ADVERTISEMENT

ಸುಳ್ಳು ಜಾತಿ ಪತ್ರ: ಕುವೆಂಪು ವಿವಿ ಉಪ ಕುಲಸಚಿವೆ ಅಮಾನತು

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 15:51 IST
Last Updated 30 ಜೂನ್ 2020, 15:51 IST
   

ಶಿವಮೊಗ್ಗ: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ನೇಮಕಾತಿ ಆದೇಶ ಪಡೆದಿದ್ದ ಆರೋಪದ ಮೇಲೆ ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಸಚಿವೆ ಡಿ.ವಿ.ಗಾಯಿತ್ರಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ವಿಶ್ವವಿದ್ಯಾಲದಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ 1987–88ನೇ ಸಾಲಿನಲ್ಲಿ ನೇಮಕವಾಗುವಾಗ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ಪ್ರಮಾಣ ಪತ್ರ ನೀಡಿದ್ದರು. ಹಿಂದುಳಿದ ವರ್ಗಕ್ಕೆ ಸೇರಿರುವ ಅವರು ನೇಮಕಾತಿ ಸಮಯದಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದಾರೆ ಎಂದು 2009ರಲ್ಲಿ ಜಿಲ್ಲಾ ಸಿವಿಲ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.

ದಾಖಲೆ ಪರಿಶೀಲಿಸಿದ ಕೋರ್ಟ್‌ ಗಾಯತ್ರಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳುವಂತೆ ಕೋಟೆ ಪೊಲೀಸರಿಗೆ ಸೂಚಿಸಿತ್ತು. ನಂತರ ಅವರು ಕೋರ್ಟ್‌ ನಿರ್ಧಾರಕ್ಕೆ ತಡೆಯಾಜ್ಞೆ ತಂದಿದ್ದರು. 2018ರಲ್ಲಿ ತಡೆಯಾಜ್ಞೆ ತೆರವುಗೊಂಡಿತ್ತು. ಆದರೂ, ವಿಶ್ವ ವಿದ್ಯಾಲಯ ಕ್ರಮ ಕೈಗೊಂಡಿರಲಿಲ್ಲ. ಈಚೆಗೆ ದಲಿತ ಸಂಘಟನೆಗಳು ಒತ್ತಡ ಹಾಕಿದ ಕಾರಣ ಜೂನ್ 29ರಂದು ಕುಲಸಚಿವ ಎಸ್‌.ಎಸ್.ಪಾಟೀಲ ಅಮಾನತು ಆದೇಶ ಹೊರಡಿಸಿದ್ದಾರೆ.

ADVERTISEMENT

ನಿವೃತ್ತಿಗೂ ಒಂದು ದಿನ ಮೊದಲು ಅಮಾನತು

ಪ್ರಥಮ ದರ್ಜೆ ಸಹಾಯಕರ ಹುದ್ದೆಯಿಂದ ಉಪ ಕುಲಸಚಿವರ ಹುದ್ದೆಯವರೆಗೆ ವಿಶ್ವವಿದ್ಯಾಲಯದ ವಿವಿಧ ಸ್ಥರಗಳಲ್ಲಿ 32 ವರ್ಷಗಳ ಸೇವೆ ಸಲ್ಲಿಸಿರುವ ಗಾಯತ್ರಿ ಅವರು ಇದೇ ಜೂನ್‌ 30ಕ್ಕೆ ನಿವೃತ್ತಿಯಾಗಬೇಕಿತ್ತು. ನಿವೃತ್ತಿಯ ಒಂದು ದಿನ ಮೊದಲು ಅಮಾನತುಗೊಂಡಿದ್ದಾರೆ.

‘ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಆದೇಶದ ಪ್ರತಿ ದೊರೆತಿರದ ಕಾರಣ ಕ್ರಮ ವಿಳಂಬವಾಗಿತ್ತು. ಈಚೆಗೆ ದಾಖಲೆಗಳು ದೊರೆತ ಕಾರಣ ಅಮಾನತು ಮಾಡಲಾಗಿದೆ’ ಎಂದು ಕುಲ ಸಚಿವ ಎಸ್‌.ಎಸ್‌.ಪಾಟೀಲ್ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.