ADVERTISEMENT

ನಸುಕಿನಲ್ಲಿ ಭೂಕಂಪನದ ಅನುಭವ

ಕಂಪನದ ದತ್ತಾಂಶ ದಾಖಲಾಗಿಲ್ಲ; ಡಿಸಿ ಡಾ.ಅರ್. ಸೆಲ್ವಮಣಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 6:18 IST
Last Updated 7 ಅಕ್ಟೋಬರ್ 2022, 6:18 IST
ಶಿರಾಳಕೊಪ್ಪದಲ್ಲಿ ಗುರುವಾರ ಪೆಟ್ರೋಲ್ ಬಂಕ್ ಗಾಜು ಒಡೆದ ಸ್ಥಳಕ್ಕೆ ಜಿಲ್ಲಾಧಿಕಾರಿ ಸೆಲ್ವಮಣಿ, ತಹಶೀಲ್ದಾರ್ ಕವಿರಾಜ್, ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಸಬ್ ಇನ್‌ಸ್ಪೆಕ್ಟರ್ ರಮೇಶ್, ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಇದ್ದಾರೆ.
ಶಿರಾಳಕೊಪ್ಪದಲ್ಲಿ ಗುರುವಾರ ಪೆಟ್ರೋಲ್ ಬಂಕ್ ಗಾಜು ಒಡೆದ ಸ್ಥಳಕ್ಕೆ ಜಿಲ್ಲಾಧಿಕಾರಿ ಸೆಲ್ವಮಣಿ, ತಹಶೀಲ್ದಾರ್ ಕವಿರಾಜ್, ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಸಬ್ ಇನ್‌ಸ್ಪೆಕ್ಟರ್ ರಮೇಶ್, ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಇದ್ದಾರೆ.   

ಶಿರಾಳಕೊಪ್ಪ: ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಹಾಗೂ ಸುತ್ತಮುತ್ತಲಿನ ಬಳ್ಳಿಗಾವಿ, ತಾಳಗುಂದ, ಬಿಸಿಲಹಳ್ಳಿ, ಹಿರೇಜಂಬೂರು, ನಾಗೀಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಗುರುವಾರ ನಸುಕಿನ 3.55ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಸೊರಬ ರಸ್ತೆಯ ಬಾಲಾಜಿ ಪೆಟ್ರೋಲ್‌ ಬಂಕ್‌ ಕಚೇರಿ ಕಟ್ಟಡದ ಮುಂದಿನ ಗಾಜುಗಳು ಒಡೆದಿವೆ. ಭೂಕಂಪನವಾಗಿರುವ ಬಗ್ಗೆ ಸ್ಥಳೀಯರು ಅನುಭವ ಹೇಳಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಮಾಹಿತಿ ಹಂಚಿಕೊಂಡಿದ್ದಾರೆ.

ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅವರು ಪುರಸಭೆ, ಕಂದಾಯ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.

ADVERTISEMENT

‘ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ಮಾಹಿತಿ ಕೇಳಲಾಗಿತ್ತು. ಲಿಂಗನಮಕ್ಕಿ ಅಣೆಕಟ್ಟು, ಹಾಸನದ ಹೇಮಾವತಿ ಅಣೆಕಟ್ಟು, ಉತ್ತರ ಕನ್ನಡ ಜಿಲ್ಲೆಯ ಸೂಪಾ ಅಣೆಕಟ್ಟು, ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟು ಹಾಗೂ ಉಡುಪಿ ಜಿಲ್ಲೆಯಲ್ಲಿ ಸ್ಥಾಪಿಸಿರುವ ಶಾಶ್ವತ ಭೂಕಂಪನ ಮಾಪನ ಕೇಂದ್ರದ ದತ್ತಾಂಶಗಳನ್ನು ಪರಿಶೀಲಿಸಿದಾಗ ಅಲ್ಲಿ ಭೂಕಂಪನದ ದತ್ತಾಂಶ ದಾಖಲಾಗಿಲ್ಲ ಎಂಬುದಾಗಿ ಕೇಂದ್ರ ವರದಿನೀಡಿದೆ’ ಎಂದು ಜಿಲ್ಲಾಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.

