ADVERTISEMENT

ಶಿವಮೊಗ್ಗ | ವಾರಾಂತ್ಯ ಕರ್ಫ್ಯೂ: ಉತ್ತಮ ಪ್ರತಿಕ್ರಿಯೆ

ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತ l ಪ್ರವಾಸಿ ತಾಣಗಳು ‌ಬಣ ಬಣ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 5:54 IST
Last Updated 9 ಜನವರಿ 2022, 5:54 IST
ಲಕ್ಷ್ಮೀ ಪ್ರಸಾದ್‌
ಲಕ್ಷ್ಮೀ ಪ್ರಸಾದ್‌   

ಶಿವಮೊಗ್ಗ: ಕೊರೊನಾ ಸೋಂಕು ನಿಯಂತ್ರಣ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂಗೆ ಮೊದಲ ದಿನ ಜನರು ಉತ್ತಮವಾಗಿ ಸ್ಪಂದಿಸಿದ್ದು, ಶಿವಮೊಗ್ಗದಲ್ಲಿ ವ್ಯಾಪಾರ–ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು. ಪ್ರಮುಖ ಕೇಂದ್ರಗಳಲ್ಲಿ ಅಂಗಡಿಗಳು ಬಂದ್ ಆಗಿದ್ದವು.

ನಗರದ ವಾಣಿಜ್ಯ ಕೇಂದ್ರವಾದ ಗಾಂಧಿ ಬಜಾರ್ ಶನಿವಾರ ಬಿಕೋ ಅನ್ನುತ್ತಿತ್ತು. ಜವಳಿ, ಚಿನ್ನಾಭರಣ ಸೇರಿ ಎಲ್ಲಾ ಬಗೆಯ ವ್ಯಾಪಾರ, ವಹಿವಾಟುಗಳು ಬಂದ್ ಆಗಿದ್ದವು. ದಿನಸಿ ಅಂಗಡಿಗಳು, ತರಕಾರಿ ಮಳಿಗೆಗಳಲ್ಲಿ ಮಾತ್ರ ವ್ಯಾಪಾರ ನಡೆಯಿತು. ಹಾಗಾಗಿ ಬೆಳಿಗ್ಗೆ ಗಾಂಧಿ ಬಜಾರ್‌ನಲ್ಲಿ ಜನ,ವಾಹನ ಸಂಚಾರವಿತ್ತು. ಮಧ್ಯಾಹ್ನದ ಬಳಿಕ ಜನ ಸಂಚಾರ ಕಡಿಮೆಯಾಯಿತು.

ಕಾರ್ಖಾನೆ, ಅಗತ್ಯ ಸೇವೆ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುವ ಹೆಚ್ಚಿನ ಜನ ಸಂಚಾರವಿತ್ತು. ಅನಗತ್ಯವಾಗಿ ಓಡಾಡುತ್ತಿರುವವರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.

ADVERTISEMENT

ರಸ್ತೆಗಳು ಖಾಲಿ ಖಾಲಿ: ಕರ್ಫ್ಯೂ ಕಾರಣ ತುರ್ತು ಸೇವೆಗಳಿಗಷ್ಟೇ ಅವಕಾಶ ಇರುವುದರಿಂದ ಜನರ ಓಡಾಟಕ್ಕೆ ಬ್ರೇಕ್‌ ಬಿದ್ದಿತ್ತು. ಜವಳಿ, ಕೃಷಿ ಉಪಕರಣಗಳು, ಮೊಬೈಲ್ ಶಾಪ್, ಶೋಂ ರೂಂಗಳೇ ಇರುವ ನಗರದ ಬಿ.ಎಚ್. ರಸ್ತೆ ಬಣಗುಡುತ್ತಿತ್ತು. ಅಗತ್ಯ ವಸ್ತುಗಳ ಪಟ್ಟಿಗೆ ಇವು ಸೇರದೇ ಇದ್ದುದರಿಂದ ಈ ಅಂಗಡಿಗಳು ಬಂದ್ ಆಗಿದ್ದವು. ಅಮೀರ್ ಅಹಮದ್ ಸರ್ಕಲ್, ಶಿವಪ್ಪ ನಾಯಕ ಪ್ರತಿಮೆ ಬಳಿ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದು, ಈ ಭಾಗದಲ್ಲಿ ವಾಹನ ಸಂಚಾರವು ವಿರಳವಾಗಿತ್ತು.

