ADVERTISEMENT

ರೋಗಿಗಳ ಚಿಕಿತ್ಸಾ ವೆಚ್ಚ ಭರಿಸಲು ಜಿಲ್ಲಾಡಳಿತದ ಸ್ಪಂದನೆ

ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಮಂಗನ ಕಾಯಿಲೆ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 6:45 IST
Last Updated 10 ಜನವರಿ 2019, 6:45 IST
ಸಾಗರ ತಾಲ್ಲೂಕಿನ ಇಡುವಾಣಿ ಸಮೀಪದ ಕೆಪ್ಪಿಗೆ ಗ್ರಾಮದಲ್ಲಿ ಮಂಗನ ಕಾಯಿಲೆ ಸೋಂಕು ತಗುಲದಂತೆ ತಡೆಯುವ ಲಸಿಕೆ ಹಾಕಿಸಿಕೊಳ್ಳಲು ಬುಧವಾರ ಗ್ರಾಮಸ್ಥರು ಸಾಲಿನಲ್ಲಿ ನಿಂತಿದ್ದರು
ಸಾಗರ ತಾಲ್ಲೂಕಿನ ಇಡುವಾಣಿ ಸಮೀಪದ ಕೆಪ್ಪಿಗೆ ಗ್ರಾಮದಲ್ಲಿ ಮಂಗನ ಕಾಯಿಲೆ ಸೋಂಕು ತಗುಲದಂತೆ ತಡೆಯುವ ಲಸಿಕೆ ಹಾಕಿಸಿಕೊಳ್ಳಲು ಬುಧವಾರ ಗ್ರಾಮಸ್ಥರು ಸಾಲಿನಲ್ಲಿ ನಿಂತಿದ್ದರು   

ಸಾಗರ: ಮಂಗನ ಕಾಯಿಲೆಯಿಂದ ಬಳಲುತ್ತಿದ್ದು, ಮಣಿಪಾಲದ ಆಸ್ಪತ್ರೆಗೆ ದಾಖಲಾದ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಂಬಂಧ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತ ಮುಂದಾಗಿದೆ.

ಮಣಿಪಾಲದ ಆಸ್ಪತ್ರೆಯಲ್ಲಿ ಶೇ 70 ಬಿಲ್ ಪಾವತಿ ಮಾಡದೆ ರೋಗಿಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂಬ ಸುದ್ದಿಯ ಹಿನ್ನಲೆಯಲ್ಲಿ ಅಲ್ಲಿನ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಸಂಪರ್ಕ ಮಾಡಿರುವ ಜಿಲ್ಲಾಡಳಿತ ಆಯುಷ್ಮಾನ್ ಭಾರತ್ ಯೋಜನೆಯ ಸಂಯೋಜಕ ಪ್ರಕಾಶ್ ಅವರನ್ನು ಮಣಿಪಾಲಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದೆ.

ಬುಧವಾರ ಅರಲಗೋಡು ಗ್ರಾಮಕ್ಕೆ ಬಂದ ಪ್ರಕಾಶ್ ಅವರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮಣಿಪಾಲಕ್ಕೆ ರವಾನಿಸಿರುವ ರೋಗಿಗಳ ಮಾಹಿತಿ ಸಂಗ್ರಹಿಸಿದ್ದು ಚಿಕಿತ್ಸಾ ವೆಚ್ಚಕ್ಕೆ ರಿಯಾಯಿತಿ ಕೊಡಿಸಲು ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಈ ಕಾರಣ ಗುರುವಾರ ಸಂಜೆಯ ವೇಳೆಗೆ ಗುಣಮುಖರಾಗಿರುವ ರೋಗಿಗಳು ಮಣಿಪಾಲದ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ADVERTISEMENT

ಆರೋಗ್ಯ ಇಲಾಖೆಯ ಪ್ರಾದೇಶಿಕ ಸಹಾಯಕ ನಿರ್ದೇಶಕ ಡಾ.ರವಿಕುಮಾರ್, ‘ಕಣ್ಗಾವಲು ಘಟಕದ ನಿರ್ದೇಶಕಿ ಡಾ.ಪದ್ಮಾ ಅವರು ಅರಲಗೋಡು ಗ್ರಾಮಕ್ಕೆ ಬಂದಿದ್ದು, ಕಾಯಿಲೆ ಹರಡದಂತೆ ತಡೆಯಲು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲಿಸಿದ್ದಾರೆ.

ಈ ಸಂದರ್ಭದಲ್ಲಿ ಅವರೊಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಕೆಲವು ವೈದ್ಯರು ಬಂದಿದ್ದಾರೆ ಎಂಬ ವಿಷಯ ತಿಳಿದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ ಗ್ರಾಮಸ್ಥರು ಮೆಗ್ಗಾನ್ ಆಸ್ಪತ್ರೆಯ ಕಾರ್ಯವೈಖರಿ ಕುರಿತು ಅಸಮಧಾನ ವ್ಯಕ್ತಪಡಿಸಿದರು.

‘ತಾಲ್ಲೂಕು ಪಂಚಾಯಿತಿ ಸದಸ್ಯೆ ಪ್ರಭಾವತಿ ಚಂದ್ರಕಾಂತ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಕಾಂತ್ ಅವರು ಮೆಗ್ಗಾನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯತನದಿಂದ ಮೂವರು ರೋಗಿಗಳು ಮೃತಪಟ್ಟಿದ್ದಾರೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚಾರಿ ಆರೋಗ್ಯ ಘಟಕ ನಿರಂತರವಾಗಿ ಸಂಚರಿಸುತ್ತಿದ್ದು, ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಜ್ವರ ಬಂದು ಚೇತರಿಸಿಕೊಂಡಿದ್ದರೂ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎನ್ನುವ ತಿಳಿವಳಿಕೆ ಮೂಡಿಸುವ ಕೆಲಸದಲ್ಲಿ ಈ ಘಟಕ ನಿರತವಾಗಿದೆ.

ಅರಲಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಹಾಕುವ, ಮಂಗನ ಕಾಯಿಲೆ ಕುರಿತು ಆರೋಗ್ಯ ಇಲಾಖೆ ಸಿದ್ದಪಡಿಸಿರುವ ಕಿರುಚಿತ್ರ ಪ್ರದರ್ಶಿಸುವ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಧ್ವನಿವರ್ಧಕ ಮೂಲಕ ಗ್ರಾಮಗಳಲ್ಲಿ ಕಾಯಿಲೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.