‘ಕೆಲವು ಸಾರಿ ಕಡಿಮೆ ಪ್ರಮಾಣದಲ್ಲಿ ಕಂಪನವಾದಾಗ ರಿಕ್ಟರ್‌ ಮಾಪಕದಲ್ಲಿ ಮಾಹಿತಿ ದಾಖಲಾಗದೇ ಇರುವ ಸಾಧ್ಯತೆ ಇದೆ. ಆದರೂ, ಅಧಿಕಾರಿಗಳು ಬೇರೆ ಆಯಾಮದಲ್ಲೂ ತನಿಖೆ ಮಾಡುವ ಅವಶ್ಯಕತೆ ಇದೆ. ಗ್ರಾಮಗಳು ಹಾಗೂ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ಫೋಟ ಆಗಿರುವ ಬಗ್ಗೆ, ಮಣ್ಣು ಕುಸಿದಿರುವ ಬಗ್ಗೆ, ಹಾನಿಯಾಗಿರುವ ಬಗ್ಗೆ ತನಿಖೆ ಮಾಡಿ ವರದಿ ನೀಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಬೇರೆ ಆಯಾಮದಲ್ಲೂ ಈ ಬಗ್ಗೆ ಪರಿಶೀಲನೆ ನಡೆಸಿ ಕಂಪನ ಏಕೆ ಆಗಿದೆ‘ ಇದರಿಂದ ಎಲ್ಲಿಯಾದರೂ ಹಾನಿಯಾಗಿದೆಯೇ ಎಂಬುದರ ಬಗ್ಗೆ ವರದಿ ನೀಡಬೇಕು’ ಎಂದು ಅಧಿಕಾರಿಗಳಿಗೆಸೂಚಿಸಿದರು.

ತಹಶೀಲ್ದಾರ್‌ ಎಂ.ಪಿ. ಕವಿರಾಜ್‌, ಮುಖ್ಯಾಧಿಕಾರಿ ಹೇಮಂತ್‌ ಡೊಳ್ಳೆ, ಡಿವೈಎಸ್‌ಪಿ ಶಿವಾನಂದ ಮದರಕಂಡಿ ಇದ್ದರು.

ಭೂಕಂಪನ ಅಲ್ಲದಿದ್ದರೆ ಮತ್ತೇನು?
‘ನಾವು ಇಬ್ಬರು ರಾತ್ರಿ ದೇವಸ್ಥಾನದ ಕಾವಲು ಕಾಯುತ್ತಿದ್ದೆವು. ಬೆಳಗಿನ ಜಾವ ಇಡೀ ದೇವಸ್ಥಾನವೇ ಅಲುಗಾಡಿದ ಅನುಭವ ಆಯಿತು’ ಎಂದು ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನದ ಕಾವಲುಗಾರ ಚಂದ್ರು ತಿಳಿಸಿದರು.

‘ಕಂಪಿಸಿದ ಸದ್ದಿಗೆ ಭಯದಿಂದ ಎದ್ದು ಕುಳಿತುಕೊಂಡೆ. 2 ಬಾರಿ ಈ ಅನುಭವಾಗಿದೆ’ ಎಂದು ಶಿರಾಳಕೊಪ್ಪದ ನಿವಾಸಿ ಸುಧಾಕರ ತಿಳಿಸಿದರು.

‘ಮೊದಲ ಸಲ ಆದಾಗ ಜೋರಾದ ಕಂಪನವಿತ್ತು. ಎರಡನೇ ಬಾರಿ ಶಬ್ದ ಹೆಚ್ಚಾಗಿತ್ತು’ ಎಂದು ಶಿಕ್ಷಕ ಹಿರೇಜಂಬೂರು ರಮೇಶ್‌ ಪ್ರತಿಕ್ರಿಯಿಸಿದರು.

ಪುರಸಭೆ ಸದಸ್ಯ ತಡಗಣಿ ಮಂಜುನಾಥ, ‘ಜೀವನದಲ್ಲಿ 3 ಬಾರಿ ಭೂ ಕಂಪನದ ಅನುಭವ ಪಡೆದಿದ್ದೇನೆ. ಇದು ಕೂಡ ಅದೇ ಮಾದರಿಯಲ್ಲಿದೆ. ಹುಣಸೋಡು ಸ್ಫೋಟ ಅನುಭವ ಮಾತ್ರ ಬೇರೆ ರೀತಿ ಇತ್ತು.

‘ಕಂಪನದ ಸದ್ದಿಗೆ ನನ್ನ ಮಗ ಮಹಡಿಯಿಂದ ಕೆಳಗೆ ಇಳಿದು ಬಂದ. ನನಗೂ ಅನುಭವ ಆಗಿದೆ. ಇಲ್ಲ ಎನ್ನುವುದಾದರೆ, ಭೂಮಿ ಕಂಪಿಸಲು, ಭಾರಿ ಸದ್ದಿಗೆ ಕಾರಣವೇನು?’ ಎಂದು ಎಂ.ಎನ್. ಪಿಕಲ್ಸ್‌ ಮಾಲೀಕ್‌ ಎಂ.ಆರ್. ಸತೀಶ್‌ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.