ADVERTISEMENT

ಗಾಂಧಿ ನಮಗೆ ಕೊಟ್ಟಿದ್ದು ಷರತ್ತಿಲ್ಲದ ಪ್ರೀತಿ: ಸವಿತಾ ನಾಗಭೂಷಣ

ಚಿಂತನ ಶಿಬಿರದಲ್ಲಿ ಕವಯಿತ್ರಿ ಸವಿತಾ ನಾಗಭೂಷಣ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 5:35 IST
Last Updated 29 ಜನವರಿ 2023, 5:35 IST
ಕುಪ್ಪಳ್ಳಿಯಲ್ಲಿ ಶನಿವಾರ ‘ಮಹಾತ್ಮ ಗಾಂಧಿ ಪಠ್ಯ ದರ್ಶನ ಚಿಂತನಾ ಶಿಬಿರ’ ನಡೆಯಿತು.
ಕುಪ್ಪಳ್ಳಿಯಲ್ಲಿ ಶನಿವಾರ ‘ಮಹಾತ್ಮ ಗಾಂಧಿ ಪಠ್ಯ ದರ್ಶನ ಚಿಂತನಾ ಶಿಬಿರ’ ನಡೆಯಿತು.   

ತೀರ್ಥಹಳ್ಳಿ: ‘ಗಾಂಧಿ ನಮಗೆ ಕೊಟ್ಟಿದ್ದು ಷರತ್ತಿಲ್ಲದ ಮಗುವಿನ ಪ್ರೀತಿ. ನಮ್ಮ ಕ್ರಿಯೆಯಲ್ಲಿ ಗಾಂಧಿ ಚಿಂತನೆಗಳು ಮರು ಸ್ಥಾಪನೆಯಾಗಬೇಕಿದೆ’ ಎಂದು ಕವಯಿತ್ರಿ ಸವಿತಾ ನಾಗಭೂಷಣ ಹೇಳಿದರು.

ಕುಪ್ಪಳ್ಳಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ನೆಹರೂ ಚಿಂತನ ಕೇಂದ್ರ, ಶಿವಮೊಗ್ಗದ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ, ಕುಪ್ಪಳಿಯ ಕುವೆಂಪು ಪ್ರತಿಷ್ಠಾನದಿಂದ ಶನಿವಾರ ಆಯೋಜಿಸಿದ್ದ ‘ಮಹಾತ್ಮ ಗಾಂಧಿ ಪಠ್ಯ ದರ್ಶನ’ ಚಿಂತನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗಾಂಧಿ ಚಿಂತನೆಗಳನ್ನು ನಮ್ಮ ಹಿಂದಿನ ತಲೆಮಾರು ನಮಗೆ ದಾಟಿಸಿದೆ. ನಾವು ಹೊಸ ತಲೆಮಾರಿಗೆ ಅದನ್ನು ದಾಟಿಸಬೇಕಿದೆ. ಲೋಹಿಯಾ ಪ್ರತಿಷ್ಠಾನ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ’ ಎಂದರು.

ADVERTISEMENT

‘ಎಲ್ಲೆಡೆ ಅವಕಾಶವಾದಿ ದೃಷ್ಟಿಕೋನ ಬೆಳೆಯುತ್ತಿದ್ದು, ಅದು ನಮ್ಮನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ಗಾಂಧಿ ಪಠ್ಯಗಳ ಮೂಲಕ ಅವರ ಚಿಂತನೆಗೆ ಪ್ರವೇಶಿಸುವುದು ಸೂಕ್ತ. ಜಗತ್ತಿನ ಇತರ ಚಿಂತಕರ ಬರಹಗಳೊಂದಿಗೆ ಮುಖಾಮುಖಿಯಾಗಿ ಅರ್ಥೈಸಿಕೊಳ್ಳಬೇಕು’ ಎಂದು ನೆಹರೂ ಚಿಂತನ ಕೇಂದ್ರದ ರಾಜಾರಾಂ ತೋಳ್ಪಾಡಿ ಅಭಿಪ್ರಾಯಪಟ್ಟರು.

‘ಕುವೆಂಪು ವಿಚಾರಧಾರೆ ಗಾಂಧಿ, ಲೋಹಿಯಾ ಚಿಂತನೆಗಳೊಂದಿಗೆ ಬೆರೆತಿರುವುದು ಅವರ ಬರಹಗಳಲ್ಲಿ ಸ್ಪಷ್ಟವಾಗಿದೆ. ಈ ಕಾರಣಕ್ಕೆ ನಮ್ಮ ಪ್ರತಿಷ್ಠಾನ ಗಾಂಧಿ, ಲೋಹಿಯಾ ವಿಚಾರಧಾರೆಗೂ ತೆರೆದುಕೊಂಡಿದೆ’ ಎಂದು ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ತಿಳಿಸಿದರು.

ರೇಖಾಂಬ, ಇಳಾ ಪ್ರಾರ್ಥಿಸಿದರು. ಹೊನ್ನಾಳಿ ಚಂದ್ರಶೇಖರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.