ADVERTISEMENT

ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಶೋಷಣೆ

ಸಾವಿತ್ರಿಬಾಯಿ ಫುಲೆ ಜಯಂತಿಯಲ್ಲಿ ಉಪನ್ಯಾಸಕಿ ವೃಂದಾ ಹೆಗಡೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 4:33 IST
Last Updated 4 ಜನವರಿ 2022, 4:33 IST
ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ನಡೆದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಪೌರಕಾರ್ಮಿಕರಾದ ಗೌರಮ್ಮ ಉದ್ಘಾಟಿಸಿದರು.
ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ನಡೆದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಪೌರಕಾರ್ಮಿಕರಾದ ಗೌರಮ್ಮ ಉದ್ಘಾಟಿಸಿದರು.   

ಸಾಗರ: ಸಂಪ್ರದಾಯ, ಆಚರಣೆಗಳ ಹೆಸರಿನಲ್ಲಿ ಆಧುನಿಕತೆಯ ಈ ಕಾಲದಲ್ಲೂ ಮಹಿಳೆಯರನ್ನು ವಿವಿಧ ಸ್ವರೂಪದಲ್ಲಿ ಶೋಷಿಸಲಾಗುತ್ತಿದೆ ಎಂದು ಉಪನ್ಯಾಸಕಿ ವೃಂದಾ ಹೆಗಡೆ ಬೇಸರಿಸಿದರು.

ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಕಾಲೇಜಿನ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಕ್ಷೇಮಪಾಲನಾ ಕೋಶ ಸೋಮವಾರ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಶೋಷಣೆಯ ಕಾರಣಕ್ಕೆ ಹೆಣ್ಣುಮಕ್ಕಳ ಸ್ವಾತಂತ್ರ್ಯ, ಸಮಾನತೆಯ ಪ್ರಶ್ನೆಗಳು ಮುನ್ನಲೆಗೆ ಬರಲು ಇಂದಿಗೂ ಹೆಣಗುತ್ತಿವೆ. ಶಿಕ್ಷಣದ ಮೂಲಕವೇ ಹೆಣ್ಣುಮಕ್ಕಳು ತಮ್ಮ ಅನನ್ಯತೆಯನ್ನು ಕಟ್ಟಿಕೊಳ್ಳಬೇಕಾಗಿದೆ ಎಂಬ ದಾರಿಯನ್ನು ಸಾವಿತ್ರಿಬಾಯಿ ಫುಲೆ ತೋರಿದ್ದಾರೆ ಎಂದರು.

ADVERTISEMENT

ಸಂಪ್ರದಾಯ, ಕಂದಾಚಾರಗಳನ್ನು ಸೃಷ್ಟಿಸಿದ ಆಳುವ ವರ್ಗಗಳು ತಮ್ಮ ಯಜಮಾನಿಕೆಯ ಶಾಶ್ವತ ಮುಂದುವರಿಕೆಗಾಗಿ ಹಲವು ರೀತಿಯ ಹುನ್ನಾರಗಳನ್ನು ಇಂದಿಗೂ ನಡೆಸುತ್ತಲೇ ಇವೆ. ಅದರ ಭಾಗವಾಗಿಯೇ ರೂಪಿಸಲಾಗಿರುವ ಜಾತಿ ವ್ಯವಸ್ಥೆ ಕೆಳ ಜಾತಿಗಳ ಪಾಲಿಗೆ ಕಾರಾಗೃಹದಂತಿದೆ. ಶೈಕ್ಷಣಿಕ ಜಾಗೃತಿಯ ಮೂಲಕವೇ ಜಾತಿಯ ಕೋಟೆಯನ್ನು ಮುರಿದು ಕಟ್ಟಬೇಕಿದೆ ಎಂದು ಸಲಹೆ ನೀಡಿದರು.

ಜ್ಞಾನವನ್ನು ಹಲವು ಸಾವಿರ ವರ್ಷಗಳ ಕಾಲ ಮಹಿಳೆಯರ ಪಾಲಿಗೆ ನಿಷೇಧಿಸಲಾಗಿತ್ತು. ಈ ನಿಷೇಧಗಳ ಕೋಟೆಯನ್ನು ಮುರಿದ ಸಾವಿತ್ರಿಬಾಯಿ ಮಹಿಳೆಯರಿಗೆ ಜ್ಞಾನವನ್ನು ಹಂಚಿದ ಅಕ್ಷರದವ್ವ. ಅವರ ಜನ್ಮದಿನ ಆಚರಿಸುವುದು ಮಹಿಳೆಯರ ಪಾಲಿಗೆ ಸಂಭ್ರಮದ ದಿನವಾಗಬೇಕು ಎಂದರು.

ಪ್ರಾಧ್ಯಾಪಕ ಬಿ.ಎಲ್.ರಾಜು, ‘ಒಂದೂ ಮುಕ್ಕಾಲು ಶತಮಾನದ ಹಿಂದೆ ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆಯುವ ಮೂಲಕ ಸಾವಿತ್ರಿಬಾಯಿ ಫುಲೆ ಪರೋಕ್ಷವಾಗಿ ಮನುಷ್ಯನ ಅಸ್ಮಿತೆ, ಅಸ್ತಿತ್ವ, ಪ್ರಜ್ಞೆ ಮತ್ತು ಪ್ರತಿನಿಧೀಕರಣಗಳ ಪ್ರಶ್ನೆಗಳನ್ನು ಮುನ್ನಲೆಗೆ ತಂದರು. ಶತಮಾನಗಳ ಕಾಲ ಈ ಸಮಾಜವನ್ನು ಕಂಗೆಡಿಸಿದ ಸಾಮಾಜಿಕ ಶಾಪಗಳ ವಿಮೋಚನೆಗಾಗಿ ಹಗಲಿರುಳು ದುಡಿದ ಶ್ರೇಯಸ್ಸು ಸಾವಿತ್ರಿಬಾಯಿ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಪೌರಕಾರ್ಮಿಕರಾದ ಗೌರಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌರಮ್ಮ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಎಚ್.ಕೆ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಪ್ರಾಧ್ಯಾಪಕ ಡಾ.ಕೆ. ಪ್ರಭಾಕರ್ ರಾವ್ ಇದ್ದರು. ಸಹನಾ ಬಿ.ಎಲ್. ವಚನಗಳನ್ನು ಹಾಡಿದರು. ಅರ್ಪಿತಾ ಎಸ್. ಸ್ವಾಗತಿಸಿದರು. ಸ್ನೇಹಾ ವಿ.ಎಚ್. ವಂದಿಸಿದರು. ರಂಜಿತಾ ಎಸ್.ಕೆ. ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.