ವಾರಾಂತ್ಯದಲ್ಲಿ ಜನಜಂಗುಳಿಯಿಂದ ಕೂಡಿರುತ್ತಿದ್ದ ನೆಹರೂ ರಸ್ತೆ ಕರ್ಫ್ಯೂ ಕಾರಣಕ್ಕೆ ಸಂಪೂರ್ಣ ಸ್ಥಬ್ಧವಾಗಿತ್ತು. ಆಮೀರ್ ಅಹಮದ್ ಸರ್ಕಲ್ ಕಡೆಯಿಂದ ನೆಹರೂ ರಸ್ತೆಗೆ ಹೋಗುವ ಒಂದು ಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಗೋಪಿ ಸರ್ಕಲ್ ಕಡೆಯಲ್ಲೂ ಬ್ಯಾರಿಕೇಡ್ ಹಾಕಿ ಪೊಲೀಸರು ವಾಹನಗಳ ತಪಾಸಣೆ ನಡೆಸಿದರು. ಈ ರಸ್ತೆಯಲ್ಲಿರುವ ಬಹುತೇಕ ಮಳಿಗೆಗಳು, ಅಂಗಡಿಗಳು ಬಂದ್ ಆಗಿದ್ದವು.

ಶನಿವಾರ, ಭಾನುವಾರಗಳಂದು ಗಿಜಿಗುಡುತ್ತಿದ್ದ ಸಿಟಿ ಸೆಂಟರ್ ಮಾಲ್‌ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಗೇಟ್‌ಗಳನ್ನು ಬಂದ್ ಮಾಡಿ, ಸೆಕ್ಯೂರಿಟಿಗಳನ್ನು ನಿಯೋಜಿಸಲಾಗಿದೆ.

ಟ್ರಾಫಿಕ್ ದಟ್ಟಣೆ ಹೆಚ್ಚಿರುತ್ತಿದ್ದ ದುರ್ಗಿಗುಡಿ, ಜೈಲ್ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ಅಂಗಡಿಗಳು ಬಂದ್ ಆಗಿದ್ದವು. ಹೆಚ್ಚಿನ ಆಸ್ಪತ್ರೆಗಳು ಇರುವ ಕುವೆಂಪು ರಸ್ತೆಯಲ್ಲಿ ಜನ ಸಂಚಾರ ಕಂಡು ಬಂತು. ವಿನೋಬನಗರ ನೂರು ಅಡಿ ರಸ್ತೆಯಲ್ಲಿಯೂ ದಿನಸಿ, ತರಕಾರಿ ಮಾರಾಟಕ್ಕೆ ಅವಕಾಶವಿದ್ದು, ಇಲ್ಲಿಯೂ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ಕಾರ್ಯ ನಡೆಸಿದರು.

ಎಲ್ಲಡೆ ಬ್ಯಾರಿಕೇಡ್‌: ಕರ್ಫ್ಯೂ ಕಾರಣ ನಗರದ ‍ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್‌ ಹಾಕಿ ಸಂಚಾರವನ್ನು ಬಂದ್‌ ಮಾಡಲಾಗಿತ್ತು. ಅಗತ್ಯ ಸೇವೆಗಷ್ಟೇ ಅವಕಾಶ ಇರುವುದರಿಂದ ವಿಚಾರಣೆ ನಡೆಸುತ್ತಿದ್ದ ಪೊಲೀಸರು ಆಸ್ಪತ್ರೆ, ಮೆಡಿಕಲ್‌ಗಳಿಗೆ ತೆರಳುವವರನ್ನು ಮಾತ್ರ ಬಿಡುತ್ತಿದ್ದರು. ಅಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ಬಸ್‌ಗಳಿದ್ದರೂ ಪ್ರಯಾಣಿಕರಿಲ್ಲ
ಶಿವಮೊಗ್ಗ:
ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಸಾರ್ವಜನಿಕ ಸಾರಿಗೆಗೆ ಸರ್ಕಾರ ಅವಕಾಶ ನೀಡಿರುವುದರಿಂದ ಎಲ್ಲೆಡೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚರಿಸುತ್ತಿದ್ದವು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಜನರ ಓಡಾಟ ವಿರಳವಾಗಿದ್ದರಿಂದ ಶಿವಮೊಗ್ಗ ಸಿಟಿ ಬಸ್ಸುಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಆಗೊಮ್ಮೆ, ಈಗೊಮ್ಮೆ ಬೆರಳೆಣಿಕೆಯಷ್ಟು ಬಸ್ಸುಗಳು ಮಾತ್ರ ಸಂಚರಿಸಿದವು.

