ADVERTISEMENT

ಹೊಳೆಹೊನ್ನೂರು: ಭದ್ರಾ ನದಿಯಿಂದ ಮರಳು ಸಾಗಣೆ ಅಕ್ರಮ ಅವ್ಯಾಹತ

ದಂಧೆಕೋರರ ವಿರುದ್ಧ ಕಾನೂನು ಕ್ರಮಕ್ಕೆ ಸ್ಥಳೀಯರ ಆಗ್ರಹ

ಕುಮಾರ್ ಅಗಸನಹಳ್ಳಿ
Published 13 ಡಿಸೆಂಬರ್ 2024, 6:08 IST
Last Updated 13 ಡಿಸೆಂಬರ್ 2024, 6:08 IST
ಹೊಳೆಹೊನ್ನೂರು ಸಮೀಪದ ಭದ್ರಾ ನದಿಯಲ್ಲಿ ಜೆಸಿಬಿ ಹಾಗೂ ಲಾರಿಗಳ ಮುಖಾಂತರ ಮರಳು ತೋಡುತ್ತಿರುವುದು
ಹೊಳೆಹೊನ್ನೂರು ಸಮೀಪದ ಭದ್ರಾ ನದಿಯಲ್ಲಿ ಜೆಸಿಬಿ ಹಾಗೂ ಲಾರಿಗಳ ಮುಖಾಂತರ ಮರಳು ತೋಡುತ್ತಿರುವುದು   

ಹೊಳೆಹೊನ್ನೂರು: ಮಳೆ ಸಂಪೂರ್ಣ ತಗ್ಗಿರುವ ಹಿನ್ನೆಲೆಯಲ್ಲಿ ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಮರಳು ತೆಗೆಯಲು ಜೆಸಿಬಿ, ಲಾರಿ ಹಾಗೂ ಟ್ರ್ಯಾಕ್ಟರ್‌ಗಳು ನದಿಗೆ ಲಗ್ಗೆ ಇಟ್ಟಿವೆ.

ಸಮೀಪದ ಮಲ್ಲಾಪುರ ಹಾಗೂ ಕಾಟಿಕೆರೆ ಗ್ರಾಮಗಳ ನಡುವಿನ ಸಕ್ಕರೆಬೈಲು ಬಳಿ ಜೆಸಿಬಿ ಹಾಗೂ ಲಾರಿಗಳು ರಾತ್ರಿ ವೇಳೆ ನದಿಗೆ ಇಳಿದು, ಮರಳನ್ನು ಅಕ್ರಮವಾಗಿ ತೆಗೆದು ಸಾಗಿಸುತ್ತಿವೆ. ಬೆಳಗಾಗುವುದರಲ್ಲಿ ಕಾರ್ಯಾಚರಣೆ ಮುಗಿದಿರುತ್ತದೆ. ಹಗಲಿನಲ್ಲಿ ಯಾರೂ ಸ್ಥಳದಲ್ಲಿ ಇರುವುದಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪ್ರತಿ ರಾತ್ರಿ ಅಂದಾಜು 30ರಿಂದ 50 ಲಾರಿ ಲೋಡ್ ಮರಳು ಸಾಗಿಸಲಾಗುತ್ತಿದೆ. ಕತ್ತಲಲ್ಲಿ ನಡೆಯುವ ಈ ಕಾರ್ಯಾಚರಣೆ ಕಾರ್ಖಾನೆಯಂತೆ ಗೋಚರಿಸುತ್ತದೆ. ಅಷ್ಟೊಂದು ಬೆಳಕು ನದಿಯಲ್ಲಿ ಆವರಿಸಿರುತ್ತದೆ. ನದಿಯ ದಡದಲ್ಲಿ ಲಾರಿ, ಜೆಸಿಬಿ, ಹಾಗೂ ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ರಸ್ತೆ ಮಾಡಿಕೊಂಡಿದ್ದು, ಇದಕ್ಕೆ ಜಮೀನು ನೀಡಿರುವ ಕೆಲವು ರೈತರಿಗೆ ಐದು ವರ್ಷಕ್ಕೆ ₹ 25 ಲಕ್ಷ ಹಣ ನೀಡಲಾಗಿದೆ. ನದಿಯಲ್ಲಿಯೇ ದೊಡ್ಡ ಜಾಲರಿ ಅಳವಡಿಸಿ, ಅಲ್ಲಿಯೇ ಮರಳನ್ನು ಶುದ್ಧೀಕರಿಸಿ ರವಾನೆ ಮಾಡಲಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯರು ಹೇಳುತ್ತಾರೆ.

