ADVERTISEMENT

ಪೊಲೀಸರ ಮೇಲೆ ಹಲ್ಲೆ: ಆರೋಪಿಗೆ ಗುಂಡೇಟು

ಶಿವಮೊಗ್ಗ: ದೀಪಾವಳಿ ದಿನ ಬೆಳಿಗ್ಗೆಯೇ ಗುಂಡಿನ ಸದ್ದು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:33 IST
Last Updated 28 ಅಕ್ಟೋಬರ್ 2022, 7:33 IST
ಜಬೀ
ಜಬೀ   

ಶಿವಮೊಗ್ಗ: ಕೊಲೆ ಪ್ರಕರಣದ ಮಹಜರು ನಡೆಸಲು ತೆರಳಿದ್ದ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹೊಡೆದಿರುವ ಘಟನೆ ಬುಧವಾರ ನಗರದಲ್ಲಿ ನಡೆದಿದೆ.

ಕಾನ್‌ಸ್ಟೆಬಲ್‌ ರೋಶನ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾದ ಆರೋಪಿ ಜಬೀ (23) ಮೇಲೆ ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ಗುಂಡು ಹಾರಿಸಿದ್ದು, ಗಾಯಗೊಂಡಿರುವ ಕಾನ್‌ಸ್ಟೆಬಲ್ ಹಾಗೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ವೆಂಕಟೇಶ ನಗರದಲ್ಲಿ ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆ ಉದ್ಯೋಗಿ ವಿಜಯ್ (37) ಎಂಬುವವರ ಕೊಲೆ ನಡೆದಿತ್ತು. ರಾತ್ರಿ ಮನೆಯಿಂದ ತೆರಳಿದ್ದ ಅವರನ್ನು ಅಡ್ಡಗಟ್ಟಿ, ಚಾಕುವಿನಿಂದ ಇರಿದು ಕೊಲೆ ಮಾಡಿ, ಕೊರಳಲ್ಲಿದ್ದ ಚಿನ್ನದ ಸರ ಕದ್ದೊಯ್ದ ಘಟನೆ ನಡೆದಿತ್ತು. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಸಿ.ಸಿ.ಟಿ.ವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು ಜಬೀ, ದರ್ಶನ್ (21) ಹಾಗೂ ಕಟ್ಟೆ ಕಾರ್ತಿಕ್ (21) ಅವರನ್ನು ಮಂಗಳವಾರ ಬಂಧಿಸಿದ್ದರು. ಕೊಲೆಗೆ ಬಳಸಿದ್ದ ಚಾಕುವನ್ನು ಸಾಗರ ರಸ್ತೆಯಲ್ಲಿನ ಕಾಲುವೆ ಬಳಿ ಎಸೆದಿರುವುದಾಗಿ ಬಂಧಿತರು ತಿಳಿಸಿದ್ದರು. ಮಹಜರು ನಡೆಸಲು ಕುಂಸಿ ಠಾಣೆ ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ನೇತೃತ್ವದಲ್ಲಿ ಪೊಲೀಸರು ಬೆಳಿಗ್ಗೆ ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದಿದ್ದರು.

‘ಈ ವೇಳೆ ಪ್ರಮುಖ ಆರೋಪಿ ಜಬೀ ಕಾನ್‌ಸ್ಟೆಬಲ್ ರೋಶನ್ ಅವರ ಕಣ್ಣಿಗೆ ಮಣ್ಣು ಎರಚಿ ಪೊದೆಯಲ್ಲಿ ಎಸೆದಿದ್ದ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಆಗ ಸಿಬ್ಬಂದಿ ರಕ್ಷಣೆಗೆ ಮುಂದಾದ ಹರೀಶ್ ಪಟೇಲ್ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್
ತಿಳಿಸಿದ್ದಾರೆ.

‘ಜೀವ ಬೆದರಿಕೆ ಅಂಶ ಕಂಡುಬಂದಿಲ್ಲ’

ಶಿವಮೊಗ್ಗ: ‘ಹತ್ಯೆಗೀಡಾಗಿರುವ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿರುವ ಯಾವುದೇ ಅಂಶ ತನಿಖೆಯ ವೇಳೆ ಕಂಡುಬಂದಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವ ಬೆದರಿಕೆ ಹಾಕಿರುವ ಬಗ್ಗೆ ಹರ್ಷನ ಕುಟುಂಬದವರೂ ದೂರು ನೀಡಿಲ್ಲ. ನಗರದಲ್ಲಿ ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಜೀವ ಬೆದರಿಕೆಯ ಯಾವುದೇ ಅಂಶ ಕಂಡುಬಂದಿಲ್ಲ ಎಂದರು.

‘ಹರ್ಷನ ಸಹೋದರಿ ಅಶ್ವಿನಿ ಕುಟುಂಬಕ್ಕೆ ಮಾತ್ರವಲ್ಲ, ಎಲ್ಲರಿಗೂ ರಕ್ಷಣೆ ನೀಡಲು ಇಲಾಖೆ ಸಿದ್ಧವಿದೆ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.