ADVERTISEMENT

ಡಿಜಿಟಲ್ ಗ್ರಂಥಾಲಯ: 5 ಲಕ್ಷ ದಾಟಿದ ಸದಸ್ಯತ್ವ

ನೋಂದಣಿ ಹೆಚ್ಚಳ, ಸ್ಮಾರ್ಟ್‌ ಸಿಟಿ ಯೋಜನೆ ಅಡಿ 4 ಗ್ರಂಥಾಲಯಗಳಿಗೆ ಡಿಜಿಟಲ್‌ ಸ್ಪರ್ಶ

ಗಣೇಶ್ ತಮ್ಮಡಿಹಳ್ಳಿ
Published 18 ಫೆಬ್ರುವರಿ 2022, 1:30 IST
Last Updated 18 ಫೆಬ್ರುವರಿ 2022, 1:30 IST
ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯದ ಹೊರ ನೋಟ
ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯದ ಹೊರ ನೋಟ   

ಶಿವಮೊಗ್ಗ: ನಗರದ ಡಿಜಿಟಲ್‌ ಗ್ರಂಥಾಲಯಗಳಲ್ಲಿ ಈವರೆಗೆ ನೋಂದಣಿಯಾದವರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ.

ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಅನ್ವಯ ರಾಜ್ಯದಲ್ಲಿ ಸಮಗ್ರವಾಗಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. 2020ರ ಫೆಬ್ರುವರಿಯಲ್ಲಿ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಇಲಾಖೆ ಪ್ರಾರಂಭಿಸಿತ್ತು. ಕೋವಿಡ್ ಕಾಣಿಸಿಕೊಂಡ ಬಳಿಕ ಗ್ರಂಥಗಳ ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗಿತ್ತು. ಕೊರೊನಾ ಸಂದಿಗ್ಧ ಸಮಯದಲ್ಲಿ ಓದುಗರ ಮನೆ ಬಾಗಿಲಿಗೆ ಪುಸ್ತಕ, ಅಂಗೈನಲ್ಲಿ ಅರಮನೆ ಎಂಬ ಪರಿಕಲ್ಪನೆಯೊಂದಿಗೆ ಡಿಜಿಟಲ್‌ ಗ್ರಂಥಾಲಯ ವ್ಯವಸ್ಥೆ ಆರಂಭಿಸಿದೆ. ಇದರಿಂದಾಗಿ ಹೆಸರು ನೋಂದಣಿ ಹಾಗೂ ಓದುಗರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.

5 ಲಕ್ಷ ದಾಟಿದ ಸದಸ್ವತ್ವ:ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಧೀನದ ನಗರ ಕೇಂದ್ರ ಗ್ರಂಥಾಲಯ ಹಾಗೂ ವಿನೋಬನಗರದ ನರಸಿಂಹ ಬಡಾವಣೆ ಶಾಖೆಯ ಗ್ರಂಥಾಲಯಗಳಲ್ಲಿ ಪ್ರಥಮ ಹಂತದ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ. ನಗರದ ಕೇಂದ್ರ ಗ್ರಂಥಾಲಯದಲ್ಲಿ 4,03,521, ವಿನೋಬನಗರದ ನರಸಿಂಹ ಬಡಾವಣೆ ಶಾಖೆ ಗ್ರಂಥಾಲಯದಲ್ಲಿ 1,15,765 ಸೇರಿ ಒಟ್ಟು 5, 19,286 ಮಂದಿ ಡಿಜಿಟಲ್‌ ಗ್ರಂಥಾಲಯದ ಸದಸ್ಯತ್ವ ಪಡೆದಿದ್ದಾರೆ.

ADVERTISEMENT

ನಗರದಲ್ಲಿ ಒಂದು ನಗರ ಕೇಂದ್ರ ಗ್ರಂಥಾಲಯ, ಜಿಲ್ಲಾ ಪೊಲೀಸ್‌ ಕಚೇರಿ ಆವರಣ, ಕೇಂದ್ರ ಕಾರಾಗೃಹದಲ್ಲಿರುವ ಗ್ರಂಥಾಲಯಗಳು ಸೇರಿ
12 ನಗರ ಕೇಂದ್ರ ಗ್ರಂಥಾಲಯದ ಶಾಖಾ ಗ್ರಂಥಾಲಯಗಳು, 13 ವಾಚನಾಲಯಗಳು ಇವೆ. ಈ ಪೈಕಿ ನಗರ ಕೇಂದ್ರ ಗ್ರಂಥಾಲಯ ಹಾಗೂ ವಿನೋಬನಗರದ ನರಸಿಂಹ ಬಡಾವಣೆ ಶಾಖೆ ಗ್ರಂಥಾಲಯಗಳಲ್ಲಿ ಪ್ರಥಮ ಹಂತದ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ.

