ADVERTISEMENT

ಶಿವಮೊಗ್ಗ ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಹೆಚ್ಚಳ: ಶಾಸಕ ಕೆ.ಬಿ.ಪ್ರಸನ್ನಕುಮಾರ್‌

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:14 IST
Last Updated 23 ಸೆಪ್ಟೆಂಬರ್ 2021, 3:14 IST
ಕೆ.ಬಿ. ಪ್ರಸನ್ನಕುಮಾರ್
ಕೆ.ಬಿ. ಪ್ರಸನ್ನಕುಮಾರ್   

ಶಿವಮೊಗ್ಗ: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಕಳವಳ ವ್ಯಕ್ತಪಡಿಸಿದರು.

ಗೋಪಾಲಗೌಡ ಬಡಾವಣೆಯಲ್ಲಿ ಬೆಳ್ಳಂಬೆಳಿಗ್ಗೆಯೇ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಸರ ದೋಚಿದ್ದಾರೆ. ರವೀಂದ್ರನಗರ, ವಿದ್ಯಾನಗರ ಸೇರಿ ಹಲವೆಡೆ ಸರ ಅಪಹರಣ ಪ್ರಕರಣಗಳು, ಮೊಬೈಲ್ ಕಳವು ಪ್ರಕರಣ ನಡೆಯುತ್ತಿವೆ. ಮನೆ ಮುಂದೆ ನಿಲ್ಲಿಸಿದ ಬೈಕ್‌ಗಳು ಬೆಳಿಗ್ಗೆ ಆಗುವುದರಲ್ಲಿ ಮಾಯವಾಗುತ್ತಿವೆ. ಆದರೂ, ಪೊಲೀಸರು ಇವೆಲ್ಲ ಸಾಮಾನ್ಯ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳಿಗೆ ಮಿತಿಯೇ ಇಲ್ಲ. ಗಾಂಜಾ ಸೇವಿಸಿ ಬೀದಿಯಲ್ಲಿ ಗಲಾಟೆ ಮಾಡಿದರೂ ಯಾರು ಗಮನ ಹರಿಸುತ್ತಿಲ್ಲ. ಜಿಲ್ಲೆಯವರೇ ಗೃಹ ಸಚಿವರಾದರೂ ಅಪರಾಧ ಕೃತ್ಯಗಳಿಗೆ ಲಗಾಮು ಹಾಕಿಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಕಾಮಗಾರಿಗಳಿಗೆ ಭೂಮಿಪೂಜೆ ನೇರವೇರಿಸಿಕೊಂಡೇ ಕಾಲ ಕಳೆಯುತ್ತಿದ್ದಾರೆ’ ಎಂದು ಕಟುವಾಗಿ ಟೀಕಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಜನರಿಗೆ ಮಾತ್ರ ನೆಮ್ಮದಿ ಇಲ್ಲ. ಗೃಹ ಸಚಿವರು ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿ, ಜನರು ನೆಮ್ಮದಿಯ ಜೀವನ ನಡೆಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೊಮ್ಮನಕಟ್ಟೆ ಮಂಜುನಾಥ್, ಜಿ.ಡಿ. ಮಂಜುನಾಥ್, ಶಾಮಸುಂದರ್, ಜಿತೇಂದ್ರ, ರಂಗನಾಥ್, ದೀಪಕ್ ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.