ADVERTISEMENT

ಯೇಸುಪ್ರಕಾಶ್ ನೆನಪಿನ ನಾಟಕೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 15:41 IST
Last Updated 11 ಏಪ್ರಿಲ್ 2025, 15:41 IST
ಹೊಸನಗರ ತಾಲ್ಲೂಕು ದೊಂಬೆಕೊಪ್ಪದ ಸಾರ ಸಂಸ್ಥೆಯಲ್ಲಿ ನಡೆದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ನಾರಾಯಣ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು
ಹೊಸನಗರ ತಾಲ್ಲೂಕು ದೊಂಬೆಕೊಪ್ಪದ ಸಾರ ಸಂಸ್ಥೆಯಲ್ಲಿ ನಡೆದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ನಾರಾಯಣ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು   

ಹೊಸನಗರ: ‘ನಾವಿಂದು ಪರಿಸರ ಜಾಗೃತಿಯ ಜೊತೆಜೊತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಕುರಿತು ಅವಲೋಕಿಸಬೇಕಿದೆ. ಪ್ರಕೃತಿ ತೋರಿದ ಹಾದಿಯಲ್ಲಿ ಸಾಗಬೇಕು. ಯಾವತ್ತೂ ಪರಿಸರಕ್ಕೆ ವಿರುದ್ಧವಾಗಿ ನಡೆದರೆ ಭವಿಷ್ಯದಲ್ಲಿ ಭಾರೀ ಗಂಡಾತರ ಕಾದಿದೆ‌’ ಎಂದು ಪ್ರಕಾಶ್ ಬೆಳವಾಡಿ ಎಚ್ಚರಿಸಿದರು.

ಹೆಗ್ಗೋಡಿನ ಕೆ.ವಿ. ಸುಬ್ಬಣ್ಣ ರಂಗ ಸಮೂಹ ಮತ್ತು ದೊಂಬೆಕೊಪ್ಪ ಸಾರ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಸಾರ ಸಂಸ್ಥೆಯಲ್ಲಿ ನಡೆದ ರಂಗಕರ್ಮಿ, ಚಲನಚಿತ್ರ ನಟ ದಿ. ಯೇಸುಪ್ರಕಾಶ್ ಅವರ ನೆನಪು ಕುರಿತ ನಾಟಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಯೇಸುಪ್ರಕಾಶ್ ಅವರು ಕೆ.ವಿ ಸುಬ್ಬಣ್ಣ ರಂಗ ಸಮೂಹ ಮತ್ತು ಸಾರ ಸಂಸ್ಥೆಯ ಒಡನಾಡಿಯಾಗಿದ್ದರು. ಸಾಮಾಜಿಕ, ಪರಿಸರ ಕುರಿತಂತೆ ಹಲವು ಸಮಾಜಪರ ಕಾರ್ಯಗಳಿಗೆ ಕೈ ಜೋಡಿಸಿದ್ದರು. ಅನೇಕ ನಾಟಕ, ಸಿನಿಮಾಗಳಲ್ಲಿ ಅಭಿನಯದ ಜೊತೆಗೆ, ತನ್ನ ಸುತ್ತಲ ಸಂಕಷ್ಟದಲ್ಲಿದ್ದ ಜೀವಗಳಿಗೆ ಸಹಾಯ ನೀಡುವ ಮೂಲಕ ಸಮಾಜಮುಖಿ ಮನೋಭಾವ ಹೊಂದಿದ್ದರು’ ಎಂದು ಸಂಸ್ಥೆಯ ಸದಸ್ಯ ಪ್ರಸನ್ನ ಹುಣಸೆಕೊಪ್ಪ ಹೇಳಿದರು.

ADVERTISEMENT

ಹಿರಿಯ ರಂಗಕರ್ಮಿ ಪುರಪ್ಪೆಮನೆ ನಾರಾಯಣ ಭಟ್ ಮತ್ತು ನಿರ್ಮಲ ದಂಪತಿಯನ್ನು ಸನ್ಮಾನಿಸಲಾಯಿತು. ಮಂಚಿಕೆರೆ ಕಲಾತಂಡದಿಂದ ‘ಕಾಲ ಚಕ್ರ’ ನಾಟಕ ಪ್ರದರ್ಶನಗೊಂಡಿತು.

ಸಾರ ಕೇಂದ್ರದ ಅಧ್ಯಕ್ಷ ಗುರುಪಾದಪ್ಪ ಗೌಡ, ಸಂಸ್ಥಾಪಕ ಅರುಣ್ ಕುಮಾರ್, ಕೆ.ವಿ ಸುಬ್ಬಣ್ಣ ರಂಗ ಸಮೂಹದ ಅಧ್ಯಕ್ಷ ಗುರುಮೂರ್ತಿ ವರದಾಮೂಲ ಉಪಸ್ಥಿತರಿದ್ದರು. ರತ್ನಾಕರ್ ಸಿ. ಕುನುಗೋಡು ನಿರೂಪಿಸಿದರು. ಪದ್ಮಶ್ರೀ ಹಾರೆಗೊಪ್ಪ ಸ್ವಾಗತಿಸಿದರು. ಗಣಪತಿ ಹೆಗಡೆ ನಂದೀತಳೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.