ADVERTISEMENT

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸಿದ್ಧತೆ

ಹೈಕೋರ್ಟ್ ಸೂಚನೆ ಪಾಲಿಸಲು ಮುಂದಾದ ಜಿಲ್ಲಾಡಳಿತ, ಕಾರ್ಯಾಚರಣೆ ಪಟ್ಟಿ ಅಂತಿಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 11:16 IST
Last Updated 3 ಅಕ್ಟೋಬರ್ 2019, 11:16 IST
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿದರು.   

ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ.

ಸಾರ್ವಜನಿಕ ಸ್ಥಳಗಳು, ಉದ್ಯಾನಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಹೈಕೋರ್ಟ್ ಸೂಚನೆ ನೀಡಿತ್ತು. ಜಿಲ್ಲೆಯಲ್ಲಿರುವ ಅಂತಹ ಕಟ್ಟಡಗಳ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಗುರುವಾರ ನಡೆದ ಸಭೆಯಲ್ಲಿ ಸೂಚಿಸಿದರು.

2009ರ ಡಿಸೆಂಬರ್ ಬಳಿಕ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸಲು ಹೈಕೋರ್ಟ್ ಆದೇಶ ನೀಡಿದೆ. 2009 ಡಿಸೆಂಬರ್ ಪೂರ್ವದಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳಿಂದ ಸಾರ್ವಜನಿಕರಿಗೆ ತೊಂದರೆ ಇಲ್ಲದಿದ್ದರೆ ಸಕ್ರಮಗೊಳಿಸಲು ಅವಕಾಶವಿದೆ ಎಂದು ವಿವರ ನೀಡಿದರು.

ADVERTISEMENT

ಕಟ್ಟಡದಲ್ಲಿರುವ ವಿಗ್ರಹಗಳು, ಧಾರ್ಮಿಕ ಸಂಕೇತಗಳನ್ನು ತೆರವುಗೊಳಿಸಿ ಕಟ್ಟಡ ನೆಲಸಮಗೊಳಿಸಲು ನ್ಯಾಯಾಲಯ ಸೂಚಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸದಾಗಿ ಧಾರ್ಮಿಕ ಕಟ್ಟಡ ನಿರ್ಮಿಸಲು ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ 248 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ 6, ಉದ್ಯಾನಗಳಲ್ಲಿ 19 ಹಾಗೂ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು 219 ಅನಧಿಕೃತ ಕಟ್ಟಡ ನಿರ್ಮಿಸಲಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ 59, ಭದ್ರಾವತಿ ತಾಲ್ಲೂಕಿನಲ್ಲಿ 11, ತೀರ್ಥಹಳ್ಳಿ 14, ಸಾಗರ 30, ಶಿಕಾರಿಪುರ 60, ಸೊರಬ 44, ಹೊಸನಗರದಲ್ಲಿ 26 ಕಟ್ಟಡಗಳನ್ನು ಗುರುತಿಸಲಾಗಿದೆ. 20 ಕಟ್ಟಡಗಳನ್ನು ತೆರವುಗೊಳಿಸಲಾದೆ. 224 ತೆರವುಗೊಳಿಸಬೇಕಿದೆ. 91 ಸಕ್ರಮಗೊಳಿಸಲಾಗಿದೆ. ಒಂದು ಪ್ರಕರಣ ನ್ಯಾಯಾಲಯದಲ್ಲಿದೆ. ಪ್ರಸ್ತುತ 129 ಕಟ್ಟಡಗಳನ್ನು ತೆರವುಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರತಿಯೊಂದು ಪ್ರಕರಣಗಳನ್ನೂ ಕೂಲಂಕಷವಾಗಿ ಪರಿಶೀಲಿಸಬೇಕು. ಎರಡು ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು. ಪ್ರದೇಶವಾರು, ಗ್ರಾಮ ಪಂಚಾಯಿತಿವಾರು ಪಟ್ಟಿಯನ್ನು ಛಾಯಾಚಿತ್ರಗಳ ಸಮೇತ ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು. ಸಕ್ರಮಗೊಳಿಸಬಹುದ ಕಟ್ಟಡಗಳಿದ್ದರೆ ಅದಕ್ಕೆ ಸೂಕ್ತ ಕಾರಣ, ವಿವರಣೆ ನೀಡಬೇಕು. 2009ರ ಡಿಸೆಂಬರ್ ಬಳಿಕ ನಿರ್ಮಾಣಗೊಂಡಿರುವ ಧಾರ್ಮಿಕ ಕಟ್ಟಡಗಳ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಕೆರೆಗಳ ತೆರವು ಕಾರ್ಯ ಮುಂದುವರಿಕೆ:ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ 4,675 ಕೆರೆಗಳಿವೆ. ಶಿವಮೊಗ್ಗದಲ್ಲಿ 133, ತೀರ್ಥಹಳ್ಳಿ 70, ಭದ್ರಾವತಿ 22, ಸೊರಬ ಮತ್ತು ಶಿಕಾರಿಪುರಗಳಲ್ಲಿ ತಲಾ 11, ಹೊಸನಗರ 7, ಸಾಗರದಲ್ಲಿ ಒಂದು ಕೆರೆ ಒತ್ತುವರಿ ತೆರವುಗೊಳಿಸಲಾಗಿದೆ. 263 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಅವುಗಳಲ್ಲಿ ಶಿವಮೊಗ್ಗ 41, ಭದ್ರಾವತಿ 32, ತೀರ್ಥಹಳ್ಳಿ 76, ಸಾಗರ 48 ಮತ್ತು ಶಿಕಾರಿಪುರದಲ್ಲಿ 59 ಕೆರೆಗಳು ಸೇರಿವೆ. ಉಳಿದಿರುವ ಎಲ್ಲಾ ಕೆರೆಗಳ ಒತ್ತುವರಿ ನಿಗದಿತ ಸಮಯದ ಒಳಗೆ ತೆರವುಗೊಳಿಸಬೇಕು ಎಂದರು.

ಒತ್ತುವರಿ ತೆರವಿಗೆ ಬಾಕಿ ಇರುವ ಕೆರೆಗಳ ಇಲಾಖಾವಾರು ವಿವರಸಲ್ಲಿಸಬೇಕು. ಗಡಿ ರೇಖೆ ನಿಗದಿಪಡಿಸಿದ ನಂತರ ಭದ್ರಪಡಿಸಲು ಬಾಕಿ ಇರುವ ಕೆರೆಗಳ ವಿವರ ಸಲ್ಲಿಸಬೇಕು. ಒತ್ತುವರಿ ತೆರವುಗೊಳಿಸಿದ ಬಳಿಕ ಹದ್ದುಬಸ್ತು ನಿಗದಿಪಡಿಸಿ, ಸುತ್ತಲೂ ಟ್ರಂಚ್‌ ಹೊಡೆಯಬೇಕು. ಕೆರೆ ಒತ್ತುವರಿ ತೆರವು ಪ್ರಗತಿ ಕುರಿತು ಶೀಘ್ರ ರಾಜ್ಯ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕಾಗಿದೆ. ಎಲ್ಲಾ ಮಾಹಿತಿಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ವೈಶಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಜೆ.ಅನುರಾಧ, ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.