ADVERTISEMENT

ಬೀದಿ ಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸಬೇಡಿ

ಜಿಲ್ಲಾಡಳಿತಕ್ಕೆ ವ್ಯಾಪಾರಸ್ಥರ ಸಂಘದಿಂದ ಮನವಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 5:52 IST
Last Updated 15 ನವೆಂಬರ್ 2022, 5:52 IST
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ನಡೆದ ಪ್ರತಿಭಟನೆ ನೋಟ
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ನಡೆದ ಪ್ರತಿಭಟನೆ ನೋಟ   

ಶಿವಮೊಗ್ಗ: ನಗರದ ಬೀದಿ ಬದಿಗಳಲ್ಲಿ ವ್ಯಾಪಾರ ನಡೆಸಿ ಬದುಕಲು ಅವಕಾಶ ನೀಡುವಂತೆ ಕೋರಿ ಕರ್ನಾಟಕ
ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ರಾಷ್ಟ್ರೀಯ ನಗರ ಮತ್ತು ಸಂರಕ್ಷಣೆ ಜೀವನೋಪಾಯ ಬೀದಿಬದಿ ವ್ಯಾಪಾರಿಗಳ ಅಧಿನಿಯಮದ ಅಡಿ ಬೀದಿಬದಿ ವ್ಯಾಪಾರಸ್ಥರಿಗೆ ಜೀವನ ನಡೆಸಲು ಹಾಗೂ ಬದುಕಲು ಅವಕಾಶ ನೀಡಬೇಕು. ಆದರೆ, ಬೀದಿಬದಿ ವ್ಯಾಪಾರಿಗಳನ್ನು ಏಕಾಏಕಿ ಒಕ್ಕಲೆಬ್ಬಿಸುವ ಕಾರ್ಯ ಜಿಲ್ಲಾಡಳಿತ ಮತ್ತು ಪಾಲಿಕೆ ವತಿಯಿಂದ ನಡೆಯುತ್ತಿದೆ. ಈ ರೀತಿಯ ಏಕಾಏಕಿ ಒಕ್ಕಲೆಬ್ಬಿಸುವ ಕಾರ್ಯದಿಂದ ಬದುಕುವುದೇ ಕಷ್ಟವಾಗಿದೆ ಎಂದು ಒಕ್ಕೂಟದ ಸದಸ್ಯರು ದೂರಿದರು.

‘ಬೀದಿಬದಿ ವ್ಯಾಪಾರಿಗಳು ತಮ್ಮ ಹೊಟ್ಟೆಪಾಡಿಗಾಗಿ ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಬಂದಿದ್ದು, ಸಾಲ ಮಾಡಿಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಮನೆಬಾಡಿಗೆ, ಕುಟುಂಬ ನಿರ್ವಹಣೆ, ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲಾಡಳಿತದ ಈ ನಿರ್ಧಾರದಿಂದ ನಮ್ಮ ಕುಟುಂಬಗಳು ಬೀದಿಗೆ ಬಿದ್ದಿವೆ’ ಎಂದರು.

ADVERTISEMENT

‘ಪಾಲಿಕೆಯಿಂದ ನಮಗೆ ಗುರುತಿನ ಚೀಟಿ ನೀಡಿದ್ದು, ಪಿಎಂ ಸ್ವನಿಧಿ ಯೋಜನೆಯಿಂದ ಸಾಲ ಪಡೆದಿದ್ದೇವೆ. ಕೊರೊನಾ ಸಂಕಷ್ಟದಿಂದ ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿದ್ದಾರೆ. ವ್ಯಾಪಾರಕ್ಕೆ ಸೂಕ್ತ ಸ್ಥಳಾವಕಾಶ ನೀಡುವವರೆಗೆ ಈಗಿರುವ ಕಡೆಯೇ ವ್ಯಾಪಾರಕ್ಕೆ ಅವಕಾಶ ನೀಡಬೇಕು’ ಎಂದು ಕೋರಿದರು.

ಒಕ್ಕೂಟದ ಪದಾಧಿಕಾರಿಗಳಾದ ಮಣಿಗೌಂಡರ್, ನಾರಾಯಣ್, ವಿನಯ್‍ಕುಮಾರ್, ಶೇಷಯ್ಯ, ಇರ್ಫಾನ್, ದಿನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.