ADVERTISEMENT

ಶಿವಮೊಗ್ಗ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ -ನಾರಾಯಣಗೌಡ ಭರವಸೆ

ಗಣರಾಜ್ಯೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 6:37 IST
Last Updated 27 ಜನವರಿ 2022, 6:37 IST
ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ತಂಡಗಳು ನಡೆಸಿದ ಪಥಸಂಚಲನ ಗಮನ ಸೆಳೆಯಿತು.
ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ತಂಡಗಳು ನಡೆಸಿದ ಪಥಸಂಚಲನ ಗಮನ ಸೆಳೆಯಿತು.   

ಶಿವಮೊಗ್ಗ: ‘ಸಂಪರ್ಕ ರಸ್ತೆಗಳು, ಸೇತುವೆಗಳು, ನೂತನ ರೈಲು ಮಾರ್ಗ ಸಂಪರ್ಕ, ಮೇಲ್ಸೇತುವೆಗಳು, ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸುವ ಪಣ ತೊಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಎಂದು ಹೇಳಿದರು.

ಜಿಲ್ಲಾಡಳಿತದಿಂದ ನಗರದ ಡಿಎಆರ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕೃಷಿ, ಯುವ ಸಬಲೀಕರಣ, ನೀರಾವರಿ ಇನ್ನಿತರ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಮೂಲಸೌಕರ್ಯಗಳನ್ನು ಉನ್ನತೀಕರಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ADVERTISEMENT

ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಅತ್ಯಾಧುನಿಕ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಕುಸ್ತಿ ಮತ್ತು ವಾಲಿಬಾಲ್ ಪಟುಗಳಿಗಾಗಿ ನಗರದಲ್ಲಿ ಹಾಸ್ಟೆಲ್‌ಗಳನ್ನು ಆರಂಭಿಸಲಾಗುತ್ತಿದ್ದು, ಇದರಿಂದಾಗಿ ಸ್ಥಳೀಯವಾಗಿ ಯುವ ಕ್ರೀಡಾಪಟುಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ರೈತ ಕುಟುಂಬದ ವಿದ್ಯಾರ್ಥಿಗಳಿಗಾಗಿ ರೈತ ವಿದ್ಯಾನಿಧಿ ಯೋಜನೆ, 58ಕ್ಕೂ ಅಧಿಕ ನಾಗರಿಕ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ ಜನಸೇವಕ ಎಂಬ ವಿನೂತನ ಕಾರ್ಯಕ್ರಮ, 800 ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ತರುವ ಗ್ರಾಮ-ಒನ್ ಎಂಬ ವಿಶೇಷ ಯೋಜನೆ, 33 ಇಲಾಖೆಗಳ ವಿವಿಧ ಸೇವೆಗಳಿಗೆ ಸಂಬಂಧಿಸಿದಂತೆ ಕುಂದು–ಕೊರತೆಗಳ ನಿವಾರಣೆಗೆ ಜನಸ್ಪಂದನ ವ್ಯವಸ್ಥೆ, ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯಗಳ ಉನ್ನತೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯ 268 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 257 ಕಸ ಸಂಗ್ರಹಿಸುವ ಟಿಪ್ಪರ್‌ಗಳನ್ನು ಒದಗಿಸಲಾಗಿದೆ. ಪ್ರಸ್ತುತ ಹಣಕಾಸು ಸಾಲಿನಲ್ಲಿ ಜಿಲ್ಲೆಯಲ್ಲಿ 4,409 ಶೌಚಾಲಯಗಳನ್ನು ಪೂರ್ಣಗೊಳಿಸಲಾಗಿದ್ದು, ಇದಕ್ಕಾಗಿ ₹ 5.29 ಕೋಟಿ ವೆಚ್ಚ ಮಾಡಲಾಗಿದೆ. ಶಿವಮೊಗ್ಗ ನಗರದಲ್ಲಿ ₹ 104 ಕೋಟಿ ವೆಚ್ಚದಲ್ಲಿ ನಿರಂತರ ಕುಡಿಯುವ ನೀರು ಪೂರೈಸುವ ಕಲ್ಪಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ 32,900 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಶೇ 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಒಂದು ವರ್ಷದೊಳಗೆ ಶಿವಮೊಗ್ಗ ನಗರದ 55,800 ಮನೆಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲಾಗುವುದು. ಮಹಾನಗರಪಾಲಿಕೆ ಹೊರವಲಯದಲ್ಲಿರುವ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸುವ ₹ 96.50 ಕೋಟಿ ವೆಚ್ಚದ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಂಸದ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಎಸ್‌.ರುದ್ರೇಗೌಡ, ಡಿ.ಎಸ್.ಅರುಣ್, ಕೆಎಸ್‌ಎಸ್‌ಐಡಿಸಿ ಉಪಾಧ್ಯಕ್ಷ ಎಸ್. ದತ್ತಾತ್ರಿ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಇದ್ದರು.

ಗಮನ ಸೆಳೆದ ಪಥಸಂಚಲನ:ಗಣರಾಜ್ಯೋತ್ಸವದಲ್ಲಿ ಪೊಲೀಸ್ ಪಡೆ ಸೇರಿ ವಿವಿಧ ತಂಡಗಳು ನಡೆಸಿದ ಪಥ ಸಂಚಲನ ಗಮನ ಸೆಳೆಯಿತು.

ಪಥ ಸಂಚಲನದಲ್ಲಿ ಕೆಎಸ್‍ಆರ್‌ಪಿ ಸಿವಿಲ್ ಪೊಲೀಸ್, ಮಹಿಳಾ ಪೊಲೀಸ್, ಗೃಹ ರಕ್ಷಕ ದಳ, ಅರಣ್ಯ ರಕ್ಷಕ ದಳ, ಸ್ಕೌಟ್ಸ್ ಅಂಡ್ ಗೈಡ್ಸ್ ಸೇರಿ 8ಕ್ಕೂ ಹೆಚ್ಚು ತುಕಡಿಗಳು ಭಾಗವಹಿಸಿದ್ದವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕರು, ವಿವಿಧ ಶಾಲಾ ಮಕ್ಕಳು ಗಣರಾಜ್ಯೋತ್ಸವ ವೀಕ್ಷಿಸಲು ಮೈದಾನದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.