ADVERTISEMENT

ಶಿವಮೊಗ್ಗ– ಸಾಗರ ನಡುವಿನ ರೈಲ್ವೆ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಾಣ

ಕ್ರಾಸಿಂಗ್: ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 4:08 IST
Last Updated 14 ಮಾರ್ಚ್ 2022, 4:08 IST
ಸಾಗರದಲ್ಲಿ ಕೆರೆ ಹಬ್ಬದ ಅಂಗವಾಗಿ ಗಣಪತಿ ಕೆರೆ ಸಮೀಪ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತ್ಯಾಗರ್ತಿ ವೃತ್ತದಿಂದ ಎಲ್.ಬಿ. ಕಾಲೇಜು ವೃತ್ತದವರೆಗೆ ₹78 ಕೋಟಿ ವೆಚ್ಚದಲ್ಲಿ ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಸಂಸದ ಬಿ.ವೈ. ರಾಘವೇಂದ್ರ ಭೂಮಿ ಪೂಜೆ ನೆರವೇರಿಸಿದರು.
ಸಾಗರದಲ್ಲಿ ಕೆರೆ ಹಬ್ಬದ ಅಂಗವಾಗಿ ಗಣಪತಿ ಕೆರೆ ಸಮೀಪ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತ್ಯಾಗರ್ತಿ ವೃತ್ತದಿಂದ ಎಲ್.ಬಿ. ಕಾಲೇಜು ವೃತ್ತದವರೆಗೆ ₹78 ಕೋಟಿ ವೆಚ್ಚದಲ್ಲಿ ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಸಂಸದ ಬಿ.ವೈ. ರಾಘವೇಂದ್ರ ಭೂಮಿ ಪೂಜೆ ನೆರವೇರಿಸಿದರು.   

ಸಾಗರ: ಶಿವಮೊಗ್ಗ-ಸಾಗರ ನಡುವೆ ಇರುವ ನಾಲ್ಕು ರೈಲ್ವೆ ಕ್ರಾಸಿಂಗ್ ಬಳಿ ₹220 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಕೆರೆ ಹಬ್ಬದ ಅಂಗವಾಗಿ ಗಣಪತಿ ಕೆರೆ ಸಮೀಪ ಶನಿವಾರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ತ್ಯಾಗರ್ತಿ ವೃತ್ತದಿಂದ ಎಲ್.ಬಿ. ಕಾಲೇಜು ವೃತ್ತದವರೆಗೆ ₹78 ಕೋಟಿ ವೆಚ್ಚದಲ್ಲಿ ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬೆಕ್ಕೋಡಿ ಸೇತುವೆ ನಿರ್ಮಾಣ ಕಾಮಗಾರಿಗೆ ₹150 ಕೋಟಿ ಮಂಜೂರಾಗಿದೆ. ₹200 ಕೋಟಿ ವೆಚ್ಚದಲ್ಲಿ ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು ಜೋಗ ಶೀಘ್ರದಲ್ಲೇ ರಾಷ್ಟ್ರದ ಪ್ರಮುಖ ಪ್ರವಾಸೋದ್ಯಮ ತಾಣವಾಗಿ ರೂಪುಗೊಳ್ಳಲಿದೆ ಎಂದು ತಿಳಿಸಿದರು.

ADVERTISEMENT

‘ಶಾಸಕ ಎಚ್.ಹಾಲಪ್ಪ ಹರತಾಳು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಸಹಕಾರದಿಂದ ಸಾಗರ ಕ್ಷೇತ್ರದ ಅಭಿವೃದ್ಧಿಯ ಚಿತ್ರಣ ಬದಲಾಗಿದೆ. 419 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಸಿದ್ಧವಾಗಿದೆ’ ಎಂದರು.

ಗಂಗಾರತಿ ಮಾದರಿಯಲ್ಲಿ ಗಣಪತಿ ಕೆರೆ ಅಂಗಳದಲ್ಲಿ ಕೆರೆ ಹಬ್ಬದ ಅಂಗವಾಗಿ ಸಾಗರಾರತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಗಂಗೆ ಪೂಜೆ ನೆರವೇರಿಸಲಾಗಿದೆ. ಊರಿನ ಜಲಮೂಲವನ್ನು ಪರಿಸರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ
ಇದೊಂದು ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ಡಾ.ನಾಗರಾಜ್ ಎಲ್. ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯ ಬಿ.ಎಚ್. ಲಿಂಗರಾಜ್, ಕಾರ್ಗಲ್-ಜೋಗ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್, ಲೋಕನಾಥ ಬಿಳಿಸಿರಿ ಇದ್ದರು.

ಕೆ.ಆರ್. ಗಣೇಶ್ ಪ್ರಸಾದ್ ಸ್ವಾಗತಿಸಿದರು. ಟಿ.ಡಿ.ಮೇಘರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಕೆ.ವಂದಿಸಿದರು. ಸಂತೋಷ್ ಶೇಟ್ ನಿರೂಪಿಸಿದರು. ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.