ADVERTISEMENT

ಶಿವಮೊಗ್ಗ | ಮಲೆನಾಡಲ್ಲಿ ಮಳೆ ನೀರು ಇಂಗುವಿಕೆ ಶೇ 40ರಿಂದ ಶೇ 5ಕ್ಕೆ ಇಳಿಕೆ

ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ

​ಪ್ರಜಾವಾಣಿ ವಾರ್ತೆ
Published 6 ಮೇ 2020, 20:15 IST
Last Updated 6 ಮೇ 2020, 20:15 IST
ಶಿವಮೊಗ್ಗ ತಾಲ್ಲೂಕು ಸೂಗೂರು–ಕ್ಯಾತಿನಕೊಪ್ಪದಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿದರು.
ಶಿವಮೊಗ್ಗ ತಾಲ್ಲೂಕು ಸೂಗೂರು–ಕ್ಯಾತಿನಕೊಪ್ಪದಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿದರು.   

ಶಿವಮೊಗ್ಗ: ಮೂರು ದಶಕಗಳ ಹಿಂದೆ ಶೇ 40ರಷ್ಟಿದ್ದಮಳೆ ನೀರು ಇಂಗುವಿಕೆಯ ಪ್ರಮಾಣಪ್ರಸ್ತುತಶೇ 5ಕ್ಕೆ ಇಳಿದಿದೆ. ಇರುವ ಅಂತರ್ಜಲವನ್ನೂ ದುರ್ಬಳಕೆ ಮಾಡಲಾಗಿದೆ. ಈಗಲಾದರೂ ಜನರು ಎಚ್ಚೆತ್ತುಕೊಂಡು ಜಲ ಸಂರಕ್ಷಣೆಯತ್ತ ಚಿತ್ತ ಹರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿವಿಮಾತು ಹೇಳಿದರು.

ಶಿವಮೊಗ್ಗ ತಾಲ್ಲೂಕು ಸೂಗೂರು–ಕ್ಯಾತಿನಕೊಪ್ಪದಲ್ಲಿ ಬುಧವಾರ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯ ಪ್ರಕೃತಿಯ ಋಣ ತೀರಿಸುವಸಮಯ ಬಂದಿದೆ.ಮಳೆ ನೀರು ಸಂಗ್ರಹ, ಮಣ್ಣಿನ ಸವಕಳಿ ತಡೆಯುವುದು, ಮಣ್ಣಿನ ತೇವಾಂಶ ಹೆಚ್ಚಿಸುವುದು. ಸ್ವಾಭಾವಿಕ ಹಳ್ಳಗಳುದ್ದಕ್ಕೂ ಕೃತಕ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸುವುದು. ಸ್ವಾಭಾವಿಕ ಸಸ್ಯವರ್ಗ ಹೆಚ್ಚಳಕ್ಕಾಗಿಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಅಂತರ್ಜಲ ಚೇತನ ಯೋಜನೆ ಜಾರಿಗೆ ತರಲಾಗಿದೆ. ಮೊದಲ ಹಂತದಲ್ಲಿ 10 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಒಂದು ವರ್ಷದ ಒಳಗೆ ಯೋಜನೆಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಈ ಎಲ್ಲಾ ಕಾಮಗಾರಿಗಳು ನಿರೀಕ್ಷೆಯಂತೆ ಪೂರ್ಣಗೊಳ್ಳಲು ಸಮುದಾಯದ ಸಹಭಾಗಿತ್ವಅಗತ್ಯ. ಜಿಲ್ಲೆಯ ಎಲ್ಲಾ 271 ಗ್ರಾಮ ಪಂಚಾಯಿತಿಗಳ ಸುಮಾರು 8.82 ಲಕ್ಷ ಜನರಿಗೆ ಯೋಜನೆ ಮೂಲಕಅನುಕೂಲವಾಗಲಿದೆ. ಬೋಲ್ಡರ್ ಚೆಕ್ (ಕಲ್ಲುಗುಂಡು ತಡೆ) ನಿರ್ಮಾಣ,ಇಂಗುಬಾವಿ, ಇಂಗುಕೊಳವೆ, ಕೆರೆ ಹೊಂಡ ಸೇರಿದಂತೆ 32,731 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅದಕ್ಕಾಗಿ₨ 252 ಕೋಟಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಈ ಯೋಜನೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ತಜ್ಞ ಸಂಪನ್ಮೂಲ ವ್ಯಕ್ತಿಗಳು ತಾಂತ್ರಿಕ ಸಹಾಯ ಒದಗಿಸುವರು. ಮೇಲುಸ್ತುವಾರಿ ನೋಡಿಕೊಳ್ಳುವರು. ಮೊದಲ 10 ಜಿಲ್ಲೆಗಳಲ್ಲಿ ಅನುಷ್ಠಾನಗೊಂಡ ನಂತರಹಂತಹಂತವಾಗಿ ಇತರೆ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಆಸಕ್ತರು ಯೋಜನೆ ಅಡಿ ಉದ್ಯೋಗ ಪಡೆಯಬಹುದು. ಕೃಷಿ ಕಾರ್ಮಿಕರು ಕೆಲಸ ಪಡೆಯಬಹುದು ಎಂದು ಸಲಹೆ ನೀಡಿದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಎಲ್.ಕೆ.ಅತೀಕ್ ಮಾತನಾಡಿ, ಹವಾಮಾನದ ವೈಪರೀತ್ಯಗಳ ಪರಿಣಾಮ ಅತೀವೃಷ್ಟಿ, ಅನಾವೃಷ್ಟಿ ನೋಡುವಂತಾಗಿದೆ. ಮಳೆಯ ನೀರು ಸದ್ಭಳಕೆ ಮಾಡಿಕೊಳ್ಳದ ಪರಿಣಾಮ ವ್ಯರ್ಥವಾಗುತ್ತಿದೆ. ಸಾರಯುಕ್ತ ಮಣ್ಣಿನ ಸವಕಳಿಯಾಗುತ್ತಿದೆ. ಈ ಯೋಜನೆಯ ಅನುಷ್ಠಾನದಲ್ಲಿ ರೈತರು, ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.

