ಸಾಗರ (ಶಿವಮೊಗ್ಗ): ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ಪುರುಷರ ಬದಲು ಕುಟುಂಬದ ಮಹಿಳೆಯರೇ ನಡೆಸಿದ ಅಪರೂಪದ ಘಟನೆ ಸಾಗರ ನಗರದಲ್ಲಿ ಈಚೆಗೆ ಜರುಗಿದೆ.
ಇಲ್ಲಿನ ಸೊರಬ ರಸ್ತೆಯ ಸಿದ್ದೇಶ್ವರ ಶಾಲೆ ಹಿಂಭಾಗದ ನಿವಾಸಿ ಗೋಪಾಲ ರಾಮಚಂದ್ರ ಭಟ್ಟರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. 78 ವರ್ಷದ ಅವರು ಈ ಹಿಂದೆ ಸೊರಬ ತಾಲ್ಲೂಕಿನ ಉಳವಿಯ ಮಹಾಗಣಪತಿ ದೇವಸ್ಥಾನದ ಅರ್ಚಕರಾಗಿದ್ದರು.
ಇರುವಷ್ಟು ಕಾಲ ಅವರನ್ನು ಆರೈಕೆ ಮಾಡಿದ್ದ ಕುಟುಂಬದ ಹೆಣ್ಣುಮಕ್ಕಳು ಅವರ ಅಂತ್ಯಸಂಸ್ಕಾರ ನಡೆಸಲೂ ನಿರ್ಧರಿಸಿದ್ದರು. ಚಟ್ಟಕ್ಕೆ ಹೆಗಲು ಕೊಡುವುದರಿಂದ ಹಿಡಿದು ಅಂತ್ಯಕ್ರಿಯೆ ನಡೆದ ಮಾರಿಕಾಂಬಾ ರುದ್ರಭೂಮಿಯಲ್ಲಿ ಶವ ಇಳಿಸುವ ಕೆಲಸವನ್ನೂ ಅವರೇ ನಡೆಸಿದ್ದಾರೆ.
‘ಶಾಸ್ತ್ರ, ಆಚರಣೆಗಳನ್ನು ಯಾರು ಮಾಡಬೇಕು ಎಂಬುದು ಮುಖ್ಯವಲ್ಲ. ಕೋವಿಡ್ ನಮಗೆ ಮರೆಯಲಾಗದ ಪಾಠ ಕಲಿಸಿದೆ. ಗಂಡು, ಹೆಣ್ಣು ಎಂಬುದಕ್ಕಿಂತಲೂ ಮುಖ್ಯವಾಗಿ ಸ್ಪಂದಿಸುವ ಗುಣ ಇರಬೇಕು’ ಎಂದು ಗೋಪಾಲ ಭಟ್ಟರ ಸಂಬಂಧಿ ರಾಜೇಶ್ವರಿ ಭಟ್ ತಿಳಿಸಿದರು.
ಗೂಳಿಕೈ ವಿಶ್ವನಾಥ ಭಟ್ಟರು ರಚಿಸಿರುವ ‘ಸದ್ಗತಿ’ ಕೃತಿಯಲ್ಲಿ ಹೆಣ್ಣುಮಕ್ಕಳಿಗೂ ತಮ್ಮ ತಂದೆ-ತಾಯಿಯ ಅಂತ್ಯಸಂಸ್ಕಾರ ನಡೆಸುವ ಹಕ್ಕಿದೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಅದೇ ಈ ಮಹಿಳೆಯರಿಗೆ ಪ್ರೇರಣೆ ನೀಡಿದೆ.
ಗೋಪಾಲ ರಾಮಚಂದ್ರ ಭಟ್ಟರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಪುರುಷರೇ ಅಂತ್ಯಸಂಸ್ಕಾರದ ವಿಧಿ–ವಿಧಾನ ನಡೆಸಬೇಕು ಎಂಬುದು ಈಗ ಪ್ರಸ್ತುತತೆ ಕಳೆದುಕೊಂಡಿದೆ. ಅವಿಭಕ್ತ ಕುಟುಂಬಗಳೇ ಇಲ್ಲದ ಈ ಕಾಲದಲ್ಲಿ ಹೆಣ್ಣು ಮಕ್ಕಳು ಹಿರಿಯರ ಅಂತ್ಯಸಂಸ್ಕಾರ ಮಾಡಲು ಮುಂದಾಗುತ್ತಿರುವುದು ಆರೋಗ್ಯಕರ ಬೆಳವಣಿಗೆಮೈತ್ರಿ ಪಾಟೀಲ್ ಸಾಗರ ನಗರಸಭೆ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.