ಶಿವಮೊಗ್ಗ: ಲಕ್ಕವಳ್ಳಿಯ ಭದ್ರಾ ಜಲಾಶಯದ ಬಳಿ ಬಲದಂಡೆ ನಾಲೆಯಿಂದ ಹೊಸದುರ್ಗ ಕುಡಿಯುವ ನೀರು ಯೋಜನೆಗೆ ನೀರು ಹರಿಸಲು ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಬುಧವಾರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿ ಪ್ರೊ.ಮೋಹನ್ ಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ನಾಲೆಯಿಂದ ನೀರು ಹರಿಸುವ ವಿಚಾರದಲ್ಲಿ ದಾವಣಗೆರೆ ಜಿಲ್ಲೆಯ ಕೊನೆಯ ಭಾಗದ ರೈತರಿಂದ ವಿರೋಧ ವ್ಯಕ್ತವಾದ ಕಾರಣ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಜಲಜೀವನ್ ಮಿಷನ್ ಸಮಿತಿಯು ಐಐಎಸ್‌ಸಿ ತಜ್ಞರ ಮೊರೆ ಹೋಗಿತ್ತು. ಜೂನ್ 23ರಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನೇತೃತ್ವದಲ್ಲಿ ನಡೆದ ಮೂರು ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ತಜ್ಞರ ಸಮಿತಿಯ ವರದಿ ಪಡೆಯುವ ನಿರ್ಣಯ ಕೈಗೊಂಡು, ಮರು ದಿನವೇ ಐಐಎಸ್‌ಸಿಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ತಕ್ಷಣವೇ ಸ್ಪಂದನೆ ದೊರೆತಿದೆ.
ಐಐಎಸ್‌ಸಿ ತಂಡದೊಂದಿಗೆ ಚಿತ್ರದುರ್ಗದ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಸೂಪರಿಂಟೆಂಡೆಂಟ್ ಎಂಜಿನಿಯರ್ ಬಸನಗೌಡ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಚಿದಾನಂದಪ್ಪ, ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ರವಿಕುಮಾರ್ ಇದ್ದರು. ಜಲಾಶಯದಿಂದ ಕಾಮಗಾರಿ ಕೈಗೆತ್ತಿಕೊಂಡಿರುವ ಸ್ಥಳದ ಅಂತರ, ಸಮುದ್ರ ಮಟ್ಟದಿಂದ ಇರುವ ಎತ್ತರ, ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ, ಕಾಲುವೆಯಲ್ಲಿ ನೀರು ಹರಿವಿನ ಪ್ರಮಾಣ ಹಾಗೂ ಸೆಳವು ಬಗ್ಗೆ ತಜ್ಞರ ತಂಡ ಈ ವೇಳೆ ತಾಂತ್ರಿಕ ಮಾಹಿತಿ ಪಡೆಯಿತು ಎಂದು ತಿಳಿದುಬಂದಿದೆ.
ತುರ್ತಾಗಿ ವರದಿ ಕೊಡಿ:
‘ವಾಡಿಕೆಯಂತೆ ಜುಲೈ 16ರಿಂದ ಮುಂಗಾರು ಹಂಗಾಮಿಗೆ ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಹರಿಸಬೇಕಿದೆ. ಅದಕ್ಕೂ ಮುನ್ನ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಯಲಿದೆ. ಅಷ್ಟರೊಳಗೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಕಾಮಗಾರಿ ಸ್ಥಗಿತಗೊಳಿಸಿ ನಾಲೆಯ ತಡೆಗೋಡೆ ಪುನರ್‌ನಿರ್ಮಿಸಬೇಕಿದೆ. ಹೀಗಾಗಿ ತುರ್ತಾಗಿ ವರದಿ ಕೊಡುವಂತೆ ಐಐಎಸ್‌ಸಿ ತಜ್ಞರ ತಂಡಕ್ಕೆ ಮನವಿ ಮಾಡಿದ್ದೇವೆ’ ಎಂದು ಕರ್ನಾಟಕ ನೀರಾವರಿ ನಿಗಮದ (ಕೆಎನ್‌ಎನ್) ಜಲಾಶಯ ನಿರ್ವಹಣಾ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದರು.
ಐಐಎಸ್ಸಿ ತಂಡಕ್ಕೆ ಫೋಟೊ ವಿಡಿಯೊ ಸೇರಿದಂತೆ ಅಗತ್ಯ ತಾಂತ್ರಿಕ ದಾಖಲೆ ಒದಗಿಸಿದ್ದೇವೆ. ಎರಡರಿಂದ ಮೂರು ದಿನಗಳಲ್ಲಿ ವರದಿ ಕೊಡುವ ಸಾಧ್ಯತೆ ಇದೆಎಂ.ಬಸನಗೌಡಎಸ್.ಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿತ್ರದುರ್ಗ
ಕಾಮಗಾರಿ ತಾತ್ಕಾಲಿಕ ಸ್ಥಗಿತ
ಭದ್ರಾ ಬಲದಂಡೆ ನಾಲೆಯಿಂದ ಚಿತ್ರದುರ್ಗ ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸುವ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ‘ಐಐಎಸ್‌ಸಿ ತಜ್ಞರು ಶೀಘ್ರ ವರದಿ ನೀಡಲಿದ್ದಾರೆ. ನಂತರವಷ್ಟೇ ಕಾಮಗಾರಿ ಮುಂದುವರೆಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಮ್ಮ ಹೆಸರು ಬಹಿರಂಗಪಡಿಸಲಿಚ್ಚಿಸದ ಜಲಜೀವನ್ ಮಿಷನ್ ಅನುಷ್ಠಾನ ಸಮಿತಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.