ADVERTISEMENT

ಬನ್ನಿ ಮುಡಿದು ದಸರಾ ಆಚರಣೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 3:47 IST
Last Updated 27 ಅಕ್ಟೋಬರ್ 2020, 3:47 IST
ಶಿಕಾರಿಪುರ ತಾಲ್ಲೂಕಿನ ಬೇಗೂರು ಗ್ರಾಮದ ಮರಡಿ ತಾಂಡಾದಲ್ಲಿ ಸೋಮವಾರ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಎಂ.ಪಿ. ಕವಿರಾಜ್‌ ಬನ್ನಿಗೆ ಪೂಜೆ ಸಲ್ಲಿಸಿದರು.
ಶಿಕಾರಿಪುರ ತಾಲ್ಲೂಕಿನ ಬೇಗೂರು ಗ್ರಾಮದ ಮರಡಿ ತಾಂಡಾದಲ್ಲಿ ಸೋಮವಾರ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಎಂ.ಪಿ. ಕವಿರಾಜ್‌ ಬನ್ನಿಗೆ ಪೂಜೆ ಸಲ್ಲಿಸಿದರು.   

ಶಿಕಾರಿಪುರ:ವಿವಿಧ ಗ್ರಾಮಗಳ ದೇವರ ಸಮ್ಮುಖದಲ್ಲಿ ತಾಲ್ಲೂಕಿನ ಬೇಗೂರು ಗ್ರಾಮದ ಮರಡಿ ತಾಂಡಾದ ಗಾಳಿ ಆಂಜನೇಯ ದೇವಸ್ಥಾನ ಮುಂಭಾಗದ ದಿಬ್ಬದಲ್ಲಿ ಸೋಮವಾರ ಬನ್ನಿ ಮುಡಿಯುವ ಮೂಲಕ ತಾಲ್ಲೂಕಿನ ಜನತೆ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಸಂಪ್ರದಾಯದಂತೆ ಶಿಕಾರಿಪುರ ಪಟ್ಟಣದ ಹುಚ್ಚರಾಯಸ್ವಾಮಿ, ದೊಡ್ಡಕೇರಿ ಗಿಡ್ಡಯ್ಯ ಸ್ವಾಮಿ, ಶಿರಸಿ ಮಾರಿಕಾಂಬಾ, ಬೇಗೂರು ಗ್ರಾಮದ ಆಂಜನೇಯಸ್ವಾಮಿ, ಬೆಂಡೆಕಟ್ಟೆ ಬಸವೇಶ್ವರ ಸ್ವಾಮಿ, ಆಪಿನಕಟ್ಟೆ ಕೊನೆ ಬಸವಣ್ಣ ಹಾಗೂ ಬಾಳೆಕೊಪ್ಪದ ಹನುಮಂತ ದೇವರ ಮೂರ್ತಿಯನ್ನು ಪಲ್ಲಕ್ಕಿ ಮೂಲಕ ಬೇಗೂರು ಗ್ರಾಮದ ಮರಡಿ ತಾಂಡಾಕ್ಕೆ ಹೊತ್ತು ತರಲಾಯಿತು. ಈ ಬಾರಿ ಪಟ್ಟಣದ ಸೊಪ್ಪಿನಕೇರಿ ಹುಲಿಕಟ್ಟೆಪ್ಪಸ್ವಾಮಿ ದೇವರು ಪೂಜೆಯಲ್ಲಿ ಪಾಲ್ಗೊಂಡಿರಲಿಲ್ಲ.

ಎಲ್ಲಾ ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ನಂತರ ಸಂಪ್ರದಾಯದಂತೆ ಮೈಸೂರು ಪೇಟ ಧರಿಸಿದ್ದ ತಹಶೀಲ್ದಾರ್‌ ಎಂ.ಪಿ. ಕವಿರಾಜ್‌ ಐತಿಹಾಸಿಕ ದೊಂಡಿವಾಘನ ಖಡ್ಗ ಹಿಡಿದು ಬನ್ನಿಗೆ ಪೂಜೆ ಸಲ್ಲಿಸಿ, ಬಾಳೆ ಕಂಬವನ್ನು ಕತ್ತರಿಸುವ ಮೂಲಕ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಿದರು.

ADVERTISEMENT

ತಹಶೀಲ್ದಾರ್‌ ಎಂ.ಪಿ. ಕವಿರಾಜ್‌, ‘‌ಭಕ್ತರ ಬೇಡಿಕೆಯಂತೆ 9 ಎಕರೆ 36 ಗುಂಟೆಯ ಈ ಸ್ಥಳವನ್ನು ದೇವಸ್ಥಾನ ಉದ್ದೇಶಕ್ಕಾಗಿ ಹಾಗೂ ಬನ್ನಿ ಮುಡಿಯುವ ಕಾರ್ಯಕ್ಕಾಗಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಮೀಸಲಿಟ್ಟಿದೆ. ಈ ಸ್ಥಳದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹ 3 ಕೋಟಿ ಅನುದಾನ ನೀಡಿದ್ದಾರೆ’ ಎಂದರು.

ಬನ್ನಿ ಮುಡಿಯುವ ಕಾರ್ಯಕ್ರಮದ ನಂತರ ನಾಗರಿಕರು ವಿವಿಧ ಗ್ರಾಮಗಳಲ್ಲಿ ಬನ್ನಿ ವಿತರಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.