ADVERTISEMENT

ತೀರ್ಥಹಳ್ಳಿ: ಹಲ್ಲೆ ಆರೋಪಿಗಳ ಬಂಧನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:40 IST
Last Updated 26 ಜನವರಿ 2022, 3:40 IST
ತೀರ್ಥಹಳ್ಳಿ ತಾಲ್ಲೂಕು ಕಚೇರಿ ಎದುರು ಮಂಗಳವಾರ ನಡೆದ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿದರು
ತೀರ್ಥಹಳ್ಳಿ ತಾಲ್ಲೂಕು ಕಚೇರಿ ಎದುರು ಮಂಗಳವಾರ ನಡೆದ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿದರು   

ತೀರ್ಥಹಳ್ಳಿ: ‘ಜಮೀನಿಗೆ ರಸ್ತೆ ಸಂಬಂಧ ಈಚೆಗೆ ಹಲ್ಲೆಗೊಳಗಾದಕಬ್ಬಿನಮಕ್ಕಿ ಮುರುಳಿ ಅವರುಮಣಿಪಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಗೃಹ ಸಚಿವರ ಬೆಂಬಲದಿಂದ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರಆರೋಪಿಸಿದರು.

ಕ್ಷೇತ್ರದಲ್ಲಿ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ಮಂಗಳವಾರ ತಾಲ್ಲೂಕು ಕಚೇರಿ ಎದುರು ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಹಲ್ಲೆಗೊಳಗಾಗಿ 20 ದಿನವಾದರೂ ಆರೋಪಿಗಳ ಬಂಧನ ಆಗಿಲ್ಲ. ಬಿಜೆಪಿ ಕಾರ್ಯಕರ್ತರಾದ ಕಾರಣ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ. ಹಲ್ಲೆಗೊಳಗಾದವರು ಬಿಜೆಪಿ ಕಾರ್ಯಕರ್ತ ಆಗಿದ್ದು, ಪ್ರಕರಣ ಮುಚ್ಚಲು ಪ್ರಯತ್ನ ನಡೆದಿದೆ. ಆದರೆ ಆತ ಬದುಕುವುದೇ ಕಷ್ಟ ಎಂದು ವೈದ್ಯರು ಹೇಳುತ್ತಿದ್ದಾರೆ. ಆತನ ಮನೆಗೆ ನಾನು ಭೇಟಿ ನೀಡಿದ ಮೇಲೆ ‌ಕಾನೂನು ಕ್ರಮ ಜರುಗಿಸಿದ್ದಾರೆ’ ಎಂದು ದೂರಿದರು.

ADVERTISEMENT

‘ಆರೋಪಿಗಳಿಗೆ ಸಚಿವರು ರಕ್ಷಣೆ ನೀಡಿದರೆ, ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು. ಇದೇ ರೀತಿ ಮುಂದುವರಿದರೆ ರಥಬೀದಿ ಡಿವೈಎಸ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ಗುಡ್ಡೇಕೊಪ್ಪಕ್ಕೆ ಸೀಮಿತವಾದ ಗೃಹ ಸಚಿವರು ತೀರ್ಥಹಳ್ಳಿ ಕ್ಷೇತ್ರಕ್ಕೆ ಸಲ್ಲುವುದಿಲ್ಲ. ರಾಜ್ಯ ನಿಭಾಯಿಸುವುದು ಹೇಗೆ’ ಎಂದು ಕುಟುಕಿದರು.

‘ದಾಖಲೆ ಇಲ್ಲದ ನಂದಿತಾ ಪ್ರಕರಣದ ವಿರುದ್ಧ ಮಾತನಾಡಿದ ಆರಗ ಜ್ಞಾನೇಂದ್ರ ಅವರು ದಾಖಲೆ ಇರುವ ಈ ಪ್ರಕರಣದಲ್ಲಿ ಮೌನಿಯಾಗಿದ್ದಾರೆ. ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ರೈತರ, ಬಡವರ ಭೂಮಿಯನ್ನು ಅರಣ್ಯಕ್ಕೆ ಸೇರಿಸಿ ಟ್ರಂಚ್‌ ಹೊಡೆಸುತ್ತಿದೆ. ಇವುಗಳಿಗೆ ಆರಗ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ನಾರಾಯಣರಾವ್‌, ತೀರ್ಥಹಳ್ಳಿ ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ ಮುಡುಬ ರಾಘವೇಂದ್ರ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥಶೆಟ್ಟಿ, ರಾಷ್ಟ್ರೀಯ ಯುವ ಕಾಂಗ್ರೆಸ್‌ ವಕ್ತಾರ ಆದರ್ಶ್‌ ಹುಂಚದಕಟ್ಟೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಸದಸ್ಯರಾದ ಗೀತಾ, ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.