ADVERTISEMENT

ಪ್ರತಿಧ್ವನಿಸಿದ ಅಸಮರ್ಪಕ ವಿದ್ಯುತ್ ಪೂರೈಕೆ ಸಮಸ್ಯೆ

ಕರೂರು ಬಾರಂಗಿ ಹೋಬಳಿ ಜನರ ಕಷ್ಟಕ್ಕೆ ಸ್ಪಂದಿಸಲು ಕೆಡಿಪಿ ಸಭೆಯಲ್ಲಿ ಶಾಸಕ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 15:02 IST
Last Updated 29 ಮೇ 2025, 15:02 IST
ಸಾಗರದಲ್ಲಿ ಗುರುವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು 
ಸಾಗರದಲ್ಲಿ ಗುರುವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು    

ಪ್ರಜಾವಾಣಿ ವಾರ್ತೆ

ಸಾಗರ: ಕಳೆದ ವಾರ ಮೂರರಿಂದ ನಾಲ್ಕು ದಿನಗಳ ಕಾಲ ತಾಲ್ಲೂಕಿನ ಕರೂರು ಬಾರಂಗಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಜನರು ಕತ್ತಲಲ್ಲಿ ಕಾಲ ಕಳೆದ ವಿಷಯ ಗುರುವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿತು.

‘ಆ ಭಾಗದ ಜನ ನಾಡಿಗೆ ಬೆಳಕು ನೀಡಲು ಜಲ ವಿದ್ಯುತ್ ಯೋಜನೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದಾರೆ. ಅರಣ್ಯ ಮತ್ತು ಮೆಸ್ಕಾಂ ತಿಕ್ಕಾಟದಿಂದ ಜನರಿಗೆ ತೊಂದರೆ ಆಗುತ್ತಿದೆ. ರಾತ್ರಿ 11 ಗಂಟೆಗೆಲ್ಲ ಜನರು ಫೋನ್ ಮಾಡಿ ಕರೆಂಟ್ ಇಲ್ಲ ಎನ್ನುತ್ತಾರೆ. ಯಾವುದೇ ನೆಪ ಹೇಳದೆ ಮೊದಲು ಕರೆಂಟ್ ಕೊಡಿ’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಭದ್ರಾ ಕಂಪನಿಯಿಂದ ಪೂರೈಸಲಾಗಿರುವ ವಿದ್ಯುತ್ ಕಂಬಗಳ ಗುಣಮಟ್ಟ ತೀರಾ ಕಳಪೆಯಾಗಿದೆ ಎಂಬ ದೂರು ಬಂದಿದೆ. ಈ ಕಂಪನಿಗೆ ನೀಡಿರುವ ಗುತ್ತಿಗೆಯನ್ನು ರದ್ದುಗೊಳಿಸುವ ಸಂಬಂಧ ನಿರ್ಣಯ ಹೊರಡಿಸಿ’ ಎಂದು ಬೇಳೂರು ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಮುಂಬರುವ ಅಕ್ಟೋಬರ್ – ನವೆಂಬರ್ ತಿಂಗಳೊಳಗೆ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಅನುಷ್ಠಾನಗೊಳ್ಳಬೇಕಾಗಿದೆ. ಆದರೆ ಇದಕ್ಕೆ ಅಗತ್ಯವಿರುವ ವಿದ್ಯುತ್ ಪರಿವರ್ತಕಗಳ ಪೂರೈಕೆ ಇನ್ನೂ ಆಗದೇ ಇರುವ ಬಗ್ಗೆ ಬೇಳೂರು ಬೇಸರ ವ್ಯಕ್ತಪಡಿಸಿದರು.

ಭೂ ಕಂದಾಯ ಅಧಿನಿಯಮ ಕಲಂ 94 ‘ಸಿ.ಸಿ’ ಪ್ರಕಾರ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಚುರುಕುಗೊಳ್ಳಬೇಕು ಎಂದು ಬೇಳೂರು ತಾಕೀತು ಮಾಡಿದರು.

ಕಂದಾಯ ಮತ್ತು ಅರಣ್ಯ ಇಲಾಖೆಗೆ ಸೇರಿದ ಪ್ರದೇಶ ಒಂದೇ ಸರ್ವೆ ನಂಬರ್‌ನಲ್ಲಿ ಬರುತ್ತಿರುವ ಪ್ರಕರಣಗಳಲ್ಲಿ ಈ ಎರಡೂ ಇಲಾಖೆಗಳು ಸೇರಿ ನಡೆಸಬೇಕಾದ ಜಂಟಿ ಸರ್ವೆ ಕಾರ್ಯ ವಿಳಂಬವಾಗುತ್ತಿದೆ ಎಂದು ಕೆಡಿಪಿ ಸದಸ್ಯ ಜಿ.ಟಿ. ಸತ್ಯನಾರಾಯಣ ದೂರಿದರು.

‘ಮಂಕೋಡು ಗ್ರಾಮದ ಸರ್ವೆ ನಂ. 12ರಲ್ಲಿ ಅಕ್ರಮ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ ಆಗುತ್ತಿರುವ ಬಗ್ಗೆ ಕೆಡಿಪಿ ಸದಸ್ಯ ಭೀಮನೇರಿ ಆನಂದ್ ಸಭೆಯ ಗಮನ ಸೆಳೆದರು. ಈ ಸಂಬಂಧ ಸಾಗರ ತಾಲ್ಲೂಕು ಕಚೇರಿಯ ಸಿಬ್ಬಂದಿ ಮೇಲೆ ಆರೋಪ ಇರುವುದರಿಂದ ಬೇರೊಬ್ಬ ತಹಶೀಲ್ದಾರ್ ಅವರಿಂದ ತನಿಖೆ ನಡೆಸಲಾಗುವುದು’ ಎಂದು ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ತಿಳಿಸಿದರು.

