ADVERTISEMENT

ಶಿವಮೊಗ್ಗದಲ್ಲಿ ಮನೆಗಳವು: 24 ಗಂಟೆಯಲ್ಲಿ ಆರೋಪಿಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 5:45 IST
Last Updated 29 ಜನವರಿ 2023, 5:45 IST

ಶಿವಮೊಗ್ಗ: ಮನೆಯೊಳಗೆ ನುಗ್ಗಿ ₹ 1.09 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದಲ್ಲಿ ದೂರು ದಾಖಲಾದ 24 ಗಂಟೆಯಲ್ಲಿ ಇಬ್ಬರು ಕಳ್ಳರನ್ನು ಇಲ್ಲಿನ ವಿನೋಬನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ದಾವಣಗೆರೆಯ ಶ್ರೀರಾಮ ಬಡಾವಣೆಯ ಆಂಜನೇ ದೇವಸ್ಥಾನದ ಹತ್ತಿರದ ನಿವಾಸಿ ರಾಹುಲ್ ಎ.ಆರ್., ಶಿವಮೊಗ್ಗದ ಬೊಮ್ಮನಕಟ್ಟೆ ಬಿ ಬ್ಲಾಕ್ ಕ್ಯಾಂಪ್ ನಿವಾಸಿ ಗಣೇಶ ಹಾಲೇಶಪ್ಪ ಬಂಧಿತರು. ಆರೋಪಿಗಳಿಂದ ₹ 1,09,250 ಮೌಲ್ಯದ 30 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 100 ಗ್ರಾಂ ತೂಕದ ಬೆಳ್ಳಿಯ ಚೈನ್ ವಶಪಡಿಸಿಕೊಳ್ಳಲಾಗಿದೆ.

ಇಲ್ಲಿನ ಆಲ್ಕೊಳ ಗ್ರಾಮದ ವಾಸಿ ಮಾಣಿಕ್ಯಂ ಶುಕ್ರವಾರ ತಮ್ಮ ಮನೆಗೆ ಬೀಗ ಹಾಕಿ, ಬೀಗದ ಕೀ ಅನ್ನು ಮನೆಯ ಆವರಣದಲ್ಲಿನ ನೀರಿನ ಮೋಟಾರ್ ಕೆಳಗೆ ಇಟ್ಟು ಹೋಗಿದ್ದರು. ಅವರು ವಾಪಸ್ ಬರುವ ವೇಳೆಗೆ ಕಳ್ಳರು ಮನೆಯ ಬಾಗಿಲು ತೆರೆದು ಒಳಗೆ ಹೋಗಿ, ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣ, ಬೆಳ್ಳಿಯ ಚೈನು ಮತ್ತು ನಗದು ಹಣ ಕಳ್ಳತನ ಮಾಡಿದ್ದರು. ಈ ಬಗ್ಗೆ ಮಾಣಿಕ್ಯಂ ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ADVERTISEMENT

ಬಹುಮಾನ ಘೋಷಣೆ: ಪ್ರಕರಣದಲ್ಲಿ ಕಾರ್ಯಪ್ರವೃತ್ತರಾಗಿ ಅರೋಪಿಗಳನ್ನು ಬಂಧಿಸಿದ ವಿನೋಬ ನಗರ ಠಾಣೆ ಇನ್‌ಸ್ಪೆಕ್ಟರ್ ಎನ್.ಎಸ್. ರವಿ, ಎಎಸ್ಐ ರಮೇಶ್ ಮತ್ತು ಸಿಬ್ಬಂದಿ ಕೆ.ಆರ್‌.ರಾಜು ಮತ್ತು ಚಂದ್ರಾ ನಾಯ್ಕ್ ಅವರನ್ನೊಳಗೊಂಡ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.