ಶಿವಮೊಗ್ಗ–ಭದ್ರಾವತಿ ನಡುವೆ ಬೆಳಿಗ್ಗೆಯಿಂದ ನಿರಂತರವಾಗಿ ಬಸ್ಸುಗಳು ಸಂಚರಿಸಿದವು. ಕಾರ್ಖಾನೆ, ಕಚೇರಿಗಳಿಗೆ ತೆರಳುವ ಪ್ರಯಾಣಿಕರು ಇದ್ದುದ್ದರಿಂದ ಬೆಳಿಗ್ಗೆ ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.

ಸರ್ಕಾರಿ ಬಸ್ ನಿಲ್ದಾಣದಲ್ಲಿ ದೂರದೂರುಗಳಿಗೆ ತೆರಳುವ ಬಸ್ಸುಗಳು ಸಂಚರಿಸಿದವು. ಬೇರೆಡೆಯಿಂದಲೂ ಬಸ್ಸುಗಳು ಶಿವಮೊಗ್ಗಕ್ಕೆ ಬರುತ್ತಿವೆ. ಆದರೆ, ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಕೆಲವು ಬಸ್ಸುಗಳಲ್ಲಿ ಶೇ 25ರಷ್ಟು ಪ್ರಯಾಣಿಕರಿಲ್ಲ.

ಶಿವಮೊಗ್ಗದಿಂದ ಬೇರೆ ಊರುಗಳಿಗೆ ತೆರಳುವ ಖಾಸಗಿ ಬಸ್ಸುಗಳು ಕೂಡ ರಸ್ತೆಗಿಳಿದಿವೆ. ಆದರೆ, ಹೆಚ್ಚಿನ ಪ್ರಯಾಣಿಕರು ಬರುವವರೆಗೂ ಬಸ್ಸುಗಳು ನಿಲ್ದಾಣದಿಂದ ಹೊರಗೆ ಹೋಗುತ್ತಿರಲಿಲ್ಲ.

ತೀರ್ಥಹಳ್ಳಿ: ಬೀದಿಗಿಳಿಯದ ಜನ
ತೀರ್ಥಹಳ್ಳಿ:
ಎರಡು ದಿನ ವಾರಾಂತ್ಯ ಕರ್ಫ್ಯೂ ನಿಮಿತ್ತ ಪಟ್ಟಣದ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಅಗತ್ಯ ಸಾಮಗ್ರಿಗಳ ಖರೀದಿಗೂ ಹೆಚ್ಚಿನ ಮಂದಿ ಹೊರಗೆ ಬಾರದೇ ಇರುವುದು ಕಂಡುಬಂತು.

ಎಳ್ಳಮಾವಾಸ್ಯೆ ಜಾತ್ರೆಗೆ ಸಾಗರೋಪಾದಿಯಲ್ಲಿ ಜನ ಪಟ್ಟಣಕ್ಕೆ ಬಂದಿದ್ದರು. ರಥಬೀದಿಯ ಜಾತ್ರೆ ಮೈದಾನದಲ್ಲಿ ಹಾಕಿದ್ದ ಬಹುತೇಕ ಮಳಿಗೆಗಳು ಶುಕ್ರವಾರ ರಾತ್ರಿ ಖಾಲಿಯಾಗಿವೆ. ಉಳಿದಿರುವವರು ಮೂಟೆ ಕಟ್ಟಿ ಊರಿಗೆ ತೆರಳಲು ಸಿದ್ದರಾಗಿದ್ದಾರೆ.

ಮಂಗಳೂರು, ಉಡುಪಿ, ತೀರ್ಥಹಳ್ಳಿ, ಶಿವಮೊಗ್ಗ ಮಾರ್ಗಕ್ಕೆ ಬೆರಳೆಣಿಕೆಯ ಬಸ್‌ ಸಂಚಾರ ಇತ್ತು. ಪ್ರಯಾಣಿಕರ ಕೊರೆತೆ ಎದ್ದು ಕಾಣುತ್ತಿತ್ತು. ಕೆಲವು ಹಳ್ಳಿಗಳಿಂದ ಬಂದ ಜನರು ಬಸ್‌ ಸಂಚಾರ ಇಲ್ಲದೇ ಪರದಾಡಿದರು. ಗ್ರಾಹಕರು ದಿನಬಳಕೆ ಸಾಮಗ್ರಿಗಳನ್ನು ಮುಂಚಿತವಾಗಿವೇ ಖರೀದಿಸಿದ್ದಾರೆ.