ಏನಿದೆ ಇ–ಲೈಬ್ರರಿಯಲ್ಲಿ:ರಾಜ್ಯ ಸರ್ಕಾರದ ಡಿಜಿಟಲ್‌ ಲೈಬ್ರರಿಯಲ್ಲಿ 4.30 ಲಕ್ಷ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು 59,900 ವಿಶ್ವದ ದಿನ ಪತ್ರಿಕೆಗಳು ಲಭ್ಯವಿವೆ. ಶೈಕ್ಷಣಿಕ ಮತ್ತು ಕಲಿಕೆಗೆ ಅಗತ್ಯವಿರುವ ಎಲ್ಲ ವಿಭಾಗಗಳಿಗೆ ಸಂಬಂಧಿಸಿದ ಕನ್ನಡ, ಇಂಗ್ಲಿಷ್‌, ಹಿಂದಿ, ಉರ್ದು, ಮರಾಠಿ, ತಮಿಳು, ತೆಲುಗು ಭಾಷೆಯಲ್ಲಿ ಪಠ್ಯಗಳನ್ನು ಒದಗಿಸಲಾಗಿದೆ. ರಾಜ್ಯ, ಸಿಬಿಎಸ್ಸಿ ಪಠ್ಯಕ್ರಮವನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ಡಿಜಿಟಲ್‌ ರೂಪದಲ್ಲಿ ಉಚಿತವಾಗಿ ಒದಗಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗುವ ವಿಷಯಗಳೂ ಡಿಜಿಟಲ್ ಗ್ರಂಥಾಲಯದ ಪೋರ್ಟಲ್‌ನಲ್ಲಿ ಸಿಗುತ್ತಿವೆ.

ಒಟ್ಟು 4.13 ಲಕ್ಷ ಇ–ಪುಸ್ತಕ ಹಾಗೂ ನಿಯತಕಾಲಿಕೆಗಳನ್ನು ಓದುಗರಿಗೆ ಒದಗಿಸಲಾಗಿದೆ. ಕಥೆ, ನಾಟಕಗಳು, ರೂಪಕಗಳು ಸೇರಿ ಸಾಹಿತ್ಯದ ವಿವಿಧ ಪ್ರಕಾರಗಳು, ದಿನ ಪತ್ರಿಕೆಗಳು ಹಾಗೂ ವಿಡಿಯೊ ಲಿಂಕ್‌ಗಳನ್ನು ಡಿಜಿಟಲ್ ಗ್ರಂಥಾಲಯ ಜಾಲತಾಣದಲ್ಲಿ ಅಳವಡಿಸಲಾಗಿದೆ ಎನ್ನುತ್ತಾರೆ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಎಂ.ಆರ್‌. ಹರೀಶ್‌.

ಕೊರೊನಾ ಸಮಯದಲ್ಲಿ ತಂತ್ರಜ್ಞಾನ ಬಳಕೆಯೊಂದಿಗೆ ಪ್ರಾರಂಭಿಸಿದ ಡಿಜಿಟಲ್‌ ಗ್ರಂಥಾಲಯ ಓದುಗರಿಂದ ಯಶಸ್ವಿಯಾಗಿದೆ. ನಗರದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಡಿಜಿಟಲ್‌ ಗ್ರಂಥಾಲಯದ ಸದಸತ್ವ ಪಡೆದುಕೊಂಡಿರುವುದು ಆಶಾದಾಯಕ. ಇನ್ನೂ ಹೆಚ್ಚಿನ ಸಂಖ್ಯೆಯ ಓದುಗರು ಇದರ ಪ್ರಯೋಜನ ಪಡೆದುಕೊಳ್ಳಬೇಕು.

- ಎಂ.ಆರ್‌. ಹರೀಶ್‌, ಮುಖ್ಯ ಗ್ರಂಥಾಲಯ ಅಧಿಕಾರಿ, ನಗರ ಕೇಂದ್ರ ಗ್ರಂಥಾಲಯ ಶಿವಮೊಗ್ಗ.

