ADVERTISEMENT

ಹುಲಿಕಲ್‌ ಘಾಟಿ: ಕೊನೆಗೂ ಬಾರದ 108; ರಸ್ತೆಯಲ್ಲೇ ನರಳಿದ ಜೀವ

ಎರಡು ಗಂಟೆ ಕಾಲ ವಾಹನ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 3:07 IST
Last Updated 12 ನವೆಂಬರ್ 2022, 3:07 IST
   

ಹೊಸನಗರ: ಹುಲಿಕಲ್ ದೇವಸ್ಥಾನದ ಬಳಿ ಗುರುವಾರ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೂವರು ಪ್ರಾಣಾಪಾಯದಲ್ಲಿದ್ದರೂ ಅವರ ಸಹಾಯಕ್ಕೆ 108 ಆಂಬುಲೆನ್ಸ್‌ನ ನೆರವು ಸಿಗಲೇ ಇಲ್ಲ.

ರಾತ್ರಿ 9.35ಕ್ಕೆ ಅಪಘಾತ ನಡೆದಿದ್ದು, ರಸ್ತೆ ಮಧ್ಯೆದಲ್ಲೇ ಮೂವರ ದೇಹದ ಮೇಲೆ ಲಾರಿ ಹರಿದು ಇಬ್ಬರ ತಲೆ ಛಿದ್ರ ಛಿದ್ರವಾಗಿ ಬಿದ್ದಾಗ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಗ್ರಾಮಸ್ಥರು ಮುಂದಾದರೂ 108 ವಾಹನ ಬರಲೇ ಇಲ್ಲ. ಗ್ರಾಮಸ್ಥರು ಹತ್ತಾರು ಬಾರಿ ಫೋನ್ ಮಾಡಿದರು. ಯಾವುದೇ ಸ್ಪಂದನೆ ಲಭ್ಯವಾಗಲಿಲ್ಲ. ನಗರದಿಂದ 108 ವಾಹನ ಬರಬೇಕಿದ್ದು ಅದು ಸರಿ ಇಲ್ಲ ಎಂಬ ಉತ್ತರ ಬಂದಿತು.

ಕೊನೆಗೆ ನಗರದ ಖಾಸಗಿ ‘ಅಪತ್ಪಾಂಧವ’ ಆಂಬುಲೆನ್ಸ್‌ ತರಿಸಿ ಗಾಯಾಳು ಶಾಲಿನಿಯನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಕೆಪಿಸಿ ಆಂಬುಲೆನ್ಸ್‌ನಲ್ಲಿ ಮೃತ ರವಿ ಮತ್ತು ಶಿಶಿರ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಷ್ಟರಲ್ಲೇ ಸುತ್ತಲಿನ ಜನರು ಸೇರಿದ್ದರು. ರಸ್ತೆ ಮೇಲೆ ಶವಗಳು ಬಿದ್ದಿದ್ದ ಕಾರಣ ವಾಹನ ಸಂಚಾರ ಅಸಾಧ್ಯವಾಗಿತ್ತು. ಸುಮಾರು ಎರಡು ತಾಸು ವಾಹನ ನಿಲುಗಡೆ ಆಗಿತ್ತು. 400ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ನಿಂತಿದ್ದು ಪ್ರಯಾಣಿಕರು ಪರದಾಡಬೇಕಾಯಿತು.

ADVERTISEMENT

ಬದುಕಿಗೆ ಆಶ್ರಯವಾಗಬೇಕಿದ್ದ ಮಗ: ಅಪಘಾತದಲ್ಲಿ ಮೃತಪಟ್ಟ ಶಿಶಿರ ಕಂಪನಕೈ ಗ್ರಾಮದ ಇಂದಿರಮ್ಮ ಅವರ ಒಬ್ಬನೇ ಮಗ. ನಾಲ್ಕನೆ ತರಗತಿ ಓದುತ್ತಿದ್ದ ಶಿಶಿರ ಗುರುವಾರ ಸಂಜೆ ಹುಲಿಕಲ್ ಲಕ್ಷ್ಮಿನಾರಾಯಣ ದೇವಸ್ಥಾನಕ್ಕೆ ಹೋಗಿದ್ದ. ವಾಪಸ್ ಬರುವಾಗ ಚಿಕ್ಕಪ್ಪನ ಬೈಕ್ ಮೇಲೆ ಬಂದಿದ್ದ. ಜವರಾಯನಾಗಿ ಬಂದ ಲಾರಿ ಹರಿದು ಸ್ಥಳದಲ್ಲೇ ಚಿಕ್ಕಪ್ಪನ ಜತೆ ಸಾವು ಕಂಡಿದ್ದಾನೆ. ತಾಯಿ ಇಂದಿರಮ್ಮನಿಗೆ ಮಗನ ಸಾವು ಭರಿಸಲಾಗದ ದುಃಖ ತಂದೊಡ್ಡಿದೆ. ಕಳೆದ ವರ್ಷ ಮಗಳು ಉಯ್ಯಾಲೆ ಆಡುವಾಗ ಆಕಸ್ಮಿಕವಾಗಿ ಹಗ್ಗಕ್ಕೆ ಸಿಲುಕಿ ಧಾರುಣ ಸಾವು ಕಂಡಿದ್ದಳು. ಈ ಹಿಂದೆ
ಪತಿ ಶಂಕರಪ್ಪಗೌಡರು ಅನಾರೋಗ್ಯದಿಂದ ಸಾವು ಕಂಡಿದ್ದರು. ಬದುಕಿಗೆ ಆಶ್ರಯವಾಗಿದ್ದ ಶಿಶಿರ ನಡು ರಸ್ತೆಯಲ್ಲೇ ಬಾರದ ಲೋಕಕ್ಕೆ ಹೋಗಿದ್ದಾನೆ.

