ADVERTISEMENT

GST ಪರಿಣಾಮದಿಂದ ಕೆಎಂಎಫ್‌ನಲ್ಲಿ ಹೀಗೊಂದು ‘ಚಿಲ್ಲರೆ’ ಜಗಳ

ಜಿಎಸ್‌ಟಿ ಸೇರ್ಪಡೆ–ಅವೈಜ್ಞಾನಿಕವಾಗಿ ದರ ಹೆಚ್ಚಳ ಆರೋಪ

ವೆಂಕಟೇಶ ಜಿ.ಎಚ್.
Published 20 ಜುಲೈ 2022, 3:01 IST
Last Updated 20 ಜುಲೈ 2022, 3:01 IST
   

ಶಿವಮೊಗ್ಗ: ಮಾರುಕಟ್ಟೆಯಲ್ಲಿ ಪೈಸೆಯ ವಹಿವಾಟು ಚಾಲ್ತಿಯಲ್ಲಿ ಇಲ್ಲದಿದ್ದರೂ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಮಾತ್ರ ಜಿಎಸ್‌ಟಿ ಅನ್ವಯ ತನ್ನ ಉತ್ಪನ್ನಗಳಿಗೆ ತಲಾ 50 ಪೈಸೆ ದರ ಹೆಚ್ಚಿಸಿದೆ. ಇದು ಹಾಲಿನ ಉತ್ಪನ್ನಗಳ ಮಾರಾಟಗಾರರಿಗೆ ತಲೆನೋವಾಗಿ ಪರಿಣಮಿಸಿದೆ.

ಕೆಎಂಎಫ್ ಜುಲೈ 19ರಿಂದ ಅನ್ವಯವಾಗುವಂತೆಶೇ 5ರಷ್ಟು ಜಿಎಸ್‌ಟಿಯೊಂದಿಗೆ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಪ್ಯಾಕೆಟ್‌ಗಳ ದರ ಹೆಚ್ಚಿಸಿದೆ. ಹೀಗಾಗಿ ಈ ಮೊದಲು ₹10 ಇದ್ದ 200 ಎಂಎಲ್ ಮೊಸರಿನ ಪ್ಯಾಕೆಟ್ ಎಂಆರ್‌ಪಿ ಬೆಲೆ ಈಗ ₹10.50ಕ್ಕೆ ಹೆಚ್ಚಳಗೊಂಡಿದೆ. ಆರ್‌ಬಿಐ ಲೆಕ್ಕದಲ್ಲಿ 50 ಪೈಸೆ ನಾಣ್ಯ ಚಾಲನೆಯಲ್ಲಿದೆ. ಆದರೆ, ಸಾರ್ವಜನಿಕರ ನಿತ್ಯದ ವಹಿವಾಟಿನಲ್ಲಿ ಇಲ್ಲ. ಹೀಗಾಗಿ ಡೀಲರ್‌ಗಳು ಮಾರಾಟ ಮಾಡುವಾಗ ಒಂದೋ ಗ್ರಾಹಕರಿಂದ 50 ಪೈಸೆ ಹೆಚ್ಚು (₹11) ಪಡೆಯಬೇಕು. ಇಲ್ಲದಿದ್ದರೆ 50 ಪೈಸೆ ನಷ್ಟ ಮಾಡಿಕೊಂಡು ₹10ಕ್ಕೆ ಕೊಡಬೇಕಿದೆ.

‘ಮೊಸರಿನ ಸ್ಯಾಷೆಗೆ ಇವತ್ತು ₹10 ತೆಗೆದುಕೊಳ್ಳಿ, ನಾಳೆ ಕೊಳ್ಳುವಾಗ ₹1 ಹೆಚ್ಚು ಕೊಡುತ್ತೇವೆ. ಲೆಕ್ಕ ಸರಿಯಾಗುತ್ತದೆ ಎಂದು
ಕೆಲವು ಗ್ರಾಹಕರು ಹೇಳುತ್ತಾರೆ. ನಾಳೆ ಅವರು ಮತ್ತೆ ನಮ್ಮ ಬಳಿ ಬರುತ್ತಾರೆ ಎಂಬುದು ಏನು ಗ್ಯಾರಂಟಿ’ ಎಂದು ನಗರದ ಕೆಎಂಎಫ್ ಉತ್ಪನ್ನಗಳ ಡೀಲರ್‌ ಪ್ರಶ್ನಿಸುತ್ತಾರೆ.

ADVERTISEMENT

‘ಗ್ರಾಹಕರಿಗೆ ಉಳಿದ ಎಂಟಾಣೆಗೆ ಚಾಕೊಲೆಟ್ ಕೊಡಲು ಹೋದರೆ ಜಗಳಕ್ಕೆ ಬರುತ್ತಾರೆ. ಅವರು (ಕೆಎಂಎಫ್) ಅವೈಜ್ಞಾನಿಕವಾಗಿ ದರ ಹೆಚ್ಚಳ ಮಾಡಿರುವುದು ನಮಗೆ ಪೀಕಲಾಟ ತಂದಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

‘ಇದು ಕೇಂದ್ರ ಕಚೇರಿಯಲ್ಲಿ ಕೈಗೊಂಡ ತೀರ್ಮಾನ. ಬೆಳಿಗ್ಗೆಯಿಂದ ವಾಟ್ಸ್‌ಆ್ಯಪ್‌ನಲ್ಲಿ ನೂರಾರು ದೂರುಗಳು ಬಂದಿವೆ. ನಮಗೂ ಬಹಳ ತಲೆನೋವಾಗಿದೆ. ಆನ್‌ಲೈನ್‌ನಲ್ಲಿ ಪಾವತಿಸುವವರಿಗೂ 50 ಪೈಸೆ ಕೊಡಲು ಕಷ್ಟವಾಗುತ್ತಿದೆ. ಜುಲೈ 22ರಂದು ಬೆಂಗಳೂರಿನಲ್ಲಿ ಸಂಸ್ಥೆಯ ಮಾರುಕಟ್ಟೆ ವಿಭಾಗದ ಸಭೆ ನಡೆಯಲಿದೆ. ಅಲ್ಲಿ ಇತ್ಯರ್ಥವಾಗಬಹುದು’ ಎಂದು ಕೆಎಂಎಫ್ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

***

ಚಿಲ್ಲರೆ ಸಮಸ್ಯೆಯ ಬಗ್ಗೆ ನಮಗೂ ದೂರುಗಳು ಬಂದಿವೆ. ಅದನ್ನು ಕೇಂದ್ರ ಕಚೇರಿಯ ಗಮನಕ್ಕೆ ತಂದಿದ್ದೇವೆ. ಪರಿಹರಿಸಲು ಪ್ರಯತ್ನ ನಡೆದಿದೆ.

ಡಾ.ಎಸ್.ಎಂ.ಮೂರ್ತಿ, ಮಾರುಕಟ್ಟೆ ಅಧಿಕಾರಿ, ಶಿವಮೊಗ್ಗ ಹಾಲು ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.