‘ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ದಾಖಲೆ ಇಲ್ಲದಿದ್ದರೂ ಲಕ್ಷಾಂತರ ರೂಪಾಯಿಗೆ ಬೇರೆಯವರಿಗೆ ಮಾರಾಟ ಮಾಡುವುದೇ ಕೆಲವರಿಗೆ ದಂಧೆಯಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಸರ್ಕಾರಿ ಭೂಮಿ ಉಳಿಯುವುದಿಲ್ಲ. ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ’ ಎಂದು ಶಾಸಕ ಬೇಳೂರು ತಾಕೀತು ಮಾಡಿದರು.

‘ಅಕ್ರಮ ಕಟ್ಟಡಗಳ ಸಕ್ರಮೀಕರಣಕ್ಕೆ ಅರ್ಜಿ ಪಡೆಯಲು ಹಾಗೂ ಆ ಅರ್ಜಿಯನ್ನು ಮುಂದಿನ ಕ್ರಮಕ್ಕೆ ಕಳುಹಿಸಲು ಕೆಲವು ಗ್ರಾಮ ಲೆಕ್ಕಿಗರು ಫಲಾನುಭವಿಗಳಿಂದ ₹ 25,000 ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ’ ಎಂದು ಕೆಡಿಪಿ ಸದಸ್ಯ ಪ್ರಶಾಂತ್ ಆರೋಪಿಸಿದರು. ಇಂತಹ ದೂರು ಬಂದರೆ ಲೋಪ ಎಸಗಿದವರನ್ನು ಸೇವೆಯಿಂದ ಅಮಾನತು ಮಾಡುವಂತೆ ಶಾಸಕ ಬೇಳೂರು ಸೂಚಿಸಿದರು.

‘ನಗರವ್ಯಾಪ್ತಿಯಲ್ಲಿ ಮನೆಗಳ ಕಸ ಸಂಗ್ರಹಿಸಲು ನಗರಸಭೆಯ ವಾಹನ ಬರುತ್ತಿದ್ದರೂ ಕೆಲವರು ಕಸವನ್ನು ರಸ್ತೆಯ ಬದಿಗೆ ಎಸೆಯುತ್ತಿದ್ದಾರೆ. ಇದು ಸ್ವಚ್ಛತೆಗೆ ಮಾರಕವಾಗಿದೆ. ಈ ರೀತಿ ಕೆಲವರು ಮಾಡುವುದರಿಂದ ಡೆಂಗಿ ಹರಡುವ ಅಪಾಯವಿದೆ. ಇಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್. ಜಯಂತ್ ಒತ್ತಾಯಿಸಿದರು.

‘ಗೋವು ಕಳವು ಪ್ರಕರಣಗಳಲ್ಲಿ ಯಾವುದೇ ಧರ್ಮಕ್ಕೆ ಸೇರಿದವರಾದರೂ ತಕ್ಷಣ ಪ್ರಕರಣ ದಾಖಲಿಸಬೇಕು. ಹಾಗೆಂದು ಇಂತಹ ವಿಷಯದಲ್ಲಿ ನೈತಿಕ ಪೊಲೀಸ್ ಗಿರಿಗೆ ಅವಕಾಶವಿಲ್ಲ. ಪೊಲೀಸರ ಹೊರತು ಇತರೆಯವರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ’ ಎಂದು ಬೇಳೂರು ಸ್ಪಷ್ಟಪಡಿಸಿದರು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತಾ, ಡಿ.ಎಫ್.ಒ. ಮೋಹನ್ ಕುಮಾರ್, ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ, ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್ ಇದ್ದರು.

Cut-off box - ನಿಮ್ಮನ್ನೇ ವಾಹನದಲ್ಲಿ ಕೂರಿಸಿಕೊಂಡು ಹೋಗುವೆ  ತಾಲ್ಲೂಕಿನ ಯಲಗಳಲೆ ಗ್ರಾಮದ ಅಂಗವಿಕಲ ವೈ.ಕೆ. ಮಂಜುನಾಥ್ ಕೆಡಿಪಿ ಸಭೆಗೆ ಬಂದು ತಮಗೆ ಅಂಗವಿಕಲರಿಗೆ ನೀಡುವ ವಾಹನ ದೊರಕದೆ ಇರುವ ವಿಷಯವನ್ನು ಪ್ರಸ್ತಾಪಿಸಿದರು. ಆಗ ಶಾಸಕ ಬೇಳೂರು ಪ್ರತಿಕ್ರಿಯಿಸಿ ‘ವಾಹನ ಚಾಲನಾ ಪರವಾನಗಿ ಇಲ್ಲದಿರುವುದರಿಂದ ವಾಹನ ನೀಡಲು ಸಾಧ್ಯವಿಲ್ಲ’ ಎಂದರು. ನನಗೆ ವಾಹನ ಓಡಿಸಲು ಬಂದರೂ ಸಾರಿಗೆ ಇಲಾಖೆ ಅಧಿಕಾರಿಗಳು ಪರವಾನಗಿ ನೀಡುತ್ತಿಲ್ಲ. ಬೇಕಿದ್ದರೆ ಈಗ ನಿಮ್ಮನ್ನೇ ವಾಹನದಲ್ಲಿ ಕೂರಿಸಿಕೊಂಡು ಹೋಗುವೆ ಬನ್ನಿ’ ಎಂದು ಮಂಜುನಾಥ್ ಶಾಸಕರಿಗೆ ಆಹ್ವಾನ ನೀಡಿದಾಗ ಸಭೆ ನಗೆಗಡಲಲ್ಲಿ ತೇಲಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.