ADVERTISEMENT

ಏಳು ಸ್ಥಾನ ಗೆಲ್ಲಲು ಯುದ್ಧೋಪಾದಿಯಲ್ಲಿ ಸಿದ್ಧರಾಗಿ: ತೇಜಸ್ವಿನಿ ಅನಂತಕುಮಾರ್

ಶಿವಮೊಗ್ಗ ಜಿಲ್ಲಾ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ತೇಜಸ್ವಿನಿ ಅನಂತಕುಮಾರ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 6:44 IST
Last Updated 6 ಏಪ್ರಿಲ್ 2023, 6:44 IST
ಶಿವಮೊಗ್ಗದಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಾಗಾರದಲ್ಲಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿದರು
ಶಿವಮೊಗ್ಗದಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಾಗಾರದಲ್ಲಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿದರು   

ಶಿವಮೊಗ್ಗ: ‘ಬಿಜೆಪಿಗೆ ಭದ್ರ ಬುನಾದಿ ನೀಡಿದ ಜಿಲ್ಲೆ ಶಿವಮೊಗ್ಗ, ಶ್ರೇಷ್ಠ ನಾಯಕರನ್ನು ನೀಡಿದೆ. ಇಲ್ಲಿ ಏಳೂ ಸ್ಥಾನಗಳನ್ನು ಗೆಲ್ಲಲಿದೆ’ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಬುಧವಾರ ಆಯೋಜಿಸಿದ್ದ ಕಾರ್ಯಾ ಗಾರ ಉದ್ಘಾಟಿಸಿ ಮಾತನಾಡಿದರು.

‘ಒಂದು ಕಾಲದಲ್ಲಿ ಪಕ್ಷಕ್ಕೆ ಕೇವಲ ಒಂದೇ ಸ್ಥಾನ ಇತ್ತು. ಅದು ಶಿವಮೊಗ್ಗದಿಂದ ಸಿಕ್ಕಿತ್ತು. ಪಕ್ಷಕ್ಕೆ ಕಚೇರಿ ಇರಲಿಲ್ಲ, ವಾಹನ ಇರಲಿಲ್ಲ, ಯಾವುದೇ ಸೌಲಭ್ಯಗಳು ಇಲ್ಲದಿದ್ದಾಗ ನಮ್ಮ ಪಕ್ಷದ ಹಿರಿಯರು ಸಂಘಟನಾ ಚಾತುರ್ಯದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಇದು ಕೇವಲ ಅದೃಷ್ಟ ದಿಂದ ಆಗಿದ್ದಲ್ಲ. ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಹೆಮ್ಮರವಾಗಿ ಬೆಳೆದಿದೆ’ ಎಂದರು.

ADVERTISEMENT

‘ಚುನಾವಣೆ ಎಂದರೆ ಯುದ್ಧದ ಮಾದರಿ ಎಂದೇ ಎಲ್ಲರೂ ಕೆಲಸ ಮಾಡಬೇಕಿದೆ. ಪಕ್ಷ 34 ವಿಭಾಗಗಳ ಗುರುತಿಸಿದ್ದು, ಸಣ್ಣ ಸಣ್ಣ ವಿಷಯಗಳನ್ನು ಕೂಡ ಗಮನಿಸಿ ನಿರ್ಲಕ್ಷ್ಯ ಮಾಡದೇ ಜವಾಬ್ದಾರಿಯುತವಾಗಿ ಪಕ್ಷದ ಕಾರ್ಯವನ್ನು ಶ್ರದ್ಧೆಯಿಂದ ಮಾಡಿದಾಗ ಗೆಲುವು ಅಸಾಧ್ಯವಲ್ಲ. ನಿರ್ದಿಷ್ಟ ಗುರಿ ಇರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ಹಾಗೂ ಪ್ರತಿಯೊಬ್ಬರ ಮನಮನಗಳಿಗೆ ತಲುಪಿಸಬೇಕು. ಸರಿಯಾದ ಯೋಜನೆ ರೂಪಿಸಿ ಮತದಾರರನ್ನು ತಲುಪಬೇಕು. ಯುದ್ಧಕ್ಕೆ ಮೊದಲೇ ತಯಾರಿ ಮಾಡಿ ಹೋದಾಗ ಮಾತ್ರ ಗೆಲುವು ಸಾಧ್ಯ. ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವ ರೀತಿಯಲ್ಲಿ ಆಗದೆ ಇತ್ತೀಚಿನ ತಾಂತ್ರಿಕತೆಯ ನೆರವು ಪಡೆದು ಮತದಾರರ ಮನ ಗೆಲ್ಲಬೇಕು. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಜ್ಞಾನ ಕಾರ್ಯಕರ್ತರು ಬೆಳೆಸಿಕೊಳ್ಳಬೇಕು’ ಎಂದರು.

ವಿರೋಧ ಪಕ್ಷಗಳು ಕಡ್ಡಿಯನ್ನು ಗುಡ್ಡ ಮಾಡಿ ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ. ಐರಾವತ ಕೂಡ ಅಡಿ ಇಡುವಾಗ ತಪ್ಪುತ್ತದೆ. ಹಾಗೆಯೇ ಅತಿಯಾದ ವಿಶ್ವಾಸದಿಂದ ತಪ್ಪು ಆಗದ ರೀತಿಯಲ್ಲಿ ಗಮನ ಕೊಡಬೇಕು ಎಂದರು.

ಮತದಾರರಿಗೆ ಅನುಕೂಲವಾಗುವ ಪ್ರಣಾಳಿಕೆ ಸಿದ್ಧಪಡಿಸಬೇಕು. ಪ್ರತಿಯೊಂದು ಅಂಕಿ-ಅಂಶಗಳು, ಪಾರದರ್ಶಕತೆ, ನಾವೀನ್ಯ ಸಂಗತಿಗಳ ಅಳವಡಿಕೆ, ಪ್ರಧಾನಿ ಮೋದಿಯವರ ಕಾರ್ಯವೈಖರಿ, ಡಬಲ್ ಎಂಜಿನ್‌ ಸರ್ಕಾರದಿಂದ ಆಗುವ ಲಾಭ ಎಲ್ಲವನ್ನೂ ಜನರಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಆರ್.ಕೆ. ಸಿದ್ರಾಮಣ್ಣ , ಪಕ್ಷ ಬೆಳೆದುಬಂದ ರೀತಿ ಮತ್ತು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಗಿರೀಶ್ ಪಟೇಲ್, ಭಾನುಪ್ರಕಾಶ್, ಶಾಸಕರಾದ ಕುಮಾರ್ ಬಂಗಾರಪ್ಪ, ಅಶೋಕ್ ನಾಯ್ಕ, ಡಿ.ಎಸ್. ಅರುಣ್, ಜಿಲ್ಲಾ ಉಸ್ತುವಾರಿ ಮೋನಪ್ಪ ಭಂಡಾರಿ, ಹಾಗೂ ಪಕ್ಷದ ಎಲ್ಲಾ ಮಂಡಲಗಳ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.