ಹೊಸನಗರದಲ್ಲಿ ಯಶಸ್ವಿ
ಹೊಸನಗರ:
ರಾಜ್ಯ ಸರ್ಕಾರ ವಿಧಿಸಿದ್ದ ವಾರಾಂತ್ಯ ಕರ್ಫ್ಯೂ ತಾಲ್ಲೂಕಿನಲ್ಲಿ ಯಶಸ್ವಿಯಾಗಿದೆ.

ಸರ್ಕಾರಿ ಕಚೇರಿಗಳು ಎರಡನೇ ಶನಿವಾರವಾಗಿದ್ದರಿಂದ ಮುಚ್ಚಿದ್ದವು. ಬ್ಯಾಂಕ್, ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ದಿನಸಿ, ತರಕಾರಿ, ಹಾಲಿನ ಮಳಿಗೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ಪ್ರೇಕ್ಷಣೀಯ ಸ್ಥಳಗಳಲ್ಲಿ ಜನರಿಲ್ಲ: ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಾದ ಕೊಡಚಾದ್ರಿ ಗಿರಿಶಿಖರ, ನಗರ ಕೋಟೆ, ದೇವಗಂಗೆ, ಹಿಡ್ಲುಮನೆ ಫಾಲ್ಸ್, ರಾಮಚಂದ್ರಪುರ ಮಠ, ಕಾಮಧೇನು ಗೋಶಾಲೆ, ಹುಂಚಾ ಮಠಗಳಲ್ಲಿ ಪ್ರವಾಸಿಗರು ಇರದೇ ಬಿಕೋ ಎನ್ನುತ್ತಿತ್ತು. ವಾರಾಂತ್ಯದಲ್ಲಿ ಸದಾ ಜನರಿಂದ ತುಂಬಿರುತ್ತಿದ್ದ ಈ ಪ್ರೇಕ್ಷಣೀಯ ಸ್ಥಳಗಳಲ್ಲಿ ಕರ್ಫ್ಯೂ ಛಾಯೆ ಕಂಡು ಬಂತು.

ಸರ್ಕಲ್ ಇನ್‌ಸ್ಪೆಕ್ಟರ್ ಮಧುಸೂಧನ್ ಮತ್ತು ಪಿಎಸ್ಐ ರಾಜೇಂದ್ರನಾಯ್ಕ ಬಿಗಿ ಕ್ರಮ ಕೈಗೊಂಡಿದ್ದರು.

ಜೋಗಕ್ಕೆ ನಿರ್ಬಂಧ
ಕಾರ್ಗಲ್:
ಕಾರ್ಗಲ್ ಪಟ್ಟಣ ಸಂಪೂರ್ಣ ಸ್ಥಬ್ದಗೊಂಡಿದ್ದ ಚಿತ್ರಣ ಎಲ್ಲೆಡೆ ಕಂಡು ಬಂದಿತ್ತು. ಸದಾ ಪ್ರವಾಸಿಗರಿಂದ ಕಿಕ್ಕಿರಿದು ತುಂಬುತ್ತಿದ್ದ ಜೋಗ ಜಲಪಾತ ಪ್ರದೇಶ ಮಾತ್ರ ನಿರ್ಜನವಾಗಿತ್ತು. ಜಲಪಾತದ ಭೋರ್ಗರೆತ ಮಾತ್ರ ಇಡೀ ಪರಿಸರದಲ್ಲಿ ಮಾರ್ದನಿಸುತ್ತಿತ್ತು.

ಕಾರ್ಗಲ್ ಸಬ್ ಇನ್‌ಸ್ಪೆಕ್ಟರ್‌ ತಿರುಮಲೇಶ್ ಆಯಕಟ್ಟಿನ ಜಾಗದಲ್ಲಿ ಸಿಬ್ಬಂದಿಯನ್ನು ನೇಮಿಸಿ ಜನರ ಅನಗತ್ಯ ಓಡಾಟಕ್ಕೆ ತಡೆಯೊಡ್ಡಿದರು. ಜೋಗ ಜಲಪಾತ ಪ್ರದೇಶದಲ್ಲಿ ಒಂದೆಡೆ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗೆ ಸಂಬಂಧಪಟ್ಟಂತೆ ಕೆಲಸ ಕಾರ್ಯಗಳು ನಡೆಯುತ್ತಿರುವಾಗ ಪ್ರವಾಸಿಗರ ಆಗಮನ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಿತ್ತು. ವಾರಾಂತ್ಯ ಕರ್ಫ್ಯೂ ಕಾಮಗಾರಿಗಳಿಗೆ ವರದಾನವಾಗಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.