ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ: ಶಾಂತಿಯುತ ಮತದಾನ; ಜೂನ್‌ 3ಕ್ಕೆ ಮತ ಎಣಿಕೆ

ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ಹೊಸನಗರ, ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 29 ಮೇ 2019, 13:01 IST
Last Updated 29 ಮೇ 2019, 13:01 IST
   

ಶಿವಮೊಗ್ಗ: ಜಿಲ್ಲೆಯ ನಾಲ್ಕು ಸ್ಥಳೀಯ ಸಂಸ್ಥೆಗಳಿಗೆ ಬುಧವಾರ ಶಾಂತಿಯುತ ಮತದಾನ ನಡೆಯಿತು.

ಸಾಗರ ನಗರಸಭೆ, ಶಿಕಾರಿಪುರ ಪುರಸಭೆ ಹಾಗೂ ಹೊಸನಗರ, ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಗಳ 82 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 289 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಎಲ್ಲ ಅಭ್ಯರ್ಥಿಗಳ ಭವಿಷ್ಯ ಸಂಜೆ ವೇಳೆಗೆ ಮತಯಂತ್ರ ಸೇರಿತು.

ಸಾಗರ ನಗರಸಭೆಯ 31 ವಾರ್ಡ್‌ಗಳು, ಶಿಕಾರಿಪುರ ಪುರಸಭೆಯ 23, ಹೊಸನಗರ ಪಟ್ಟಣ ಪಂಚಾಯಿತಿ 11 ಹಾಗೂ ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯ 17 ವಾರ್ಡ್‌ಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಿತು. ಯಾವ ಮತಗಟ್ಟೆಗಳಲ್ಲೂ ಮತಯಂತ್ರ ದೋಷ ಕಂಡುಬರಲಿಲ್ಲ. ಕೆಲವು ವಾರ್ಡ್‌ಗಳಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ADVERTISEMENT

ಸಾಗರದಲ್ಲಿ 133, ಶಿಕಾರಿಪುರ 68, ಹೊಸನಗರ 25, ಶಿರಾಳಕೊಪ್ಪದಲ್ಲಿ 53 ಅಭ್ಯರ್ಥಿಗಳು ಕಣದಲ್ಲಿದ್ದರು. ಹಲವು ಕಡೆ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಕೆಲವು ಭಾಗಗಳಲ್ಲಿ ಬಿಸಿಲಿನ ಪ್ರಖರತೆ ಜಾಸ್ತಿ ಇದ್ದರೂ ಲೆಕ್ಕಿಸದೆ ಮತದಾರರು ಮತ ಚಲಾಯಿಸಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಹಲವು ಮತದಾನ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಭೇಟಿ ನೀಡಿದ್ದರು.

ಜೂನ್‌ 3ಕ್ಕೆ ಮತ ಎಣಿಕೆ

ಚುನಾವಣಾ ಆಯೋಗ ಮೇ 31ರಂದೇ ಮತ ಎಣಿಕೆಗೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಸೊರಬ ಪಟ್ಟಣ ಪಂಚಾಯಿತಿ ಚುನಾವಣೆ ಘೋಷಣೆ ವಿಳಂಬವಾದ ಕಾರಣ (ಜೂನ್‌ 1ರಂದು ಮತದಾನ ನಡೆಯಲಿದೆ) 3 ರಂದು ಮತ ಎಣಿಕೆ ನಡೆಸಲು ದಿನ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.