2ಸಾವಿರ ಮಿ.ಮೀ.ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಸುರಿಯುವ ಜಿಲ್ಲೆಯ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಇದೆ. ಬರುವ ಮಳೆ ನೀರಿನ ಸದ್ಬಳಕೆಗೆ ಕ್ರಿಯಾ ಯೋಜನೆ ರೂಪಿಸಬೇಕು.ಬರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ, ನೀರಿನ ಹರಿವುನಿಯಂತ್ರಿಸುವಅಗತ್ಯವಿದೆ. ಅಂತರ್ಜಲ ಬ್ಯಾಂಕಿನಲ್ಲಿ ಇಟ್ಟ ನಿಧಿ. ನೀರಿನ ಮರುಪೂರಣ ಆಗಬೇಕು. ತೆಗೆಯುವ ನೀರುಮತ್ತೆ ತುಂಬುವ ಕೆಲಸ ಆಗಬೇಕು. ಅದು ಆಪತ್ಕಾಲದಲ್ಲಿ ಬಳಕೆಯಾಗಲಿದೆ ಎಂದು ವಿಶ್ಲೇಷಿಸಿದರು.

ಆರ್ಟ್ ಆಫ್ ಲಿವಿಂಗ್ ಸಂಯೋಜಕ ನಾಗರಾಜ್ ಗಂಗೊಳ್ಳಿ, ಉಪಗ್ರಹ ಆಧಾರಿತ ಮಾಹಿತಿಯ ಮೇಲೆ ನೀರು ಇಂಗಿಸುವ ಸ್ಥಳಗಳನ್ನು ನಿಗದಿಗೊಳಿಸಲಾಗಿದೆ. ವೈಜ್ಞಾನಿಕ ವಿಧಾನಗಳ ಮೂಲಕ ನೀರುಇಂಗಿಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ವ್ಯವಸ್ಥಿತ ಅನುಷ್ಠಾನದಿಂದ ಬರಿದಾಗಿರುವ ಕೊಳವೆ ಬಾವಿಗಳಲ್ಲಿ ಪುನಃ ನೀರಿನ ಸೆಳವು ಕಾಣಬಹುದಾಗಿದೆ ಎಂದರು.

ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಉದ್ಯೋಗಖಾತ್ರಿ ಯೋಜನೆಯ ವ್ಯವಸ್ಥಾಪಕ ಅನಿರುಧ್ ಪಿ.ಶ್ರವಣ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.