ADVERTISEMENT

ಹೊಳೆಹೊನ್ನೂರು: ಮುಕ್ತಾಯ ಹಂತದಲ್ಲಿ ಭದ್ರಾ ಸೇತುವೆ ಕಾಮಗಾರಿ

ಕುಮಾರ್ ಅಗಸನಹಳ್ಳಿ
Published 10 ಜನವರಿ 2025, 5:28 IST
Last Updated 10 ಜನವರಿ 2025, 5:28 IST
ಹೊಳೆಹೊನ್ನೂರಿನ ಭದ್ರಾನದಿಗೆ ನಿರ್ಮಾಸಿರುವ ಸೇತುವೆ ಕಾಮಗಾರಿಗೆ ಸುಣ್ಣಬಣ್ಣ ಬಳಿಯುತ್ತಿರುವುದು.
ಹೊಳೆಹೊನ್ನೂರಿನ ಭದ್ರಾನದಿಗೆ ನಿರ್ಮಾಸಿರುವ ಸೇತುವೆ ಕಾಮಗಾರಿಗೆ ಸುಣ್ಣಬಣ್ಣ ಬಳಿಯುತ್ತಿರುವುದು.   

ಹೊಳೆಹೊನ್ನೂರು: ಇಲ್ಲಿನ ಭದ್ರಾ ನದಿಗೆ ನಿರ್ಮಿಸುತ್ತಿರುವ ಹೊಸ ಸೇತುವೆ ಕಾಮಗಾರಿ ಮುಕ್ತಾಯಗೊಂಡಿದೆ. ಪ್ರಾಯೋಗಿಕವಾಗಿ ವಾಹನ ಸಂಚಾರ ಕೂಡ ನಡೆಸಲಾಗಿದೆ. ಮುಂದಿನ 15 ದಿನಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.

ನಾಲ್ಕು ವರ್ಷಗಳಿಂದ ಸೇತುವೆ ಕಾಮಗಾರಿ ನಡೆದಿದೆ. ಈಗಾಗಲೇ ಬಣ್ಣಸುಣ್ಣ ಲೇಪಿಸಲಾಗುತ್ತಿದೆ. ಸೇತುವೆ ಅಕ್ಕಪಕ್ಕದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಮುಗಿದಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡುವ ಕಾರ್ಯ ನಡೆದಿದೆ. ರಸ್ತೆಯ ಮಧ್ಯೆ ಡಿವೈಡರ್ ಕಾಮಗಾರಿಯೂ ಚಾಲ್ತಿಯಲ್ಲಿದೆ. 

ಟ್ರಾಫಿಕ್ ಜಾಮ್: ಪಟ್ಟಣದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಹಳೆಯ ಸೇತುವೆ ಕಿರಿದಾಗಿರುವುದರಿಂದ ಚಿತ್ರದುರ್ಗ ಹಾಗೂ ದಾವಣಗೆರೆಗೆ ಸಂಚರಿಸುವ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹೆಚ್ಚು ಪರದಾಡುವ ಸ್ಥಿತಿ ಇತ್ತು. 

ADVERTISEMENT

ಕಿರಿದಾದ ಸೇತುವೆ: ಹಳೆಯ ಸೇತುವೆ ಅಂದಾಜು 100 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. ಪಟ್ಟಣದಲ್ಲಿ ಈಗಾಗಲೇ ಬೈಪಾಸ್ ನಿರ್ಮಾಣವಾಗಿದೆ.  ಭದ್ರಾ ನದಿಗೆ ಒನ್ ವೇ ರೂಪದಲ್ಲಿ ಎರಡು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಯಾವುದೇ ಟ್ರಾಫಿಕ್ ಕಿರಿಕಿರಿ ಉಂಟಾಗುವುದಿಲ್ಲ ಎಂಬುದು ಜನರ ಭಾವನೆ.

ಫ್ಲೈ ಓವರ್ ನಿರ್ಮಾಣಕ್ಕೆ ಆಗ್ರಹ: ಪಟ್ಟಣದಿಂದ ಭದ್ರಾವತಿಗೆ ಹೋಗುವ ರಸ್ತೆ ಕಾಮಗಾರಿ ನಡೆಯುತ್ತಿದೆ. ಇಲ್ಲಿ ದಿನನಿತ್ಯ ಸಾಕಷ್ಟು ವಾಹನ ಸಂಚಾರವಿದೆ. ಬೈಪಾಸ್ ಕೂಡಾ ಹಾದು ಹೋಗಿದ್ದು, ಅದು ಒನ್ ವೇ ಆಗಿರುವುದರಿಂದ ವಾಹನಗಳ ವೇಗ ಹೆಚ್ಚಿರುತ್ತದೆ. ಇದು ಅಪಘಾತಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ ಫ್ಲೈ ಓವರ್ ನಿರ್ಮಾಣ ಮಾಡಬೇಕೆಂಬುದು ಸಾರ್ವಜನಿಕ ಆಗ್ರಹ.

10 ರಿಂದ 15 ದಿನಗಳಲ್ಲಿ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಲಿದೆ. ನಂತರ ಎನ್.ಎಚ್.ಗೆ ಹಸ್ತಾಂತರಿಸಲಾಗುವುದು
ನಾಗೇಂದ್ರಪ್ಪ ಕಾಶಪ್ಪನವರ ಎಂಜಿನಿಯರ್
ಹೊಳೆಹೊನ್ನೂರು ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರ ಶ್ರಮದಿಂದ ಸೇತುವೆ ಸಾಕಾರಗೊಂಡಿದೆ
ಬಿ.ವೈ. ರಾಘವೇಂದ್ರ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.