ADVERTISEMENT

ಕಾಂಗ್ರೆಸ್ ನಾಯಕರ ಹೇಳಿಕೆ ಖಂಡನಾರ್ಹ: ಬಿ.ವೈ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 17 ಮೇ 2025, 14:39 IST
Last Updated 17 ಮೇ 2025, 14:39 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿಕಾರಿಪುರ: ‘ಶತ್ರು ರಾಷ್ಟ್ರಗಳ ವಕ್ತಾರಂತೆ ಕಾಂಗ್ರೆಸ್ ನಾಯಕರು ಬಾಲಿಷ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಅವರಿಗೆ ಜನ ತಕ್ಕ ಪಾಠ ಕಲಿಸಬೇಕು’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪಾಕಿಸ್ತಾನ ಪ್ರಯೋಜಿತ ಭಯೋತ್ಪಾದನೆ ಕೃತ್ಯಕ್ಕೆ ನಮ್ಮ ಸೈನಿಕರು ತಕ್ಕ ಉತ್ತರ  ನೀಡುವ ಮೂಲಕ ದೇಶದ ಆತ್ಮಗೌರವ ಹೆಚ್ಚಿಸಿದ್ದಾರೆ. ಅದಕ್ಕೆ ಪ್ರೋತ್ಸಾಹ ನೀಡುವುದನ್ನು ಬಿಟ್ಟು ರಾಜ್ಯದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಪ್ರಿಯಾಂಕ್‌ ಖರ್ಗೆ, ಸಂತೋಷ್ ಲಾಡ್, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರು ಬಾಲಿಷ ಹೇಳಿಕೆ ನೀಡುತ್ತಿದ್ದಾರೆ. ಅದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಸೈನಿಕರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡುತ್ತಿರುವ ಅವರ ಹೇಳಿಕೆ ನಾಚಿಕೆಗೇಡಿನ ಸಂಗತಿ. ಅದನ್ನು ಇನ್ನಾದರೂ ಕೈಬಿಡಬೇಕು. ಮಾನವೀಯತೆ ಗೌರವಿಸುವ ಜಗತ್ತಿನ ಯಾವುದೇ ವ್ಯಕ್ತಿ ಭಯೋತ್ಪಾದನೆ ಕೃತ್ಯ ಬೆಂಬಲಿಸುವುದಿಲ್ಲ. ಹೆಂಡತಿ, ಮಕ್ಕಳ ಎದುರು ಗಂಡ, ತಂದೆಯನ್ನು ಕೊಂದು ಧರ್ಮ ರಕ್ಷಣೆ ಮಾಡುವಂತೆ ಯಾವುದೇ ಧರ್ಮ ಹೇಳುವುದಿಲ್ಲ. ಇನ್ನಾದರೂ ಭಯೋತ್ಪಾದನೆ ಕೃತ್ಯ ನಡೆದಾಗ ಪಕ್ಷಾತೀತ, ಜಾತ್ಯತೀತವಾಗಿ ದೇಶದ ಎಲ್ಲರೂ ಉಗ್ರವಾಗಿ ಖಂಡಿಸಬೇಕು’ ಎಂದರು.

ADVERTISEMENT

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಬಿ.ಚನ್ನವೀರಪ್ಪ, ಬಸವರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್, ಪುರಸಭೆ ಅಧ್ಯಕ್ಷೆ ಸುನಂದ ಮಂಜುನಾಥ್ ಬಾಳೇಕಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.