‍ವರ್ಕ್ ಸೇವೆ ಕಲ್ಪಿಸುವುದು ಸವಾಲಿನ ಕೆಲಸವಾಗಿದ್ದರೂ ಸರ್ಕಾರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಯೋಜನೆ ರೂಪಿಸಲಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ತುಕಾರಾಮ್, ಸದಸ್ಯರಾದ ಗಣೇಶಪ್ರಸಾದ್, ಮೈತ್ರಿ ಪಾಟೀಲ್, ಅರವಿಂದ ರಾಯ್ಕರ್, ಸಂತೋಷ್ ಶೇಟ್, ನಾದೀರಾ ತಾಹೀರ್, ಪ್ರೇಮ ಸಿಂಗ್, ಯು.ಎಚ್.ರಾಮಪ್ಪ, ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕೆ.ಎಸ್. ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.