ಸದ್ಯ ಸ್ಮಾರ್ಟ್‌ ಸಿಟಿ ವತಿಯಿಂದ 4 ಗ್ರಂಥಾಲಯಗಳಿಗೆ ಡಿಜಿಟಲ್‌ ಸೌಲಭ್ಯ ಒದಗಿಸಲಾಗಿದೆ. ಇವುಗಳ ನಿರ್ವಹಣೆ ಕುರಿತು ಚರ್ಚೆ ನಡೆಸಲಾಗಿದೆ. ಕೆಲ ಬಡಾವಣೆಗಳಲ್ಲಿ ಗ್ರಂಥಾಲಯಗಳಿಗೆ ಬೇಡಿಕೆ ಇದೆ. ಸದಸ್ಯರೊಟ್ಟಿಗೆ ಚರ್ಚಿಸಿದ್ದೇನೆ. ಎಲ್ಲೆಲ್ಲಿ ನಿವೇಶನ ಸೌಲಭ್ಯ ಇದೆ. ಅಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಸೂಚಿಸಲಾಗಿದೆ.

- ಸುನೀತಾ ಅಣ್ಣಪ್ಪ, ಮೇಯರ್, ಮಹಾನಗರ ಪಾಲಿಕೆ

ಡಿಜಿಟಲ್‌ ಗ್ರಂಥಾಲಯ ಬಳಸಲು ನೋಂದಣಿ ಪ್ರಕ್ರಿಯೆ ಹೇಗೆ?

ಇಲಾಖೆ ಅಭಿವೃದ್ಧಿಪಡಿಸಿರುವ ‘ಇ–ಸಾರ್ವಜನಿಕ ಗ್ರಂಥಾಲಯ’ ಮೊಬೈಲ್ ಆ್ಯಪ್ ಹಾಗೂ ಜಾಲತಾಣ www. karnatakadigitalpubliclibrary.org ಮೂಲಕ ನೋಂದಣಿ ಮಾಡಿಕೊಂಡು ಪುಸ್ತಕಗಳನ್ನು ಓದಬಹುದಾಗಿದೆ.

ಗೂಗಲ್‌ ಕ್ರೋಮ್‌ ಮೂಲಕ www. karnatakadigitalpubliclibrary.org ಟೈಪ್‌ ಮಾಡಿ, ಲಾಗಿನ್‌, ರಿಜಿಸ್ಟರ್‌ ಬಟನ್‌ ಆಯ್ಕೆ ಮಾಡಿ, ಈಗ ರಚಿಸಿ ಬಟನ್‌ ಕ್ಲಿಕ್‌ ಮಾಡಿ, ನಂತರ ಹೆಸರು, ಮೊಬೈಲ್‌ ಸಂಖ್ಯೆ, ಇ–ಮೇಲ್‌ ನೀಡಿ, ಡ್ರಾಪ್‌ಡೌನ್‌ ಪರಿವಿಡಿಯಿಂದ ಗ್ರಂಥಾಲಯವನ್ನು ಆಯ್ಕೆ ಮಾಡಿ ಸೈನ್‌ ಅಪ್‌ ಕ್ಲಿಕ್‌ ಮಾಡಬೇಕು. ಮೊಬೈಲ್‌ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ, ಪಾಸ್‌ವರ್ಡ್‌ ನಮೂದಿಸಿ, ಸೈನ್‌ ಅಪ್‌ ಬಟನ್‌ ಕ್ಲಿಕ್‌ ಮಾಡಬೇಕು. ಈಗ ಮೊಬೈಲ್‌ ಸಂಖ್ಯೆ ಮತ್ತು ಪಾಸ್‌ವರ್ಡ್‌ ಬಳಸಿ ಲಾಗಿನ್‌ ಮಾಡಬಹುದು. 1ರಿಂದ 6ರ ವರೆಗೆ ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಮೊಬೈಲ್‌ ಆ್ಯಪ್‌ನಿಂದ ಇದೇ ಲಾಗಿನ್‌ ಮತ್ತು ಪಾಸ್‌ವರ್ಡ್‌ ಬಳಸಿ ಡಿಜಿಟಲ್‌ ಗ್ರಂಥಾಲಯವನ್ನು ಉಪಯೋಗಿಸಬಹುದು.

