ಶಿವಮೊಗ್ಗ: ಸಮೀಪದ ಬಸವನಗಂಗೂರು ಬಳಿ ಶುಕ್ರವಾರ ಮುಂಜಾನೆ ಅಂತರರಾಜ್ಯ ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಆಗಿರುವ ಬೆಂಗಳೂರಿನ ಕಲ್ಕೆರೆ ನಿವಾಸಿ ಮಂಜುನಾಥ @ ಕಲ್ಕೆರೆ ಮಂಜನ (47) ಕಾಲಿಗೆ ಗುಂಡು ಹೊಡೆದು ಇಲ್ಲಿನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲ್ಕೆರೆ ಮಂಜುನಾಥನ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಈ ಹಿಂದೆ ಕಳ್ಳತನ ಪ್ರಕರಣ ದಾಖಲಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ ಸಮೀಪದ ಬಸವನ ಗಂಗೂರಿನಲ್ಲಿ ಮಂಜುನಾಥ ಇದ್ದು, ಇಲ್ಲಿ ಅಪರಾಧ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದಾನೆ ಎಂಬ ಮಾಹಿತಿ ಆಧರಿಸಿ ಹಾಗೂ ಹಳೆಯ ಪ್ರಕರಣದಲ್ಲಿ ಬೇಕಾಗಿದ್ದ ಕಾರಣ ಜಯನಗರ ಪೊಲೀಸ್ ಠಾಣೆ ಪಿಎಸ್ಐ ನವೀನ್ ಬ್ಯಾಕೋಡು ಹಾಗೂ ಸಿಬ್ಬಂದಿ ಆತನನ್ನು ಬಂಧಿಸಲು ಬಸವನ ಗಂಗೂರಿಗೆ ತೆರಳಿದ್ದರು.
ಈ ವೇಳೆ ಪೊಲೀಸ್ ಸಿಬ್ಬಂದಿ ದ್ಯಾಮಪ್ಪ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಮಂಜುನಾಥ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆಗ ಪಿಎಸ್ಐ ನವೀನ್ ಬ್ಯಾಕೋಡು ಗಾಳಿಯಲ್ಲಿ ಗುಂಡು ಹಾರಿಸಿ, ಎಚ್ಚರಿಕೆ ನೀಡಿದ್ದಾರೆ. ಅವರ ಮೇಲೂ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದಾಗ ಆತ್ಮರಕ್ಷಣೆಗೆ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಮಂಜುನಾಥನನ್ನು ಬಂಧಿಸಿ, ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಪೊಲೀಸ್ ಸಿಬ್ಬಂದಿ ದ್ಯಾಮಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಲ್ಕೆರೆ ಮಂಜುನಾಥನ ವಿರುದ್ದ ಬೆಂಗಳೂರು, ಶಿವಮೊಗ್ಗ ಮಾತ್ರವಲ್ಲದೇ ತಮಿಳುನಾಡಿನಲ್ಲೂ ಕಳ್ಳತನ ಪ್ರಕರಣ ದಾಖಲಾಗಿವೆ. ಒಟ್ಟು 72 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.