ADVERTISEMENT

ಸಾಗರ: ಅರಳಿಮರ ಉಳಿಸಿಕೊಂಡು ರಸ್ತೆ ವಿಸ್ತರಣೆ ಕಾಮಗಾರಿ ನಡೆಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 6:39 IST
Last Updated 12 ಜೂನ್ 2025, 6:39 IST
ಸಾಗರದ ನ್ಯೂ ಬಿಎಚ್ ರಸ್ತೆಯಲ್ಲಿರುವ ಅರಳಿಮರ.
ಸಾಗರದ ನ್ಯೂ ಬಿಎಚ್ ರಸ್ತೆಯಲ್ಲಿರುವ ಅರಳಿಮರ.   

ಸಾಗರ: ಶಿವಮೊಗ್ಗ ರಸ್ತೆಯ ತ್ಯಾಗರ್ತಿ ವೃತ್ತದಿಂದ ಜೋಗ ರಸ್ತೆಯ ಎಲ್‌ಬಿ ಕಾಲೇಜು ವೃತ್ತದವರೆಗೆ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಈ ಮಾರ್ಗದಲ್ಲಿ ಬರುವ ಎರಡು ಅರಳಿಮರಗಳನ್ನು ಉಳಿಸಿಕೊಂಡು ಕಾಮಗಾರಿ ಮುಂದುವರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಸ್ತೆ ವಿಸ್ತರಣೆಗಾಗಿ ಈಗಾಗಲೇ 488 ಬಲಿತ ಪಾರಂಪರಿಕ ವೃಕ್ಷಗಳನ್ನು ಕಡಿಯಲಾಗಿದೆ. ಅಗ್ರಹಾರ ವೃತ್ತ ಹಾಗೂ ಬಿಎಚ್ ರಸ್ತೆಯ ರೆಡ್ ಚಿಲ್ಲಿ ಹೋಟೆಲ್ ಬಳಿ ಇರುವ ಎರಡು ಅರಳಿಮರಗಳನ್ನೂ ಕಡಿಯಲು ಉದ್ದೇಶಿಸಲಾಗಿದೆ ಎಂಬ ಮಾಹಿತಿ ಬಂದಿದ್ದು ಇವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅರಳಿಮರವನ್ನು ಅಶ್ವತ್ಥ ವೃಕ್ಷ ಎಂದು ಪೂಜಿಸುವ ಸಂಪ್ರದಾಯ ಮೊದಲಿನಿಂದಲೂ ಇದೆ. ಹೀಗಾಗಿ ಅರಳಿಮರಗಳ ಬಗ್ಗೆ ಭಾವನಾತ್ಮಕ ನಂಟನ್ನು ಜನರು ಹೊಂದಿದ್ದಾರೆ. ಇದರ ಜೊತೆಗೆ ಅಸಂಖ್ಯಾತ ಹಕ್ಕಿಗಳು, ಇರುವೆ ಗೂಡುಗಳಿಗೆ ಈ ಮರಗಳು ಆಶ್ರಯ ನೀಡಿವೆ. ಈ ಕಾರಣದಿಂದಲೂ ಮರಗಳನ್ನು ಉಳಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಸುವಾಗ ಎರಡು ಅಮೂಲ್ಯ ಮರಗಳನ್ನು ಕಡಿಯದೆ ಇರುವ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು. ಒಂದು ವೇಳೆ ಇದು ಅನಿವಾರ್ಯ ಅಂತಾದಲ್ಲಿ ನೂತನ ತಂತ್ರಜ್ಞಾನದ ಯಂತ್ರಗಳನ್ನು ಬಳಸಿ ಈ ಮರಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸವನ್ನಾದರೂ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.