ಸ್ಮಾರ್ಟ್‌ ಸಿಟಿಯಿಂದ 4 ಗ್ರಂಥಾಲಯಗಳಿಗೆ ಡಿಜಿಟಲ್‌ ಸ್ಪರ್ಶ

ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಶಿವಮೊಗ್ಗ ನಗರ ಕೇಂದ್ರದಲ್ಲಿರುವ ನಾಲ್ಕು ಗ್ರಂಥಾಲಯಗಳಿಗೆ ಡಿಜಿಟಲ್‌ ಸ್ಪರ್ಶದ ಸೌಕರ್ಯ ಒದಗಿಸಲಾಗಿದೆ.

ನಗರ ಕೇಂದ್ರ ಗ್ರಂಥಾಲಯ, ಬಸವನ ಗುಡಿ, ಶರಾವತಿ ನಗರ, ರವೀಂದ್ರನಗರದ ಸಾರ್ವಜನಿಕ ಗ್ರಂಥಾಲಯಗಳಿಗೆ ಡಿಜಿಟಲ್‌ ರೂಪ ದೊರೆತಿದೆ. ಈ ಗ್ರಂಥಾಲಯಗಳಲ್ಲಿ ಕಂಪ್ಯೂಟರ್‌ ಹಾಗೂ ಟ್ಯಾಬ್‌ ಸೌಲಭ್ಯ ಇದೆ. ಕರ್ನಾಟಕ ಡಿಜಿಟಲ್‌ ಸಾರ್ವಜನಿಕ ಗ್ರಂಥಾಲಯದ ವೆಬ್‌ಸೈಟ್‌ ಇದೆ. ಮೊಬೈಲ್‌ ನಂಬರ್‌ನಿಂದ ಲಾಗಿನ್‌ ಆಗಬೇಕು. ಪಾಸ್‌ವರ್ಡ್‌ ಅವರೇ ಕೊಡಬೇಕು. ಒಂದು ಬಾರಿ ಲಾಗಿನ್‌ ಆದರೆ ಮೊಬೈಲ್‌, ಕಂಪ್ಯೂಟರ್‌, ಟ್ಯಾಬ್‌ ಮೂಲಕ ಎಲ್ಲಿಬೇಕಾದರೂ ಡಿಜಿಟಲ್‌ ಗ್ರಂಥಾಲಯವನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದು.

ಹೆಚ್ಚುವರಿ ಗ್ರಂಥಾಲಯಕ್ಕೆ ಬೇಡಿಕೆ:ನಗರದದಲ್ಲಿ ಸದ್ಯ ಇರುವ ಶಾಖಾ ಗ್ರಂಥಾಲಯ ಹೊರತು‍ಪಡಿಸಿ, ಇನ್ನೂ ಕೆಲ ಬಡಾವಣೆಗಳಲ್ಲಿ ಗ್ರಂಥಾಲಯ ನಿರ್ಮಿಸಿಕೊಡುವಂತೆ ಸಾರ್ವಜನಿಕರಿಂದ ಬೇಡಿಕೆ ಬರುತ್ತಿದೆ. ಹೀಗಾಗಿ ಈಗಾಗಲೇ ಸಂಬಂಧಪಟ್ಟ ಪಾಲಿಕೆ ಸದಸ್ಯರು, ಅಧಿಕಾರಿಗಳಿಗೆ ಮನವಿ ಮಾಡಿದ್ದು, ಶಾಂತಿನಗರ, ಕಲ್ಲಹಳ್ಳಿ, ನಿವೇಶನ ಗುರುತಿಸಲಾಗಿದೆ. ಮಂಜೂರಾತಿ ಬಾಕಿ ಉಳಿದಿದೆ.

ಗಾಡಿಕೊಪ್ಪ ಮಲವಗೊಪ್ಪ, ಎಲ್‌ಬಿಎಸ್‌ ನಗರದ ಜನರಿಂದಲೂ ಗ್ರಂಥಾಲಯಕ್ಕೆ ಬೇಡಿಕೆ ಇರುವುದರಿಂದ ಪಾಲಿಕೆ ಸದಸ್ಯರಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಸೂಕ್ತ ಸ್ಪಂದನ ದೊರಕಿದೆ. ನಿವೇಶನ ಸಿಕ್ಕು ಮಂಜೂರಾತಿ ದೊರಕಿದರೆ ಶೀಘ್ರವೇ ಬೇಡಿಕೆ ಇರುವ ಕಡೆ ಗ್ರಂಥಾಲಯ ಸೌಲಭ್ಯ ನೀಡಬಹುದು ಎಂದು ಎಂ.ಆರ್‌. ಹರೀಶ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.