ADVERTISEMENT

ಶಿವಮೊಗ್ಗ ಏತ ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಘೋಷಣೆ

ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 14:57 IST
Last Updated 6 ಫೆಬ್ರುವರಿ 2019, 14:57 IST
ಬಿ.ವೈ. ರಾಘವೇಂದ್ರ
ಬಿ.ವೈ. ರಾಘವೇಂದ್ರ   

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿಘೋಷಣೆಯಾಗುವನಿರೀಕ್ಷೆಯಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಲವು ನೀರಾವರಿ ಯೋಜನೆಗಳು ಜಾರಿಯಾಗಬೇಕಿವೆ. ಕೆಲವು ಅರ್ಧಕ್ಕೆ ನಿಂತಿವೆ. ಕೆಲವಕ್ಕೆ ಆಡಳಿತಾತ್ಮಕ ಅನುಮೋದನೆ ಸಿಗಬೇಕಿದೆ. ಈ ಎಲ್ಲಾ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಈ ಸಂಬಂಧಜಿಲ್ಲೆಯ ನೀರಾವರಿಯೋಜನೆಗಳಿಗೆ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಬಿಜೆಪಿ ಶಾಸಕರು, ಸಂಸದರು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್‌ಗೆ ಈಚೆಗೆ ಮನವಿ ಮಾಡಲಾಗಿದ್ದು. ಈ ಎಲ್ಲಾ ಯೋಜನೆಗಳಿಗೆ ಸರ್ಕಾರದ ಬಜೆಟ್‌ನಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಸೊರಬ ತಾಲ್ಲೂಕಿನಲ್ಲಿ ವರದಾ ನದಿಯಿಂದ ಮೂಗೂರು ಏತ ನೀರಾವರಿಗೆ 0.359 ಟಿಎಂಸಿ ನೀರು ಬೇಕಾಗಲಿದ್ದು, ಇದಕ್ಕಾಗಿ ₹ 105 ಕೋಟಿ ವೆಚ್ಚದ ಯೋಜನಾ ವರದಿ ತಯಾರಿಸಲಾಗಿದೆ. ಅಲ್ಲದೇ ಮೂಡಿ ಏತ ನೀರಾವರಿಗೆ 1.09 ಟಿಎಂಸಿ ನೀರು ಬೇಕಾಗಲಿದ್ದು, ಇದು ₹ 185 ಕೋಟಿ ವೆಚ್ಚದ ಯೋಜನಾ ವರದಿಯಾಗಿದೆ ಎಂದರು.

ಶಿಕಾರಿಪುರದ ಹಿರೇಕೆರೂರು ತಾಲ್ಲೂಕಿನ ಪುರದ ಕೆರೆಯಿಂದ 200 ಕೆರೆಗಳಿಗೆ ನೀರು ತುಂಬಿಸುವುದಕ್ಕೆ 1.05 ಟಿಎಂಸಿ ನೀರು ಬೇಕಾಗುತ್ತದೆ. ಸುಮಾರು ₹ 885 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಹಾಗೆಯೇ ಶಿವಮೊಗ್ಗ ಗ್ರಾಮಾಂತರ ಭಾಗದ 75 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 0.35 ಟಿಎಂಸಿ ನೀರು ಮತ್ತು ಶಿಕಾರಿಪುರ, ಶಿರಾಳಕೊಪ್ಪ ಭಾಗಕ್ಕೆ ಕುಡಿಯುವ ನೀರು ಒದಗಿಸಲು 0.4 ಟಿಎಂಸಿ ನೀರು ಬೇಕಾಗುತ್ತದೆ. ₹ 300 ಕೋಟಿಯ ಯೋಜನೆ ಇದು ಎಂದು ಮಾಹಿತಿ ನೀಡಿದರು.

ಈ ಹಿಂದೆ ಶಿಕಾರಿಪುರ ಕಲ್ಲೊಡ್ಲು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಆಗ ಅದು ₹ 20 ಕೋಟಿ ಯೋಜನೆಯಾಗಿತ್ತು. ಅದರೆ ಅದು ಇಂದಿಗೂ ಜಾರಿಯಾಗಿಲ್ಲ. ಈಗ ಅದಕ್ಕೆ ₹ 100 ಕೋಟಿ ಬೇಕಾಗುತ್ತದೆ. 0.6 ಟಿಎಂಸಿ ನೀರಿನಲ್ಲಿ 5 ಸಾವಿರ ಎಕರೆಗೆ ಇದರಿಂದ ನೀರುಣಿಸಬಹುದಾಗಿದೆ ಎಂದು ತಿಳಿಸಿದರು.

ಸರ್ಕಾರ ದಂಡಾವತಿ ಯೋಜನೆಗೆ ಮರುಜೀವ ನೀಡಬೇಕಾಗಿದೆ. ಇದಲ್ಲದೇ ಬೈಂದೂರಿನ ಸಿದ್ದಾಪುರದಲ್ಲಿ ವರಹಾ ನದಿಯಿಂದ ಏತ ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು.ಹೊಳಲೂರು, ಕಾಚಿನಕಟ್ಟೆ, ಕ್ಯಾತನಹೊಸೂರು, ಗುಡ್ಡದ ತಿಮ್ಮಿನಕಟ್ಟೆ, ಗುಡ್ಡದ ಕೆರೆ ಹೀಗೆ 5 ಸಣ್ಣ ನೀರಾವರಿ ಯೋಜನೆಗಳು ಇದ್ದು, ಇವೆಲ್ಲಕ್ಕೂ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ. ಹಲವು ಕಾರಣಗಳಿಂದ ಇವು ಜಾರಿಯಾಗಿಲ್ಲ. ಇವುಗಳನ್ನು ಕೂಡ ಜಾರಿ ಮಾಡಬೇಕು ಎಂದರು.

ಪ್ರಮುಖರಾದ ಪವಿತ್ರಾ ರಾಮಯ್ಯ, ಎಚ್‌.ಸಿ. ಬಸವರಾಜಪ್ಪ, ನಾಗರತ್ನ ದೇವರಾಜ್, ಎಸ್. ದತ್ತಾತ್ರಿ, ಬುಳ್ಳಾಪುರ ಬಸವರಾಜಪ್ಪ, ಗಂಗಾಧರ್, ಬಿ.ಕೆ. ಶ್ರೀನಾಥ್, ಯೋಗೀಶ್ ಗೌಡ, ಮಧುಸೂದನ್, ಕೆ.ವಿ. ಅಣ್ಣಪ್ಪ, ರತ್ನಾಕರ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.