ಶಿವಮೊಗ್ಗ: ಪೌಷ್ಟಿಕ ಆಹಾರದ ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ವಾಣಿಜ್ಯೋದ್ಯಮದ ಮತ್ತು ಆರ್ಥಿಕ ಸ್ವಾವಲಂಬನೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದ ಪಿಇಎಸ್ ಐಎಎಂಎಸ್ ಪದವಿ ಕಾಲೇಜಿನ ಸಿಂಥೆಸಿಸ್ ಫೋರಂ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸ್ವದೇಶಿ ಆಹಾರಮೇಳ ಆಯೋಜಿಸಲಾಗಿತ್ತು.
ಪದವಿಯ ಮೂರೂ ವರ್ಷದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಒಂದು ತಂಡದಲ್ಲಿ ಐದು ವಿದ್ಯಾರ್ಥಿಗಳಂತೆ ಒಟ್ಟು 14 ತಂಡಗಳು ಭಾಗವಹಿಸಿದ್ದವು.
ಹೋಳಿಗೆ, ಅಕ್ಕಿರೊಟ್ಟಿ, ಹಾಲುಬಾಯಿ, ಪರೋಟ, ಜಾಮೂನು, ಹಲ್ವಾ, ಗಿರ್ಮಿಟ್, ನಿಪ್ಪಟ್ಟು, ನಿಂಬುಸೋಡ, ಪಾನಕ, ಫ್ರೂಟ್ ಸಲಾಡ್, ಫಲೂದಾ, ಪಾನಿಪುರಿ, ಕಡ್ಲೆಕಾಳು ಉಸಳಿ, ಪಾಯಸ, ಕೋಸಂಬರಿ ಸೇರಿ ವಿವಿಧ ರೀತಿಯ ಆಹಾರ ಹಾಗೂ ತಂಪು ಪಾನೀಯಗಳನ್ನು ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಉಣಬಡಿಸಿದರು.
ಆಹಾರ ಮೇಳವನ್ನು ಪಿಇಎಸ್ ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜಕ ಪ್ರೊ.ಆರ್.ನಾಗರಾಜ ಉದ್ಘಾಟಿಸಿದರು. ತೀರ್ಪುಗಾರರಾಗಿ ಪಿಇಎಸ್ ತಾಂತ್ರಿಕ ಕಾಲೇಜಿನ ಆರ್ಟಿಫಿಶಿಯಲ್ ಇಂಟಲಿಜನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ಪೂರ್ಣಿಮಾ ಮತ್ತು ಶಿಲ್ಪಾ ಪಾಲ್ಗೊಂಡಿದ್ದರು.
ಆಹಾರ ಮೇಳದಲ್ಲಿ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಸುದರ್ಶನ್, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥ ಎಸ್.ಡಿ. ದಿಲೀಪ್‌ಕುಮಾರ್, ಕಂಪ್ಯೂಟರ್‌ಸೈನ್ಸ್ ವಿಭಾಗದ ಮುಖ್ಯಸ್ಥೆ ಡಿ.ಎಸ್.ರೂಪಾ, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಿ.ಮೋಹನ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಎಚ್.ಆರ್. ಮಂಜುನಾಥ್, ಸಿಂಥೆಸಿಸ್ ಫೋರಂನ ಸಂಚಾಲಕ ಜಿ.ಬಿ.ರವಿಕುಮಾರ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪದವಿ ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.