ADVERTISEMENT

ಈ ಬಾರಿ ಮಳೆ ಚೆನ್ನಾಗಿ ಬಂದಿದ್ದರಿಂದ ನದಿಯಲ್ಲಿ ಸಾಕಷ್ಟು ಮರಳು ಸಂಗ್ರಹವಾಗಿದೆ. ಸುಮಾರು 10ರಿಂದ 15 ಅಡಿ ಆಳದವರೆಗೂ ಮರಳನ್ನು ತೆಗೆಯಲಾಗುತ್ತಿದೆ. ನದಿಯ ತುಂಬೆಲ್ಲಾ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ಜನ, ಜಾನುವಾರುಗಳ ಪ್ರಾಣಕ್ಕೆ ಕಂಟಕ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಜಿಲ್ಲಾಡಳಿತವು ಮರಳು ತೆಗೆಯಲು ಟೆಂಡರ್ ಕರೆದಿತ್ತು. ಇದರಿಂದ ಎಚ್ಚೆತ್ತ ದಂಧೆಕೋರರು ಈ ಬಾರಿ ಜಿಲ್ಲಾಡಳಿತ ಟೆಂಡರ್ ಕರೆಯುವ ಮುನ್ನವೇ ನದಿಯಲ್ಲಿರುವ ಮರಳನ್ನು ಸಾಗಿಸುತ್ತಿದ್ದು, ಈಗಾಗಲೇ ಸಾಕಷ್ಟು ಮರಳನ್ನು ಖಾಲಿ ಮಾಡಲಾಗಿದೆ ಎಂಬುದು ಅವರ ವಿವರಣೆ.

ಸಿದ್ಲಿಪುರ, ಆನವೇರಿ ಗ್ರಾಮಗಳಲ್ಲಿಯೂ ಪ್ರಭಾವಿಗಳಿಂದಲೇ ಮರಳು ದಂಧೆ ನಡೆಯುತ್ತಿದೆ. ಈ ಭಾಗದಲ್ಲಿ ತುಂಗಭದ್ರಾ ನದಿ ಒಟ್ಟಾಗಿ ಹರಿಯುತ್ತಿರುವುದರಿಂದ ನೀರಿನ ಪ್ರಮಾಣ ಹೆಚ್ಚಿರುತ್ತದೆ. ಹೀಗಾಗಿ ಬೇರೆ ರಾಜ್ಯಗಳಿಂದ ಮುಳುಗು ತಜ್ಞರನ್ನು ಕರೆಸಲಾಗಿದೆ. ಅವರಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಟ್ರ್ಯಾಕ್ಟರ್ ಲೋಡ್‌ವೊಂದಕ್ಕೆ ₹ 7,000ದಿಂದ ₹ 10,000, ಲಾರಿ ಲೋಡ್‌ವೊಂದಕ್ಕೆ ₹ 22,000ದಿಂದ ₹ 30,000 ವರೆಗೂ ಮರಳು ಮಾರಾಟ ಮಾಡಲಾಗುತ್ತಿದೆ. ದಂಧೆಕೋರರಿಗೆ ಕಡಿವಾಣ ಹಾಕುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿರುವ ನಷ್ಟ ತಪ್ಪಿಸುವ ಅಗತ್ಯವಿದೆ ಎಂಬುದು ಅವರ ಆಗ್ರಹ.

ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರೇ ಟೆಂಡರ್ ರೂಪದಲ್ಲಿ ಟ್ರ್ಯಾಕ್ಟರ್ ಲೋಡ್‌ವೊಂದಕ್ಕೆ ₹ 2,000, ಲಾರಿ ಲೋಡ್‌ವೊಂದಕ್ಕೆ ₹ 8,000 ದರ ನಿಗದಿಪಡಿಸಿದ್ದು, ಹಣ ನೀಡಿದ ನಂತರ ವಾಹನವನ್ನು ಮುಂದಕ್ಕೆ ಬಿಡುತ್ತಿದ್ದಾರೆ. ಇದಕ್ಕಾಗಿ ವ್ಯಕ್ತಿಯೊಬ್ಬರನ್ನು ನೇಮಿಸಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇನ್ನೆರಡು ತಿಂಗಳಲ್ಲಿ ಮರಳು ಖಾಲಿಯಾಗಲಿದೆ. ಆದಷ್ಟು ಬೇಗ ಟೆಂಡರ್ ಕರೆದು, ಜನರಿಗೆ ಕೈಗೆಟಕುವ ದರದಲ್ಲಿ ಮರಳು ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಹೊಳೆಹೊನ್ನೂರಿನ ಸಮೀಪದ ಭದ್ರಾ ನದಿಯಲ್ಲಿ ಮರಳು ತೆಗೆದಿರುವುದರಿಂದ ಗುಂಡಿ ನಿರ್ಮಾಣವಾಗಿದೆ
ಭದ್ರಾ ನದಿಯಲ್ಲಿ ಮರಳು ತೆಗೆಯುತ್ತಿರುವ ಬಗ್ಗೆ ಕಳೆದ ವಾರ ಗಮನಕ್ಕೆ ಬಂದಿತ್ತು. ಸ್ಥಳಕ್ಕೆ ತಹಶೀಲ್ದಾರ್ ಕಳುಹಿಸಿದ್ದೆನು. ಈಗ ಮರಳು ತೆಗೆಯುತ್ತಿದ್ದರೆ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು
ಸಿದ್ಧಲಿಂಗರಡ್ಡಿ ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.