ADVERTISEMENT

ಸಾಗರ | ಮೆಸ್ಕಾಂನಿಂದ ರೈತರಿಗೆ ಕಿರುಕುಳ: ಆರೋಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 7:51 IST
Last Updated 11 ಜನವರಿ 2022, 7:51 IST
ಸಾಗರದಲ್ಲಿ ತಾಲ್ಲೂಕು ರೈತ ಸಂಘ (ಎಚ್.ಗಣಪತಿಯಪ್ಪ ಬಣ)ದ ಕಾರ್ಯಕರ್ತರು ರೈತರಿಗೆ ಮೆಸ್ಕಾಂ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಸೋಮವಾರ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಾಗರದಲ್ಲಿ ತಾಲ್ಲೂಕು ರೈತ ಸಂಘ (ಎಚ್.ಗಣಪತಿಯಪ್ಪ ಬಣ)ದ ಕಾರ್ಯಕರ್ತರು ರೈತರಿಗೆ ಮೆಸ್ಕಾಂ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಸೋಮವಾರ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

ಸಾಗರ:ರೈತರಿಗೆ ಮೆಸ್ಕಾಂ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಇಲ್ಲಿನ ತಾಲ್ಲೂಕು ರೈತ ಸಂಘ (ಎಚ್.ಗಣಪತಿಯಪ್ಪ ಬಣ) ದ ಕಾರ್ಯಕರ್ತರು ಸೋಮವಾರ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ‘ಅಕ್ರಮ ಸಕ್ರಮ ಯೋಜನೆಯಡಿ ರೈತರಿಗೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಗುಣಮಟ್ಟದ ವಿದ್ಯುತ್ ಪರಿವರ್ತಕ ಅಳವಡಿಸಿ ಎಂದು ಬೇಡಿಕೆ ಮುಂದಿಟ್ಟರೆ ಅದಕ್ಕೆ ಮೆಸ್ಕಾಂ ಸ್ಪಂದಿಸುತ್ತಿಲ್ಲ. ರೈತರಿಗೆ ಮೆಸ್ಕಾಂನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ’ ಎಂದು ದೂರಿದರು.

ಸೂರಜ್ ಎಂಬುವವರು ತಮ್ಮ ಕೃಷಿಭೂಮಿಗೆ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಹಲವು ತಿಂಗಳುಗಳಿಂದ ಕಚೇರಿಗೆ ಅಲೆಯುತ್ತಿದ್ದರೂ ಅವರ ಕೆಲಸವಾಗಿಲ್ಲ. ರಾಜಕಾರಣಿಗಳೇ ರೈತರ ಪಾಲಿಗೆ ಶತ್ರುಗಳಾಗಿದ್ದಾರೆ. ಕೆಲವು ಜನಪ್ರತಿನಿಧಿ
ಗಳ ಹಿಂಬಾಲಕರು ಹೇಳಿದಂತೆ ಮೆಸ್ಕಾಂ ಅಧಿಕಾರಿಗಳು ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ADVERTISEMENT

ರೈತ ಮಹಿಳೆ ಸವಿತಾ ಮಾತನಾಡಿ, ‘ನಮ್ಮ ಕೃಷಿಭೂಮಿಗೆ ವಿದ್ಯುತ್ಪರಿವರ್ತಕ ಪಡೆಯಲು ಕಚೇರಿಗೆ ಅಲೆದು ಸಾಕಾಗಿದೆ. ಕೃಷಿ ಕಾರ್ಯಕ್ಕೆ ಹಾಗೂ ಕುಡಿಯಲು ಸಹ ನೀರಿನ ಕೊರತೆ ಉಂಟಾಗಿ ಪರದಾಡುವಂತಾಗಿದೆ. ಇಲಾಖೆಯ ಇದೇ ಧೋರಣೆ ಮುಂದುವರಿದರೆ ಅಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಲ್ಲೂಕು ರೈತ ಸಂಘದ ಸಂಚಾಲಕ ರಮೇಶ್ ಇ. ಕೆಳದಿ, ‘ಕ್ಷೇತ್ರದಲ್ಲಿ ಶಾಸಕರ ಹಿಂಬಾಲಕರು ಎಲ್ಲದಕ್ಕೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಶಾಸಕರ ಹಿಂಬಾಲಕರ ಮೂಲಕ ಹೋದರೆ ಮಾತ್ರ ಕೆಲಸವಾಗುತ್ತದೆ ಎನ್ನುವಸ್ಥಿತಿ ಇದೆ’ ಎಂದು ದೂರಿದರು.

ಪ್ರತಿಭಟನೆಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಮುಖಂಡರಾದ ಬಿ.ಆರ್.ಜಯಂತ್, ತೀ.ನ. ಶ್ರೀನಿವಾಸ್ ಪಾಲ್ಗೊಂಡಿದ್ದರು. ರೈತ ಸಂಘದ ಪ್ರಮುಖರಾದ ಹೊಯ್ಸಳ ಗಣಪತಿಯಪ್ಪ, ಸುರೇಶ್ ಬೆಳ್ಳಿಕೊಪ್ಪ, ಸೂರಜ್, ಮಾಲತೇಶ್, ಚಂದ್ರಪ್ಪ, ದೇವರಾಜ್, ಲೋಹಿತ್, ಶಶಿ ಬರೂರು, ಕುಮಾರ ಗೌಡ, ಸುನೀಲ್, ಕಿರಣ್, ಬದರೀಶ್, ಓಂಕಾರ್, ಅಮೃತ್ ರಾಜ್ ಇದ್ದರು.

ಮೆಸ್ಕಾಂ ಕಚೇರಿಯಲ್ಲೇ ವಿಷ ಸೇವನೆಗೆ ಯತ್ನ
ಮೆಸ್ಕಾಂ ಕಿರುಕುಳದಿಂದ ನೊಂದ ಸೂರಜ್ ಎಂಬುವವರು ಮೆಸ್ಕಾಂ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು.

ಪ್ರತಿಭಟನಕಾರರು ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ ವೆಂಕಟೇಶ್ ಅವರ ಕೊಠಡಿಯಲ್ಲಿ ಮಾತುಕತೆ ನಡೆಸುತ್ತಿದ್ದಾಗ ಉದ್ವೇಗಕ್ಕೆ ಒಳಗಾದ ಸೂರಜ್ ತಾವು ತಂದಿದ್ದ ವಿಷದ ಬಾಟಲಿಯಿಂದ ವಿಷ ಸೇವಿಸಲು ಮುಂದಾದರು.

ಸ್ಥಳದಲ್ಲಿದ್ದ ಪೊಲೀಸರು ವಿಷದ ಬಾಟಲಿಯನ್ನು ಸೂರಜ್ ಅವರಿಂದ ಕಿತ್ತುಕೊಂಡರು. ನಂತರ ಮೆಸ್ಕಾಂ ಅಧಿಕಾರಿ ವೆಂಕಟೇಶ್ ಅವರು ಸಭೆಯೊಂದಕ್ಕೆ ವಾಹನದಲ್ಲಿ ತೆರಳಲು ಮುಂದಾದಾಗ ಸೂರಜ್ ಅವರು ಅವರ ವಾಹನಕ್ಕೆ ಅಡ್ಡ ಮಲಗಿ ಪ್ರತಿಭಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.