ರವಿ ಮನೆಯಲ್ಲಿ ಕತ್ತಲೆ ಆವರಿಸಿದೆ: ಮೃತ ರವಿ ಮತ್ತು ಶಿಶಿರ ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ನಡೆಯಿತು. ರವಿ ಸಹೋದರ ನಾಗಪ್ಪಗೌಡ, ರವಿಯ ಇಬ್ಬರು ಗಂಡು ಮಕ್ಕಳ ರೋಧನ ಹೇಳತೀರದಾಗಿತ್ತು.

***

ರಸ್ತೆ ಅಪಘಾತ: ಬಾಲಕ ಸೇರಿ ಇಬ್ಬರ ಸಾವು

ಹೊಸನಗರ: ಗುರುವಾರ ರಾತ್ರಿ ಹುಲಿಕಲ್ ದೇವಸ್ಥಾನ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಲೆ ಮೇಲೆ ಲಾರಿ ಹರಿದು ಬಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಸಮೀಪದ ಕಂಪದ ಕೈ‌ ನಿವಾಸಿ ರವಿ (47) ಮತ್ತು ಅವರ ಅಣ್ಣನ ಮಗ ಶಿಶಿರ (12) ಮೃತರು. ಘಟನೆಯಲ್ಲಿ ರವಿ ಅವರ ಪತ್ನಿ ಶಾಲಿನಿ (40) ಅವರ ಒಂದು ಕಾಲು ತುಂಡಾಗಿದೆ. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರೂ ಬೈಕ್‌ನಲ್ಲಿ ಹುಲಿಕಲ್ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಮುಗಿಸಿಕೊಂಡು ವಾಪಸಾಗುತ್ತಿದ್ದರು. ಈ ವೇಳೆ ಅಪಘಾತವಾಗಿದೆ.

ತಲೆಯ ಮೇಲೆ ಹರಿದ ಲಾರಿ: ಹುಲಿಕಲ್ ದೇವಸ್ಥಾನದಿಂದ ಬೈಕ್‌ನಲ್ಲಿ ಮಾಸ್ತಿಕಟ್ಟೆ ಕಡೆ ವಾಪಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಬೈಕ್ ಪಲ್ಟಿಯಾಗಿ ಮೂವರೂ ಕೆಳಗೆ ಬಿದ್ದಿದ್ದಾರೆ. ಕುಂದಾಪುರ ಕಡೆಯಿಂದ ಮಾಸ್ತಿಕಟ್ಟೆ ಕಡೆ ಬರುತ್ತಿದ್ದ ಮತ್ತೊಂದು ಲಾರಿ‌ ಮೂವರ ಮೇಲೆ ಹರಿದಿದೆ. ರವಿ ಮತ್ತು ಶಿಶಿರ ತಲೆ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತ ಆಗುತ್ತಿದ್ದಂತೆ ಚಾಲಕರು ಲಾರಿ ನಿಲ್ಲಿಸದೇ ಪರಾರಿ ಆಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

***

ಸಮಯಕ್ಕೆ ಸಿಗದ 108

ಜನರಿಗೆ ಸಂಕಷ್ಟ ಎದುರಾದಾಗ ಆರೋಗ್ಯ ಇಲಾಖೆಯ 108 ಆಂಬುಲೆನ್ಸ್‌ ಸಹಾಯಕ್ಕೆ ಬರಬೇಕಿದೆ. ಆದರೆ ಅದು ಬಾರದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣವೇ 108 ವಾಹನ ಬಂದಿದ್ದರೆ ಗಾಯಾಳುವನ್ನು ಬೇಗ ಆಸ್ಪತ್ರೆಗೆ ಸಾಗಿಸಬಹುದಿತ್ತು. ಅಲ್ಲದೆ ರಸ್ತೆ ತೆರವು ಮಾಡಬಹುದಿತ್ತು ಎನ್ನುತ್ತಾರೆ ಸ್ಥಳೀಯರಾದ ಅನಿಲ್ ಗೌಡ.

***

108 ಸಮನ್ವಯಕಾರರ ಕೇಳುವೆ: ಡಿಎಚ್‌ಒ

ಹುಲಿಕಲ್ ಘಾಟಿಯ ಸುತ್ತಲಿನ ಪ್ರದೇಶಗಳಲ್ಲಿ ಮೂರು 108 ಆಂಬುಲೆನ್ಸ್ ವಾಹನಗಳು ಇವೆ. ಆದರೆ ಅಪಘಾತದ ನಂತರದ ಕರೆಗೆ ಏಕೆ ಸ್ಪಂದಿಸಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಈ ವಿಚಾರ ಈಗ ನನ್ನ ಗಮನಕ್ಕೆ ಬಂದಿದೆ. 108 ವಾಹನದ ಜಿಲ್ಲಾ ಸಮನ್ವಯಕಾರರ ಬಳಿ ಈ ಬಗ್ಗೆ ವಿವರಣೆ ಕೇಳುವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.